ಪಾಲಿಕೆಯ ತೆರಿಗೆ ಸ್ಥಾಯಿ ಸಮಿತಿ ಸಭೆಗೆ ಗೈರಾದ ಅಧಿಕಾರಿ ಹಾಗೂ ಸಿಬ್ಬಂದಿಗಳು..

ಪಾಲಿಕೆಯ ತೆರಿಗೆ ಸ್ಥಾಯಿ ಸಮಿತಿ ಸಭೆಗೆ ತಡವಾಗಿ ಬಂದ ಅಧಿಕಾರಿ ಹಾಗೂ ಸಿಬ್ಬಂದಿಗಳು..

ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡ ನಗರ ಸೇವಕರು..

ಗದರಿದ ಹತ್ತು ನಿಮಿಷದಲ್ಲೇ ಹೌಸಫುಲ್ ಆದ ಸಭಾಭವನ..

ಬೆಳಗಾವಿ : ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗದ ಹಾಗೂ ಗೈರಾಗಿರುವ ಪಾಲಿಕೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಅಸಮಾಧಾನಗೊಂಡ ಪಾಲಿಕೆಯ ನಗರ ಸೇವಕರು ಹಾಗೂ ಸಮಿತಿಯ ಅಧ್ಯಕ್ಷರು ಇಲ್ಲಿ ನಾವೇನು ಟೈಮ್ ಪಾಸ್ ಮಾಡಲಿಕ್ಕೆ ಬಂದಿದ್ದೇವೆಯೇ? ಮೂರು ದಿನಗಳ ಮುಂಚೆಯೇ ಸಭೆಯ ನೋಟಿಸ್ ನೀಡಿದ್ದರೂ ಅರ್ಥವಾಗುವದಿಲ್ಲವೇ, ಎಷ್ಟು ಕಂದಾಯ ನಿರೀಕ್ಷಿಕರು ಕರ ವಸೂಲಿಗಾರರು ಬಂದಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಗಿ ಬರದೇ ಇರುವವರ ಮೇಲೆ ಶಿಸ್ತು ಕ್ರಮ ಜಾರಿಗೆ ಮಾಡಿ ಎಂದು ಸೂಚನೆ ನೀಡಿದ್ದಾರೆ..

ಬೆಳಗಾವಿ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಶುಕ್ರವಾರ ದಿನಾಂಕ 07/11/2025 ರಂದು ರೇಖಾ ಹೂಗಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತೆರಿಗೆ, ಹಣಕಾಸು ಹಾಗೂ ಆಫೀಲುಗಳ ಸ್ಥಾಯಿ ಸಮಿತಿಯ ಸಭೆಯಲ್ಲಿ ಪಾಲಿಕೆಯ ಕಂದಾಯ ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ಗೈರು ಹಾಗೂ ತಡವಾಗಿ ಆಗಮಿಸಿದ್ದಕ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಿಬ್ಬಂದಿಗಳ ಮೇಲೆ ಕಿಡಿ ಕಾರಿದ್ದು, ಪ್ರತಿ ಸಲ ಹೀಗೆ ಆದರೆ ಹೇಗೆ, ಅಧಿಕಾರಿಗಳೇ ಗೈರಾದ ಸಿಬ್ಬಂದಿಗಳಿಗೆ ನೋಟಿಸ್ ನೀಡಿ, ಮುಂದಿನ ಸಲ ಹೀಗೆ ಆದರೆ ನಾವು ಸಭೆಯನ್ನೇ ನಡೆಸುವದಿಲ್ಲ ಎಂದು ಅಧ್ಯಕ್ಷರು ಖಡಕ್ಕಾಗಿ ಹೇಳಿದ್ದಾರೆ.

ಪಾಲಿಕೆಯ ಸಿಬ್ಬಂದಿಗಳಿಗೆ ಕೇವಲ ಜಾತಿ ಸಮೀಕ್ಷೆಯ ಜವಾಬ್ದಾರಿ ನೀಡಿರಲಿಲ್ಲ, ಅದರ ಜೊತೆಗೆ ಕಚೇರಿಯ ಕಾರ್ಯ ಕೂಡಾ ಮಾಡಬೇಕಿತ್ತು ಆದರೆ ಪಾಲಿಕೆಯ ಕಾರ್ಯಗಳು ಸರಿಯಾಗಿ ಆಗಿಲ್ಲ, ಜಾತಿ ಸಮೀಕ್ಷೆಯೆಂದು ತಾವು ಪಾಲಿಕೆಯ ಮುಖ್ಯ ಕೆಲಸಗಳನ್ನು ನಿರ್ಲಕ್ಷ್ಯ ಮಾಡಿದ್ದೀರಾ ಎಂದು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಕೇಳಿದಾಗ, ಅದಕ್ಕೆ ಉತ್ತರಸಿದ ಕಂದಾಯ ನಿರೀಕ್ಷಿಕ ಸಂತೋಷ್ ಒಸಿ, ಆಯುಕ್ತರ ಆದೇಶದ ಮೇರೆಗೆ ಜಾತಿ ಸಮೀಕ್ಷೆಯ ಕಾರ್ಯ ತುಂಬಾ ಮುಖ್ಯವಾಗಿತ್ತು, ನಿಗದಿತ ಅವಧಿಯಲ್ಲಿ ಮುಗಿಸಬೇಕಿತ್ತು, ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಸಮೀಕ್ಷೆ ಮಾಡುತ್ತಿದ್ದೆವು, ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಕೂಡಾ ಮುಗಿಸಿದ್ದೇವೆ, ಇನ್ನು ಬಾಕಿ ಇರುವ ಈ ಆಸ್ತಿ, ಹಾಗೂ ಇತರ ಪಾಲಿಕೆಯ ಕೆಲಸಗಳನ್ನು ಆದಷ್ಟು ಬೇಗ ಮುಗಿಸುತ್ತೇವೆ ಎಂದರು, ಇದಕ್ಕೆ ಧ್ವನಿಗೂಡಿಸಿದ ವಲಯ ಆಯುಕ್ತರುಗಳಾದ ಕೋರಿ ಹಾಗೂ ಅನಿಲ್ ಬೋರಗಾವಿ ಅವರು ಜಾತಿ ಸಮೀಕ್ಷೆ ಕಾರ್ಯಗತಿಯನ್ನು ವಿವರಿಸಿ, ಬರುವ ದಿನಗಳಲ್ಲಿ ಗರಿಷ್ಟ ಪ್ರಮಾಣದ ತೆರಿಗೆ ಸಂಗ್ರಹ ಮಾಡುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ..

ಇನ್ನೂ ಸಭೆಯ ಗಾಂಭೀರ್ಯತೆಯ ಬಗ್ಗೆ ಪ್ರಸ್ತಾಪಿಸಿದ ನಗರ ಸೇವಕ ಅಜಿಮ್ ಪಟವೆಗಾರ್ ಅವರು, ಇದು ಸಭೆಯ ರೀತಿ ಕಾಣುತ್ತಿಲ್ಲ, ಎಲ್ಲರೂ ಅವರವರಲ್ಲೇ ಮಾತನಾಡುತ್ತ ಇರುವರು, ಸಭೆಯ ಅಧ್ಯಕ್ಷರು ಮಾತನಾಡುವಾಗ ಎಲ್ಲರ ಗಮನ ಇರಬೇಕು, ಸಭೆಯಲ್ಲಿ ಭಾಗಿಯಾದ ಎಲ್ಲರೂ ಸಭೆಯ ಜವಾಬ್ದಾರಿಯನ್ನು ಅರಿಯಬೇಕು ಎಂಬ ಕಿವಿಮಾತು ಹೇಳುದರು..

ಇನ್ನೂ ಪೋತದಾರ ಇಂಟರ್ನೆಷನಲ್ ಸ್ಕೂಲ್ ತೆರಿಗೆಯ ವಿಷಯಕ್ಕೆ ಹೆಚ್ಚಿನ ಚರ್ಚೆ ಆಗಿದ್ದು, ಅನಧಿಕೃತ ಆಸ್ತಿ ಇದ್ದಿದ್ದು ಅಧಿಕೃತ ಆಸ್ತಿ ಹೇಗೆ ಆಯಿತು? ಪಾಲಿಕೆಗೆ ಬರುವ ಆದಾಯ ಏಕೆ ಕಡಿಮೆ ಆಯಿತು? ಯಾವ ಆಧಾರದ ಮೇಲೆ ತಾವು ಮರು ತೆರಿಗೆ ನಿರ್ಧರಣೆ ಮಾಡಿದ್ದೀರಿ? ಇದರಿಂದ ಲಕ್ಷಾಂತರ ಆದಾಯ ಪಾಲಿಕೆಗೆ ನಷ್ಟವಾಗಿದೆ ಅದಕ್ಕೆ ಯಾರು ಹೊಣೆ ಎಂದಾಗ, ಕಂದಾಯ ಸಿಬ್ಬಂದಿಗಳು ಹಿಂದೆ ಇರುವ ಅಧಿಕಾರಿಗಳ ಮೇಲೆ ಅದರ ಹೊಣೆ ಇದೆ ಎಂದು ಆಸ್ಪಷ್ಟ ಉತ್ತರವನ್ನು ನೀಡುತ್ತಾ ಸನಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದು, ಮುಂದಿನ ಸಭೆಗೆ ಮುಂದೂಡಲಾಯಿತು.

ಇನ್ನೂ ನಗರದ ಬಾಪಡ ಗಲ್ಲಿಯ ಕಾರ್ ಪಾರ್ಕಿಂಗನ ಶುಲ್ಕದ ಬಗ್ಗೆ ಚರ್ಚೆ ಆಗಿದ್ದು, ಅಧಿಕಾರಿ ಹಾಗೂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷದಿಂದ ಪಾಲಿಕೆಗೆ ಲಕ್ಷಾಂತರ ಆದಾಯ ನಿಂತುಹೋಗಿದೆ, ಸಂಬಂಧಪಟ್ಟ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಿ, ಮತ್ತೆ ನಾಳೆಯೇ ಆ ಪಾರ್ಕಿಂಗ ಸ್ಥಳವನ್ನು ಪಾಲಿಕೆಯ ವಶಕ್ಕೆ ಪಡೆದು, ಪಾಲಿಕೆಯಿಂದ ನೇರವಾಗಿ ಪಾರ್ಕಿಂಗ್ ಶುಲ್ಕ ಪಡೆಯುವ ವ್ಯವಸ್ಥೆ ಆಗಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ..

ಈ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರು, ಸದಸ್ಯರು, ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು, ನಗರ ಸೇವಕರು, ಆಡಳಿತ ಉಪ ಆಯುಕ್ತರು, ಕಂದಾಯ ಉಪ ಆಯುಕ್ತರು, ಕಾನೂನು ಸಲಹೆಗರಾರು, ಪರಿಷತ್ ಕಾರ್ಯದರ್ಶಿ, ವಲಯ ಆಯುಕ್ತರು, ಕಂದಾಯ ಅಧಿಕಾರಿಗಳು, ಅಭಿವೃದ್ಧಿ, ನಗರ ಯೋಜನೆ, ಆರೋಗ್ಯ, ಲೆಕ್ಕ ಶಾಖೆ ವಿಭಾಗಗಳ ಸಿಬ್ಬಂದಿಗಳು, ಕಂದಾಯ ನಿರೀಕ್ಷಿಕರು, ಕರ ವಸೂಲಿಗಾರರು ಹಾಗೂ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕುರಗುಂದ..