ಬೆಳಗಾವಿಯಲ್ಲಿ ಗುರುವಾರ ಬಸವ ಸಂಸ್ಕೃತಿ ಅಭಿಯಾನ…

ಬೆಳಗಾವಿಯಲ್ಲಿ ಗುರುವಾರ ಬಸವ ಸಂಸ್ಕೃತಿ ಅಭಿಯಾನ…

ಬಸವತತ್ವ ಹಾಗೂ ಶರಣ ಸಂಸ್ಕೃತಿಯ ಜಾಗೃತಿಗಾಗಿ ಈ ಅಭಿಯಾನ..

ಅಕ್ಟೋಬರ್ 5ರ ಸಮಾರೋಪ ಸಮಾರಂಭದಲ್ಲಿ ಸರ್ಕಾರಕ್ಕೆ ಮಹತ್ವದ ಮನವಿ ಸಲ್ಲಿಸುತ್ತೇವೆ.

ಬಸವರಾಜ ರೊಟ್ಟಿ, ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ..

ಬೆಳಗಾವಿ : ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಜನೆವರಿ 2024 ರಂದು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಹಾಗೂ ಬಸವತತ್ವ ಹಾಗೂ ಶರಣ ಸಂಸ್ಕೃತಿಯ ಜಾಗೃತಿಗಾಗಿ ಇದೇ ಗುರುವಾರ ಬೆಳಗಾವಿಯಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಬಸವರಾಜ ರೊಟ್ಟಿ, ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿ ಇವರು ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ ಮಠಾಧೀಶರು, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಸೇವಾ ಸಮಿತಿ, ಲಿಂಗಾಯತ ಸಂಘಟನೆ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಬೆಳಗಾವಿಯಲ್ಲಿ ಈ ವಿಶೇಷ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

ಸಪ್ಟೆಂಬರ್ 1ರಿಂದ ಅಕ್ಟೋಬರ್ 31ರವರೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ದಿನ ಈ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ರಾಜ್ಯಮಟ್ಟದಲ್ಲಿ ಮೊದಲೇ ಮಾಡಲಾಗಿದ್ದು, ಅದರ ಪ್ರಯುಕ್ತ ಬಸವಣ್ಣನವರ ಜನ್ಮ ಸ್ಥಳವಾದ ಬಸವನ ಬಾಗೇವಾಡಿಯಲ್ಲಿ ಸೆಪ್ಟೆಂಬರ್ 1 ರಂದು ರಾಜ್ಯಮಟ್ಟದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, ಆ ಅಭಿಯಾನವನ್ನು ಸಮುದಾಯದ ಸಚಿವರುಗಳಾದ ಶಿವಾನಂದ ಪಾಟೀಲ್ ಹಾಗೂ ಎಂ ಬಿ ಪಾಟೀಲ ಅವರು ಆ ಅಭಿಯಾನವನ್ನು ಉದ್ಘಾಟನೆ ಮಾಡಿದ್ದರು.

ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಅಭಿಯಾನ ಇಟ್ಟುಕೊಂಡಿದ್ದು, ಈಗ ಇದೆ ಹನ್ನೊಂದನೇ ತಾರೀಖಿನ ಗುರುವಾರದಂದು ಬೆಳಗಾವಿಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದ ಎಲ್ಲಾ ಕಾರ್ಯಕ್ರಮಗಳು ಏಕರೂಪವಾಗಿ ನಡೆಯುತ್ತಿದ್ದು, ಅಂದು ಮುಂಜಾನೆ 10- 30ಕ್ಕೆ ಶಿವಬಸವ ನಗರದ ಡಾ ಶಿವಬಸವ ಮಹಾಸ್ವಾಮಿಗಳ ವೃತ್ತದಲ್ಲಿ “ಬಸವ ಸಂಸ್ಕೃತಿ ಅಭಿಯಾನಕ್ಕೆ” ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ.

11 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ಎಸ್ ಜಿಬಿಐಟಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಲಿದ್ದು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಸುಮಾರು ಸಾವಿರದಷ್ಟು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸಂವಾದದಲ್ಲಿ ಭಾಗಿಯಾಗಲಿದ್ದು ಇದರಲ್ಲಿ ಬಸವತತ್ವ ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಅರಿವನ್ನು ಮೂಡಿಸುವ ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಸಂವಾದ ಕಾರ್ಯಕ್ರಮವನ್ನು ಗದುಗಿನ ಜಗದ್ಗುರು ಪರಮ ಪೂಜ್ಯ ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಬಾಲ್ಕಿಯ ಬಸವಲಿಂಗ ಪಟ್ಟದ ದೇವರು ಸಾಣೇಹಳ್ಳಿಯ ಶಿವಾಚಾರ್ಯರು, ನೀಡಸೋಸಿಯ ಜಗದ್ಗುರುಗಳು ಅಲ್ಲಮಪ್ರಭು ಮಹಾಸ್ವಾಮಿಗಳು ನಡೆಸಿಕೊಡುವರು ಎಂದಿದ್ದಾರೆ.

ಮಧ್ಯಾಹ್ನದ ನಂತರ ಸಂಜೆ ನಾಲ್ಕು ಗಂಟೆಗೆ ಲಿಂಗರಾಜ್ ಕಾಲೇಜಿನಿಂದ ಬ್ರಹತ್ ಸಾಮರಸ್ಯ ನಡಿಗೆ ಎಂಬ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದು ಸುಮಾರು 8 ರಿಂದ 10 ಸಾವಿರ ಜನ ಭಾಗಿಯಾಗುವ ಕಾರ್ಯಕ್ರಮವಾಗಿದೆ, ಬಸವ ರಥ, ರಥದಲ್ಲಿ ಬಸವ ಪುತ್ಥಳಿ, ಹನ್ನೆರಡನೇ ಶತಮಾನದ ಕಾಯಕ ಶರಣರ ಮೂರ್ತಿಗಳು, ಐದು ರೂಪಕ ವಾಹನಗಳು, ಹತ್ತು ಜಾನಪದ ಕಲಾತಂಡಗಳು, ಸುಮಾರು 2500 ಜನ ಶರಣ ತಾಯಂದಿರು ವಚನ ಕಟ್ಟುಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಈ ಸಾಮರಸ್ಯ ನಡಿಗೆಯಲ್ಲಿ ಭಾಗಿಯಾಗುತ್ತಿದ್ದಾರೆ ಜೊತೆಗೆ 770 ಬಸವ ಧ್ವಜಗಳನ್ನು ಶರಣೆಯರು ತಮ್ಮ ಕೈಲಿ ಹಿಡಿದುಕೊಂಡು ಈ ಜಾಥಾದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಇನ್ನು ಸಂಜೆ 6ಗಂಟೆಗೆ ಬ್ರಹತ್ ಸಾರ್ವಜನಿಕರ ಸಮಾವೇಶ ಶಿವಬಸವ ನಗರದ ಆರ್ ಎನ್ ಶೆಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿದ್ದು, ಸುಮಾರು ಹತ್ತು ಸಾವಿರ ಜನ ಸೇರಬಹುದು, ಈ ಸಮಾವೇಶದಲ್ಲಿ ಸಿದ್ದಬಸವ ಮಹಾಸ್ವಾಮಿಗಳು ಹಾಗೂ ಶಿವಾನಂದ ಹೆಡೆ ಎಂಬ ಉಪನ್ಯಾಸಕರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ ಎಂದಿದ್ದಾರೆ. ಮೆರವಣಿಗೆ ಉದ್ಘಾಟನೆಯನ್ನು ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸಮಾವೇಶವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದಿದ್ದಾರೆ.

ಸಮಾವೇಶದ ನಂತರ ರಾತ್ರಿ ಎಂಟು ಗಂಟೆಗೆ ಸಾಣೇಹಳ್ಳಿಯ ಶಿವಸಂಚಾರ ಕಲಾ ತಂಡದಿಂದ “ಜಂಗಮದೆಡೆಗೆ” ಎಂಬ ನಾಟಕವು ಪ್ರಯೋಗವಾಗಿತ್ತದೆ ಎಂದ ಅವರು, ಅಕ್ಟೋಬರ್ 5 ರಂದು ಬೆಂಗಳೂರಿನಲ್ಲಿ ಈ ಅಭಿಯಾನದ ಬ್ರಹತ್ ಸಮಾರೋಪ ಸಮಾರಂಭ ಜರುಗಲಿದ್ದು ಆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು ಆ ವೇಳೆ ನಮ್ಮ ಸಮುದಾಯದ ಮುಖ್ಯ ಮನವಿಗಳನ್ನು ಸರ್ಕಾರದ ಮುಂದೆ ಪ್ರಸ್ಥಾಪಿಸುತ್ತೇವೆ ಎಂದಿದ್ದಾರೆ.

ನಾಡಿದ್ದು ಗುರುವಾರ ಬೆಳಗಾವಿಯಲ್ಲಿ ಜರುಗುವ ಈ ವಿಶೇಷ “ಬಸವ ಸಂಸ್ಕೃತಿ ಅಭಿಯಾನಕ್ಕೆ” ಜಿಲ್ಲೆಯ ಎಲ್ಲಾ ಶರಣ ಶರಣೆಯರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದು, ಈ ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಸಮುದಾಯದ ಪ್ರಮುಖರು ಭಾಗಿಯಾಗಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..