ಖಾನಾಪುರ ಅರಣ್ಯ ಪ್ರದೇಶದ ಜಲಪಾತಗಳಿಗೆ ಪ್ರವೇಶ ನಿಷೇಧ..

ಖಾನಾಪುರ ಅರಣ್ಯ ಪ್ರದೇಶದ ಜಲಪಾತಗಳಿಗೆ ಪ್ರವೇಶ ನಿಷೇಧ..

ನಿಯಮ ಉಲ್ಲಂಘಿಸಿದರೆ ಅರಣ್ಯ ಕಾಯ್ದೆಯಡಿ ಕಾನೂನು ಕ್ರಮ..

ಬೆಳಗಾವಿ : ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಬೆಳಗಾವಿ ಅರಣ್ಯ ವಿಭಾಗ ತಿಳಿಸಿದೆ. ಮಳೆಗಾಲದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಪ್ರದೇಶದ ಜಲಪಾತಗಳ ಬಳಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರವಾಸಿಗರು ಹಾಗೂ ಸಾರ್ವಜನಿಕರು ಜಲಪಾತಗಳ ವೀಕ್ಷಣೆ ಮತ್ತು ಚಾರಣಕ್ಕಾಗಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಆದರೂ ಕೆಲವರು ಸಿಬ್ಬಂದಿಯ ಕಣ್ತಪ್ಪಿಸಿ ಅರಣ್ಯ ಪ್ರದೇಶಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಅಪಾಯಕಾರಿ ಜಲಪಾತಗಳಿಗೆ ಭೇಟಿ ನೀಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಇಂತಹವರ ವಿರುದ್ಧ ಈಗಾಗಲೇ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಇಲಾಖೆಯ ಸೂಚನೆಗಳನ್ನು ಪಾಲಿಸಿ ಜಲಪಾತಗಳ ವೀಕ್ಷಣೆ ಹಾಗೂ ಚಾರಣಕ್ಕೆ ತೆರಳಬಾರದು. ಅನಧಿಕೃತವಾಗಿ ಅರಣ್ಯ ಪ್ರದೇಶ ಪ್ರವೇಶಿಸುವವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.