ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವಂತಹ ಸರ್ಕಾರದ ಹುಚ್ಚು ಸಾಹಸ.

ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವಂತಹ ಸರ್ಕಾರದ ಹುಚ್ಚು ಸಾಹಸ.

ಇದನ್ನು ವಿರೋಧಿಸುತ್ತೇವೆ, ಹಿಂತಗೆದುಕೊಳ್ಳದಿದ್ದರೆ ಹೋರಾಟ ಮಾಡುತ್ತೇವೆ..

ಮಾಜಿ ಎಂಎಲ್ಸಿ, ಮಹಾಂತೇಶ್ ಕವಟಗಿಮಠ..

ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದ ಜಾತಿಗಳ ಆಯೋಗದಿಂದ ಇನ್ನೇನು ಕೆಲವೇ ದಿನಗಳಲ್ಲಿ ನಡೆಸಲ್ಪಡುವ ಹಿಂದುಳಿದ ವರ್ಗಗಳ ಜಾತಿ ಜನಗಣತಿಯಲ್ಲಿ ಹಿಂದೂ ಜಾತಿಗಳ ನಡುವೆ ಕ್ರೈಸ್ತ ಧರ್ಮವನ್ನು ಸೇರಿಸುವ ಹುಚ್ಚು ಸಾಹಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು ಇದಕ್ಕೆ ನಮ್ಮ ತೀವ್ರ ವಿರೋಧವಿದೆ, ಒಂದು ವೇಳೆ ಈ ಸಮಸ್ಯೆ ಸರಿಪಡಿಸದೇ ಹೋದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ಸೋಮವಾರ ದಿನಾಂಕ 15/09/2025ರಂದು ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಉದ್ದೇಶಿತ ಹಿಂದೂಳಿದ ಜಾತಿಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಕಾಲಮ್ಮಿನಲ್ಲಿ ಹಿಂದೂ ಜಾತಿಗಳನ್ನ ಕ್ರೈಸ್ತರೆಂದು ಗುರ್ತಿಸುವ ಹುನ್ನಾರಕ್ಕೆ ಸರ್ಕಾರ ಕೈ ಹಾಕಿದೆ, ಇದನ್ನು ಹಿಂದೂ ಜಾಗರಣ ವೇದಿಕೆ ಖಂಡಿಸುತ್ತದೆ ಎಂದಿದ್ದಾರೆ. ಈಗ ಹೊಸ ಆಯೋಗದಲ್ಲಿ ಸೆಪ್ಟೆಂಬರ್ 22ರಿಂದ 15ದಿನಗಳ ಕಾಲ ಈ ಸಮೀಕ್ಷೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಡಿರುವ ಸರ್ಕಾರದ ಪ್ರಕಟಣೆಯಲ್ಲಿ ಹಿಂದೂ ಸಮಾಜದ ಅನೇಕ ಜಾತಿಗಳನ್ನು ಕ್ರೈಸ್ತರ ಹೆಸರಿನಲ್ಲಿ ಒಡೆಯತಕ್ಕಂತ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದೆ.

ಸುಮಾರು ಐವತ್ತಕ್ಕೂ ಹೆಚ್ಚಿನ ಹಿಂದೂ ಧರ್ಮದ ಸಮುದಾಯಗಳ ಅವರವರ ಜಾತಿಯ ಮುಂದೆ ಕ್ರಿಶ್ಚಿಯನ್ ಎಂದು ನಮೂದಿಸಿದ್ದು, ಇದು ಹಿಂದೂ ಸಮಾಜವನ್ನು ಒಡೆಯುವ ಕಾರ್ಯ ಆಗಿದೆ ಇದನ್ನೇ ನಾವೆಲ್ಲಾ ತೀವ್ರವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ.

ಅಕ್ಕಸಾಲಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ದೇವಾಂಗ, ಈಡಿಗ, ಲಮಾಣಿ, ನೇಕಾರ, ರೆಡ್ಡಿ, ಒಕ್ಕಲಿಗ ವಾಲ್ಮೀಕಿ, ಹೀಗೆ ಹಿಂದೂ ಸಮುದಾಯದ ಸುಮಾರು 46 ಜಾತಿಗಳ ಹಿಂದೆ ಈ ಕ್ರಿಶ್ಚಿಯನ್ ಎಂದು ನಮೂದು ಮಾಡುವ ಮೂಲಕ ಹಿಂದೂ ಧರ್ಮ ಒಡೆಯುವ ಕಾರ್ಯ ಸಿದ್ದರಾಮಯ್ಯ ಸರ್ಕಾರ ಮಾಡಿದೆ ಇದನ್ನು ಹಿಂದೂ ಜಾಗರಣ ವೇದಿಕೆ ಸಹಿಸುವುದಿಲ್ಲ ಎಂದಿದ್ದಾರೆ.

ಇನ್ನು ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿಗಳಾದ ಎಂ ಬಿ ಜಿರಲಿ ಅವರು ಮಾತನಾಡಿ, ಸಮೀಕ್ಷೆಗೆ ನಮ್ಮ ವಿರೋಧವಿಲ್ಲ, ಸಮೀಕ್ಷೆ ಮಾಡುವ ರೀತಿ ಸರಿಯಾಗಿರಬೇಕು, ಮತಾಂತರ ಆಕ್ಟ್ ಪ್ರಕಾರ ಅವರ ಸ್ವ ಇಚ್ಚೆಯಿಂದ ಯಾರೇ ಆದರೂ ಯಾವುದೇ ಧರ್ಮ ಸ್ವೀಕಾರ ಮಾಡಬಹುದು, ಆದರೆ ಒಪ್ಪಿಗೆಯಿಲ್ಲದೇ ಮಾಡುವುದು ಸರಿಯಲ್ಲ, ಇದೆಲ್ಲವನ್ನೂ ಇಲ್ಲಿಗೆ ಬಿಡಬೇಕು, ಆ ಕಾಲಂಗಳನ್ನು ಕೈಬಿಡಬೇಕು ಎಂದು ಬೆಳಗಾವಿಯಿಂದ ಈ ವೇದಿಕೆಯ ಮುಖಾಂತರ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ, ಇಲ್ಲವಾದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ, ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುವಂತಹದ್ದು ಡಾ ಅಂಬೇಡ್ಕರ ಅವರ ಸಂವಿಧಾನದ ಅದ್ಬುತವಾದ ಕನಸು, ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕ ಸರ್ಕಾರ ನಡೆದುಕೊಳ್ಳುತ್ತಿರುವದು ಖಂಡನೀಯ, ಇದು ಅಸಂವಿಧಾನಿಕವಾಗಿದ್ದು ಅದಕ್ಕಾಗಿ ಇದೇ 17ನೆ ತಾರೀಕು ನಗರದ ಗಾಂಧಿಭವನದಲ್ಲಿ ಎಲ್ಲಾ ಸಮಾಜದ ಮುಖಂಡರು ಮಹತ್ವದ ಸಭೆ ನಡೆಸುತ್ತಿದ್ದು, ಅಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತೇವೆ, ರಾಜ್ಯಪಾಲರಿಗೆ ಮನವಿ ನೀಡುವ ಮೂಲಕ ಸರ್ಕಾರವನ್ನು ಕಣ್ಣು ತೆರೆಸುವ ಕಾರ್ಯ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಮಹಾನಗರ ಬಿಜೆಪಿ ಆಡಳಿತ ಪಕ್ಷದ ಅಧ್ಯಕ್ಷ ಹನುಮಂತ ಕೊoಗಾಲಿ, ನಗರ ಸೇವಕ ಸಂದೀಪ್ ಜೀರಗ್ಯಾಳ, ರಾಜಶೇಖರ ದೋಣಿ, ಬಂಜಾರ ಸಮುದಾಯದ ಪರವಾಗಿ ರಾಠೋಡ, ಹೂಗಾರ, ಲಿಂಗಾಯತ, ಜೈನ ಹೀಗೆ ವಿವಿಧ ಸಮುದಾಯದ ಪ್ರತಿನಿಧಿಗಳು ಭಾಗಿಯಾಗಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..