ಇಂದು ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ 164ನೇ ಜನ್ಮ ದಿನದ ಸಂಭ್ರಮ..
ವಿಶ್ವ ಇಂಜಿನಿಯರಗಳಿಗೆ ಸ್ಪೂರ್ತಿಯಾದ ಇವರು ಬೆಳಗಾವಿಯಲ್ಲೂ ಕೆಲಸ ಮಾಡಿದ್ದರು.
1907 ರಲ್ಲಿ ಬೆಳಗಾವಿ ಲೋಕೋಪಯೋಗಿ ಇಲಾಖೆಯಲ್ಲಿ ಮಹತ್ವದ ಕಾರ್ಯಗೈದ ಭಾರತರತ್ನ.
ಬೆಳಗಾವಿ : ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಪ್ರಮುಖವಾಗಿ ಕಣ್ಮುಂದೆ ಬರುವ, ದೇಶ ಕಂಡ ಅಪರೂಪದ ಇಂಜಿನಿಯರ್, ಕನ್ನಡದ ಹೆಮ್ಮೆಯ ಪುತ್ರ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ 164ನೇ ಜನ್ಮ ದಿನಾಚರಣೆಯನ್ನು ಇಡೀ ದೇಶ ಹಾಗೂ ಕನ್ನಡ ನಾಡು ಹೆಮ್ಮೆಯಿಂದ ಆಚರಣೆ ಮಾಡುತ್ತಿದೆ.
ದೇಶದ ನೀರಾವರಿ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿರುವ ಹಾಗೂ ಬ್ರಹತ್ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ದಕ್ಷಿಣ ಭಾಗದಲ್ಲಿ ನೀರಾವರಿ ಕ್ರಾಂತಿಗೆ ಕಾರಣೀಭೂತರಾದ ಜಗಮೆಚ್ಚಿದ ಇಂಜಿನಿಯರ್ ಭಾರತರತ್ನ ಸರ್ ಎಂ ವಿಶ್ವೇಶ್ವಯ್ಯನವರ ಕೊಡುಗೆಯನ್ನು ಯಾರು ತಾನೇ ಮರೆಯುವರು?

ಇಡೀ ಇಂಜಿನಿಯರ್ ಕ್ಷೇತ್ರಕ್ಕೆ ಸ್ಪೂರ್ತಿಯದ ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15ರಂದು ಬೆಂಗಳೂರಿನಲ್ಲಿ ಜನಿಸಿ, ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದರು, ಪೂನಾದಲ್ಲಿ 1884 ರಲ್ಲಿ ತಮ್ಮ ಇಂಜಿನಿಯರ್ ಪದವಿಯನ್ನು ಪೂರ್ಣಗೊಳಿಸಿದ ಅವರು ಮುಂಬೈ ಸರ್ಕಾರದಲ್ಲಿಯೇ ತಮ್ಮ ಸೇವೆಯನ್ನು ಆರಂಭಿಸಿದರು.
1907 ರಲ್ಲಿ ಮುಂಬೈ ಸರ್ಕಾರದ ಭಾಗವಾಗಿದ್ದ ಬೆಳಗಾವಿಯಲ್ಲಿ, ಲೋಕೋಪಯೋಗಿ ಇಲಾಖೆಯಲ್ಲಿ (ಸುಮಾರು ಏಳೆಂಟು ತಿಂಗಳು) ತಮ್ಮ ಮಹತ್ವದ ಸೇವೆಯನ್ನು ಸಲ್ಲಿಸಿದ್ದು ಬೆಳಗಾವಿಗರಿಗೆ ಹೆಮ್ಮೆಯ ವಿಷಯವಾಗಿದೆ, ಇಲ್ಲಿ ಇವರ ಸೇವೆ ಅತೀ ಮಹತ್ವದ್ದಾಗಿದ್ದು ಪುಣೆ, ಕೊಲ್ಲಾಪುರ, ಸೋಲಾಪುರ, ವಿಜಯಪುರ ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಿದ್ದು ಇಂದಿಗೂ ಕೂಡ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುವಾಗ ಈ ರೀತಿಯ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ, ನೀರಾವರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು, ಬೆಳಗಾವಿಗರು ಇಂದಿಗೂ ಕೂಡಾ ಅವರನ್ನು ನೆನೆಯುವುದು ಮಹತ್ವದ ಸಂಗತಿಯಾಗಿದೆ.
ವಿಶ್ವ ಕಂಡ ಶ್ರೇಷ್ಠ ಎಂಜಿನಿಯರ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಭೆ ಹಾಗೂ ಸೇವೆಯನ್ನು ಮನಗಂಡು ವಿದೇಶಗಳು ಅವರನ್ನು ಕರೆಸಿಕೊಂಡು ಅಲ್ಲಿ ಮಹತ್ವದ ಯೋಜನೆಗಳನ್ನು ನಿರ್ಮಿಸಿಕೊಂಡಿದ್ದು, 1908 ರಲ್ಲಿ ಹೈದರಾಬಾದ ನಿಜಾಮ ಅವರು ತಮ್ಮ ಸಂಸ್ಥಾನಗಳಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿಸಿಕೊಂಡಿದ್ದು, ನಂತರ ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಂಡಿದ್ದು, ಆ ಮೂಲಕ ಇಡೀ ರಾಜ್ಯವೇ ಅಭಿವೃದ್ಧಿ ಪಥದಲ್ಲಿ ಸಾಗುವಂತಹ ಕಾರ್ಯಗಳು ನಡೆದಿದ್ದು ಈಗ ಇತಿಹಾಸವಾಗಿದೆ.
ನಾಡಿನ ಪ್ರಗತಿಗೆ ಕಾರಣವಾದ ಆರ್ಥಿಕ ಯೋಜನೆಗಳು, ರಸ್ತೆಗಳು, ರೇಲ್ವೆ ಮಾರ್ಗ ವಿಸ್ತರಣೆ, ನೀರಾವರಿ, ಕೆರೆಕಟ್ಟೆಗಳು, ಮಹತ್ವದ ಕೈಗಾರಿಕೆಗಳು, ಅಣೆಕಟ್ಟೆಗಳು, ಬ್ಯಾಂಕ್, ವಿಶ್ವವಿದ್ಯಾಲಯ, ಗ್ರಂಥಾಲಯ, ಕನ್ನಡ ಸಾಹಿತ್ಯ ಪರಿಷತ್ತು, ವೃತ್ತಿ ಶಿಕ್ಷಣ ಸಂಸ್ಥೆ ಹೀಗೆ ಹತ್ತು ಹಲವಾರು ಸುಧಾರಣಾ ಕ್ರಾಂತಿಗಳನ್ನು ಕೈಗೊಂಡ ಮಹಾನ್ ಮೇಧಾವಿ ಸರ್ ಎಂ ವಿಶ್ವೇಶ್ವರಯ್ಯ ಅವರು ನಮ್ಮ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದರು ಅದು ಬೆಳಗಾವಿಗರಾದ ನಮಗೆಲ್ಲ ಹೆಮ್ಮೆಯ ವಿಷಯವೇ ಅಲ್ಲವೇ…
ವರದಿ ಪ್ರಕಾಶ್ ಬಸಪ್ಪ ಕುರಗುಂದ.