2025-26 ನೇ ಸಾಲಿನ (ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ..

2025-26 ನೇ ಸಾಲಿನ (ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ..

ಸರ್ಕಾರಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಸರಿಯಾದ ದಾಖಲೆಗಳೊಂದಿಗೆ ಮುಗಿಸಬೇಕು.

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ತ್ರೈಮಾಸಿಕ ಕೆ.ಡಿ.ಪಿ.ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಶಾಸಕರ, ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದಡಿ ಕೈಗೊಳ್ಳಲಾಗುತ್ತಿರುವ‌ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವುದರ ಜೊತೆಗೆ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬೆಳಗಾವಿ ನಗರ ವ್ಯಾಪ್ತಿಯು ತುಂಬಾ ವಿಶಾಲವಾಗಿದ್ದು ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಎರಡು ಹೊಸ ತ್ಯಾಜ್ಯ ವಿಲೆವಾರಿ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲು ತಿಳಿಸಿದರು.

ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಮಾತನಾಡಿ, ಶಾಸಕರ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಬಂದಂತಹ ಅನುದಾನ ವರ್ಷಾಂತ್ಯಕ್ಕೆ ವ್ಯತ್ಯಾಯ ಆಗದಂತೆ ಸಮರ್ಪಕವಾಗಿ ಬಳಕೆ ಆಗಬೇಕು. ಕಳೆದ‌ ಸಭೆಯ ಅನುಪಾಲನಾ ವರದಿಯನ್ನು ಎಲ್ಲ ಜನ ಪ್ರತಿನಿಧಿಗಳಿಗೆ ಸಾಕಷ್ಟು ಮುಂಚಿತಾವಗಿ ಒದಗಿಸಬೇಕು ಎಂದರು. ಕಂದಾಯ ಗ್ರಾಮ‌ ಹೊರತುಪಡಿಸಿ ಜನವಸತಿ ಪ್ರದೇಶಗಳಿಗೂ ನಿರಂತರ ಜ್ಯೋತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಯಡಿ ಕಾಮಗಾರಿ ಪ್ರಾರಂಭಗೊಂಡು ಅರ್ಧಕ್ಕೆ‌ ನಿಂತಿರುವ ಮನೆಗಳಿಗೆ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ನೂರು ಹಾಸಿಗೆಗಳ ಇ.ಎಸ್.ಆಯ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದರು ಸಹ ಇದುವರೆಗೆ ಕಟ್ಟಡ ನಿರ್ಮಾಣ ಆಗಿರುವುದಿಲ್ಲ. ಈ ಬಾರಿ ಕಟ್ಟಡ ನಿರ್ಮಾಣ ಆಗದೇ ಇದ್ದಲ್ಲಿ ಅನುದಾನ ಮರಳಿ ಹೋಗುವುದು ಎಂದರು.

ಉದ್ದು, ಹೆಸರು ಹಾಗೂ ಸೋಯಾಬಿನ್ ಖರೀದಿ ಕೇಂದ್ರಗಳನ್ನು ಮುಂಚಿತವಾಗಿ ತೆರೆಯಲು ಕ್ರಮ‌ವಹಿಸಬೇಕು. ನಗರ ನೀರು ಸರಬರಾಜು ಇಲಾಖೆಯಡಿ ಸಿಬ್ಬಂದಿಗಳ ಕೊರತೆ ಇರುತ್ತದೆ. ಇಲಾಖೆಯ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿ ಎಲ್ಲ‌ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಲು ತಿಳಿಸಿದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ರಾಜು ಕಾಗೆ ಅವರು ಮಾತನಾಡಿ ಸವಳು ಜವಳು ಭೂಮಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಅನುದಾನದೊಂದಿಗೆ ಹೆಚ್ಚುವರಿ‌ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಹನಿ ನೀರಾವರಿ ಯೋಜನೆಗಳಿಗೆ ಒದಗಿಸಲಾಗುವ ಸಬ್ಸಿಡಿ ಮೊತ್ತವನ್ನು ಅರ್ಹ ಎಲ್ಲ ರೈತರಿಗೆ ಒದಗಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

Leave a Reply

Your email address will not be published. Required fields are marked *