ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲು ಆಗುವದಿಲ್ಲ.
ನಿರ್ಣಯ ಅಂಗೀಕರಿಸಲು ನಿರ್ದಿಷ್ಟ ಕಾರಣ ಇರಬೇಕು, ಜೊತೆಗೆ ತನಿಖೆ ಆಗಬೇಕು..
ಶಾಸಕ ಆಶಿಫ್ (ರಾಜು) ಸೇಠ್..
ಬೆಳಗಾವಿ : ಅಧಿಕಾರಿಗಳು ಯಾರೇ ಆಗಿರಲಿ, ಅವರ ಮೇಲೆ ಟಾರ್ಗೆಟ್ ಮಾಡಿ, ಆಡಳಿತದ ಸಾಮಾನ್ಯ ಸಭೆಗಳಲ್ಲಿ ನಿರ್ಣಯವನ್ನು ಮಂಡಿಸಿ, ಅನುಮೋದಿಸಲು ಆಗುವದಿಲ್ಲ, ಆಡಳಿತದ ಸಾಮಾನ್ಯ ಸಭೆಗಳಲ್ಲಿ ನಿರ್ಣಯವನ್ನು ಅಂಗೀಕರಿಸಲು ನಿರ್ಧಿಷ್ಟ ಕಾರಣ ಇರಬೇಕು ಜೊತೆಗೆ ತನಿಖೆ ಆಗಿರಬೇಕು ಎಂದು ಬೆಳಗಾವಿ ಉತ್ತರದ ಶಾಸಕರಾದ ಆಸಿಫ್ (ರಾಜು) ಸೇಠ್ ಹೇಳಿದ್ದಾರೆ.
ಗುರುವಾರ ದಿನಾಂಕ 25/09/2025ರಂದು ನಗರದ ಮಹಾನಗರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ, ಆಡಳಿತ ಪಕ್ಷ ಬಿಜೆಪಿಯ ನಗರಸೇವಕರು ಹಾಗೂ ಬೆಳಗಾವಿ ದಕ್ಷಿಣ ಭಾಗದ ಶಾಸಕರಾದ ಅಭಯ ಪಾಟೀಲ್ ಅವರು ತಮ್ಮೆಲ್ಲ ಸಹಮತದಿಂದ ಪಾಲಿಕೆಯ ಉಪ ಆಯುಕ್ತರು (ಕಂದಾಯ) ಇವರ ವಿರುದ್ಧ ಸಭೆಯಲ್ಲಿ ನಿರ್ಯಯ ಮಂಡಿಸಿ, ಅಂಗೀಕರಿಸಲು ಮುಂದಾದಾಗ ಅದಕ್ಕೆ ಒಪ್ಪದ ಉತ್ತರದ ಶಾಸಕರು ತಮ್ಮ ಬೆಂಬಲಿತ ನಗರ ಸೇವಕರೊಂದಿಗೆ ಸಭಾತ್ಯಾಗ ಮಾಡಿದ ನಂತರ ಮೇಲಿನಂತೆ ಹೇಳಿದರು.
ವಿರೋಧ ಪಕ್ಷದ ನಗರ ಸೇವಕ ಶಾಹಿದ್ ಖಾನ ಪಠಾಣ್ ಅವರು, ಕಂದಾಯ ವಿಭಾಗದಲ್ಲಿ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿದೆ ಎಂಬ ಪ್ರಶ್ನೆಯನ್ನು ಎತ್ತಿಕೊಂಡರು, ಆ ಪ್ರಶ್ನೆಯನ್ನು ಆಡಳಿತ ಪಕ್ಷ ಬಿಜೆಪಿಯ ನಗರಸೇವಕರು ಮುಂದುವರೆಸುತ್ತಾ, ಕಂದಾಯ ಉಪ ಆಯುಕ್ತರ ಮೇಲೆ ಈಗಾಗಲೇ ಹಲವಾರು ಆರೋಪಗಳಿವೆ, ನಗರಸೇವಕರ ಕಾರ್ಯಗಳಿಗೂ ಸರಿಯಾದ ಸ್ಪಂದನೆ ಇರುವದಿಲ್ಲ, ವೇಗಾ ಹೆಲ್ಮೆಟ್ ಪ್ರಕರಣದಲ್ಲಿ ಲೋಕಾಯುಕ್ತದಲ್ಲಿ ಇವರ ಮೇಲೆ ದೂರು ಕೂಡಾ ಇದೆ, ಹೀಗಿರುವಾಗ ಈ ಅಧಿಕಾರಿ ಕಂದಾಯ ಉಪ ಆಯುಕ್ತರಾಗಿ ಮುಂದುವರಿಯಬಾರದು ಎಂದು ನಾವು ಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಅಂಗೀಕರಿಸುತ್ತೇವೆ ಎಂದು ಒಮ್ಮತದ ನಿರ್ಧಾರಕ್ಕೆ ಬಂದಿದ್ದರು.
ಸ್ವಲ್ಪ ಸಮಯ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆಯ ನಂತರ, “ಕಂದಾಯ ಉಪ ಆಯುಕ್ತರ ಮೇಲಿನ ಆರೋಪದ ಬಗ್ಗೆ ತನಿಖೆ ಮಾಡಿಸಿ 15 ದಿನಗಳಲ್ಲಿ ವರದಿ ನೀಡಬೇಕೆಂಬ” ವಿಷಯಕ್ಕೆ ಸಭೆಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು.
ನಂತರ ಈ ಪ್ರಕ್ರಿಯೆಗೆ ತಮ್ಮ ಅಸಮಾಧಾನ ಹೊರಹಾಕಿದ ಉತ್ತರದ ಶಾಸಕರು, ತಮಗೆ ಯಾವ ಅಧಿಕಾರಿ ಆಗುವದಿಲ್ಲವೂ ಆ ಅಧಿಕಾರಿಯ ಮೇಲೆ ತಕ್ಷಣ ನಿರ್ಣಯ ಆಂಗೀಕರಿಸುತ್ತೇವೆ ಎಂದರೆ ಆಗುವದಿಲ್ಲ, ಅದಕ್ಕೆ ಸೂಕ್ತ ಕಾರಣ ಬೇಕು, ವ್ಯವಸ್ಥಿತ ತನಿಖೆ ಆಗಬೇಕು, ಅಧಿಕಾರಿಯ ತಪ್ಪು ಸಾಬೀತಾದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು.
ಪಾಲಿಕೆಯ ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದರೆ, ಅದರ ಬಗ್ಗೆ ತಮ್ಮ ಬಳಿ ದಾಖಲೆಗಳು ಇದ್ದರೆ, ಪಾಲಿಕೆ ಆಯುಕ್ತರಿಗೆ ನೀಡಬೇಕು, ಅವರು ತನಿಖೆ ಮಾಡಿ, ಬಂದ ವರದಿಯಲ್ಲಿ ತಪ್ಪು ಸಾಭಿತಾಗಿದ್ದರೆ, ಮುಂದಿನ ಕ್ರಮಕ್ಕಾಗಿ ತಾವು ಸಭೆಯಲ್ಲಿ ವಿಷಯ ಮಂಡನೆ ಮಾಡಿದಾಗ, ಅದಕ್ಕೆ ನಾವು ಕೂಡಾ ಸಹಕಾರ ನೀಡುತ್ತೇವೆ, ಅದನ್ನು ಬಿಟ್ಟು ನೇರವಾಗಿ ಸಭೆಯಲ್ಲಿ ನಿರ್ಣಯ ಅಂಗಿಕರಿಸುತ್ತೇವೆ ಎಂದಾಗ ನಾವು ಅನಿವಾರ್ಯವಾಗಿ ಸಭಾತ್ಯಾಗ ಮಾಡಬೇಕಾಯಿತು ಎಂದಿದ್ದಾರೆ.
ಇನ್ನು ಲೋಕಾಯುಕ್ತ ಅಂಗಳದಲ್ಲಿ ಇರುವ ವೇಗಾ ಹೆಲ್ಮೆಟ್ ಪ್ರಕರಣದಲ್ಲಿ ಇರುವ ಸುಮಾರು 27 ಸಿಬ್ಬಂದಿಗಳ ಮೇಲೂ ತನಿಖೆ ನಡೀತಾ ಇದೆ, ಅದರ ವರದಿ ಬಂದ ಮೇಲೆ ಅದರ ಬಗ್ಗೆ ಮಾತನಾಡೋಣ ಎಂದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..