ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ಕನ್ನಡದಲ್ಲೇ ಟಿಇಟಿ ನಡೆಸಿ..

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ಕನ್ನಡದಲ್ಲೇ ಟಿಇಟಿ ನಡೆಸಿ..

ಸಿಎಂ ಡಿ.ಕೆ.ಸಿ, ಗೆ ಬೆಳಗಾವಿ ಕನ್ನಡಿಗರ ಮನವಿ..

ಬೆಳಗಾವಿ : ಮಹಾರಾಷ್ಟ್ರ ರಾಜ್ಯದ ಗಡಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ಕನ್ನಡ ಭಾಷೆಯಲ್ಲಿಯೇ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಲು ಕರ್ನಾಟಕ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗಡಿಭಾಗದ ಕನ್ನಡ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದರು.
ಈ ಕುರಿತು ರಾಜ್ಯ ಸಂಚಾಲಕ ಸುರೇಶ ಗವನ್ನವರ, ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ಪದಾಧಿಕಾರಿಗಳ ನಿಯೋಗವು ಮಂಗಳವಾರ ಪ್ರಾದೇಶಿಕ ಆಯುಕ್ತರ ಕಛೇರಿಗೆ ತೆರಳಿ ಪ್ರಾದೇಶಿಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮವಿನ ಸಲ್ಲಿಸಿದರು.

44 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ: ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಪ್ರಸ್ತುತ 377ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 44,860ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ಸಿಟಿಇ) ಮಾರ್ಗಸೂಚಿಗಳ ಪ್ರಕಾರ, ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಅಭ್ಯರ್ಥಿಗಳ ಮಾತೃಭಾಷೆ ಅಥವಾ ಬೋಧನಾ ಮಾಧ್ಯಮದ ಭಾಷೆಯಲ್ಲಿಯೇ ನಡೆಸಲು ಅವಕಾಶವಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಕನ್ನಡ ಮಾಧ್ಯಮದ ಶಿಕ್ಷಕರಿಗೂ ಕಡ್ಡಾಯವಾಗಿ ಮರಾಠಿ ಭಾಷೆಯಲ್ಲಿಯೇ ಟಿಇಟಿ ಪರೀಕ್ಷೆ ಬರೆಯುವ ನಿಯಮ ಜಾರಿಗೊಳಿಸಿರುವುದು ಕನ್ನಡ ಶಿಕ್ಷಕರ ಮೂಲಭೂತ ಹಕ್ಕುಗಳು ಹಾಗೂ ಸಮಾನ ಶಿಕ್ಷಣದ ತತ್ವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಉದ್ಯೋಗ ಭದ್ರತೆಗೆ ಕುತ್ತು: ಮರಾಠಿ ಭಾಷೆಯಲ್ಲಿಯೇ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆಯಿಂದ ಅರ್ಹತೆ ಹಾಗೂ ದೀರ್ಘ ಅನುಭವ ಹೊಂದಿರುವ ಅನೇಕ ಕನ್ನಡ ಶಿಕ್ಷಕರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ನೂರಾರು ಶಿಕ್ಷಕರ ಉದ್ಯೋಗ ಭದ್ರತೆ ಅಪಾಯಕ್ಕೆ ಸಿಲುಕಿದ್ದು, ಗಡಿಭಾಗದ ಕನ್ನಡ ಶಾಲೆಗಳ ಅಸ್ತಿತ್ವಕ್ಕೂ ಧಕ್ಕೆ ಉಂಟಾಗುತ್ತಿದೆ. ಇದು ಕನ್ನಡಿಗರ ಸಾಂವಿಧಾನಿಕ ಹಕ್ಕುಗಳ ಮೇಲಿನ ನೇರ ಪ್ರಹಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದಿನ ಮನವಿಗೆ ಸ್ಪಂದನೆ ಇಲ್ಲ: ಈ ಹಿಂದೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದು ಕನ್ನಡದಲ್ಲಿಯೇ ಟಿಇಟಿ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದರು. ಆದರೆ ಈವರೆಗೆ ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ಹೋರ ಹಾಕಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ವೈಯಕ್ತಿಕ ಆಸಕ್ತಿ ವಹಿಸಿ, ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗಳೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿ….. ಗಡಿಭಾಗದ ಕನ್ನಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಗಣೇಶ ರೋಕಡೆ, ರಾಜು ನಾಶಿಪುಡಿ ಹಾಗೂ ತಾಲೂಕು ಅಧ್ಯಕ್ಷ ಸತೀಶ ಗುಡದವರ ಸೇರಿದಂತೆ ಹಲವು ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.