ಮಾಸ್ತಿಹೊಳಿ, ಮಣಗುತ್ತಿ, ನರಸಿಂಗಪುರ ರೈತರಿಂದ ಬಾಳೇಶ ಮಾವನೂರೆಗೆ ಅಭಿನಂದನೆ..
ರೈತಪರ ಹೋರಾಟದ ಯಶಸ್ಸಿಗೆ ಮೆಚ್ಚುಗೆ..
ದಡ್ಡಿ : ಹಿಡಕಲ್ ಜಲಾಶಯ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರ ನ್ಯಾಯಕ್ಕಾಗಿ ನಡೆಸಿದ ಹೋರಾಟಕ್ಕೆ ಮೊದಲ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ರೈತ ಮುಖಂಡ ಬಾಳೇಶ ಮಾವನೂರೆ ಅವರಿಗೆ ಮಾಸ್ತಿಹೊಳಿ ಗ್ರಾಮದಲ್ಲಿ ರೈತರು ಆತ್ಮೀಯ ಸತ್ಕಾರ ಸಲ್ಲಿಸಿದರು.
ಮಾಸ್ತಿಹೊಳಿ, ಮಣಗುತ್ತಿ ಹಾಗೂ ನರಸಿಂಗಪುರ ಗ್ರಾಮದ ಸಂತ್ರಸ್ತ ರೈತರು ಒಟ್ಟಾಗಿ ಸೇರಿ ಬಾಳೇಶ ಮಾವನೂರೆ ಅವರನ್ನು ಪುಷ್ಪಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಜೊತೆಗೆ ಸಿಹಿ ತಿನಿಸಿ ಹೋರಾಟದ ಯಶಸ್ಸನ್ನು ಸಂಭ್ರಮಿಸಿದರು.
ಹಿಡಕಲ್ ಜಲಾಶಯ ಸಂತ್ರಸ್ತ ರೈತರ ದಾಖಲೆ ತಿದ್ದುಪಡಿ ಹಾಗೂ ನ್ಯಾಯಯುತ ಪರಿಹಾರಕ್ಕಾಗಿ ನಾಲ್ಕು ದಿನಗಳ ಕಾಲ ನಡೆದ ಅಹೋರಾತ್ರಿ ಧರಣಿಗೆ ನೇತೃತ್ವ ನೀಡಿದ ಬಾಳೇಶ ಮಾವನೂರೆ ಅವರ ಪ್ರಯತ್ನಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ರೈತರು ಮಾತನಾಡಿ, “ದಶಕಗಳಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗದೆ ಅಲೆದಾಡುತ್ತಿದ್ದೆವು. ಬಾಳೇಶ ಮಾವನೂರೆ ಅವರ ನೇತೃತ್ವದಲ್ಲಿ ನಡೆದ ಹೋರಾಟದಿಂದ ಅಧಿಕಾರಿಗಳು ಸ್ಪಂದಿಸಿ ದಾಖಲೆ ತಿದ್ದುಪಡಿ ಮಾಡಿದ್ದಾರೆ. ಇದು ನಮ್ಮ ಹೋರಾಟದ ಮೊದಲ ಗೆಲುವಾಗಿದೆ. ನಮ್ಮ ಬಾಳು ಬೆಳಗಿಸುವ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ರೈತರು ಬಾಳೇಶ ಮಾವನೂರೆ ಅವರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಸಂತ್ರಸ್ತ ರೈತರ ಉಳಿದ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುವರಿಸುವಂತೆ ಮನವಿ ಮಾಡಿದರು. ಮಾಸ್ತಿಹೊಳಿ ಗ್ರಾಮದಲ್ಲಿ ನಡೆದ ಈ ಸತ್ಕಾರ. ಕಾರ್ಯಕ್ರಮದಲ್ಲಿ ಸಂತ್ರಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟದ ಯಶಸ್ಸನ್ನು ಒಗ್ಗಟ್ಟಿನಿಂದ ಸಂಭ್ರಮಿಸಿದರು.