ರಾಜ್ಯೋತ್ಸವಕ್ಕೆ 20 ಸಾವಿರ ಜನರಿಗೆ ರುಚಿಕರ ಪುಲಾವ…
ಬೆಳಗಾವಿ ಮಹಾನಗರ ಪಾಲಿಕೆಯಿಂದ ಆಯೋಜನೆ..
ಬೆಳಗಾವಿ : ಕರ್ನಾಟಕ ರಾಜ್ಯದಲ್ಲಿಯೇ ಅತೀ ವಿಜೃಂಭಣೆ ಹಾಗೂ ಅಭಿಮಾನದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಭಾಷಾಭಿಮಾನದ ನೆಲ ಎಂದರೆ ಅದು ನಮ್ಮ ಗಂಡುಮೆಟ್ಟಿನ ಗಡಿನಾಡು ಬೆಳಗಾವಿ ಎಂದರೆ ತಪ್ಪಾಗಲಾರದು..
ಬೆಳಗಾವಿ ರಾಜ್ಯೋತ್ಸವದ ಅಬ್ಬರದ ಸಡಗರವನ್ನು ನೋಡಲು ರಾಜ್ಯದ ಬೇರೆ ಬೇರೆ ಕಡೆಗಳಿಂದ, ಹೊರ ರಾಜ್ಯದಿಂದ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬೆಳಗಾವಿ ನಗರಕ್ಕೆ ಜನರು ಬಂದು, ಇಲ್ಲಿಯ ಕನ್ನಡದ ಜಾತ್ರೆಯ ಸಂಭ್ರಮವನ್ನು ಸವಿದು, ಹಾಡಿ, ಕುಣಿದು, ಲಕ್ಷಾಂತರ ಕನ್ನಡ ಭಾದವರ ಜೊತೆ ಬೆರೆತು, ಅತೀ ಆನಂದದಿಂದ ಕನ್ನಡ ಮಾತೆಯ ತೇರು ಎಳೆಯುವರು.

ಹೀಗೆ ಬಂದಂತ ಲಕ್ಷಾಂತರ ಜನತೆಗೆ ಜಿಲ್ಲಾಡಳಿತ, ಜಿಲ್ಲಾ ಹಾಗೂ ನಗರ ಪೊಲೀಸ್ ಇಲಾಖೆ, ಉತ್ತಮ ರೀತಿಯಲ್ಲಿ ಮೂಲಸೌಕರ್ಯದ ವ್ಯವಸ್ಥೆ ಮಾಡಿದ್ದು, ಶಾಂತಿ ಹಾಗೂ ಸುವ್ಯವಸ್ಥೆಯ ಭದ್ರತೆಯನ್ನು ಕೂಡಾ ಅಚ್ಚುಕಟ್ಟಾಗಿ ಮಾಡಿರುತ್ತದೆ.
ಇವೆಲ್ಲದರೆ ಜೊತೆಗೆ ಈ ವರ್ಷದ ವಿಶೇಷ ಏನೆಂದರೆ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಆತ್ಮೀಯತೆಯ ರುಚಿಕರವಾದ “ಪುಲಾವ” ತಿಂಡಿಯನ್ನು ಆಯೋಜನೆ ಮಾಡಿದ್ದು, ಸರ್ವ ಕನ್ನಡದ ಮನಸ್ಸುಗಳಿಗೆ ಖುಷಿ ನೀಡಿದ್ದು, ಪಾಲಿಕೆಯ ಈ ಕನ್ನಡದ ಕಾರ್ಯಕ್ಕೆ, ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ..

ನಾಳೆ ರಾಜ್ಯೋತ್ಸವಕ್ಕಾಗಿ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಸುಮಾರು 20 ಸಾವಿರ ಜನರಿಗೆ, ಪುಲಾವ ವ್ಯವಸ್ಥೆ ಮಾಡಿದ್ದು, ಕನ್ನಡದ ಉತ್ಸವಕ್ಕೆ ಬಂದಿರುವ ಕನ್ನಡದ ಮನಸ್ಸುಗಳಿಗೆ ಹೊಟ್ಟೆ ತುಂಬಾ ಪುಲಾವ್ ನೀಡುವ ಪಾಲಿಕೆಯ ಈ ಉತ್ತಮ ಕಾರ್ಯ ಬೆಳಗಾವಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ಶೋಭೆಯನ್ನು ತಂದಿದೆ ಎನ್ನಬಹುದು..

ಇನ್ನೂ ಇಂದು ರಾತ್ರಿಯಿಂದಲೇ ಹತ್ತಾರು ಅಡುಗೆ ಕೆಲಸದವರಿಂದ ಈ ಅಡುಗೆ ತಯಾರಿ ಕಾರ್ಯ ನಡೆಯುತ್ತಿದ್ದು, ಅಲ್ಲಿ ಪಾಲಿಕೆ ಆಯುಕ್ತರಾದ ಶುಭ ಬಿ, ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ತಳವಾರ, ಪಾಲಿಕೆ ಸಿಬ್ಬಂದಿ ಭರತ ತಳವಾರ, ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರಾದ ರಾಜಶೇಖರ ತಳವಾರ ಅವರು ಉಪಸ್ಥಿತರಿದ್ದು, ಅವಲೋಕನ ಮಾಡುತ್ತಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..