ಒಂದು ವರ್ಷದ ಅಧ್ಯಕ್ಷ ಅವಧಿ ಯಶಸ್ವಿಯಾಗಿ ಮುಗಿಸಿದ್ದೇನೆ..
ನಗರ ಅಭಿವೃದ್ದಿ ಹಾಗೂ ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ಇದೆ..
ಲಕ್ಷ್ಮಿ ಮಹಾದೇವ ರಾಠೋಡ..
ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಈ ಅವಧಿಯ ಕೊನೆಯ ಸಭೆ ಶುಕ್ರವಾರ ನಡೆದಿದ್ದು, ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮಾಡಿದ ಈ ಒಂದುವರ್ಷದ ಅಧ್ಯಕ್ಷ ಅವಧಿ ತೃಪ್ತಿ ತಂದಿದೆ ಎಂದು ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಲಕ್ಷ್ಮಿ ಮಹಾದೇವ ರಾಠೋಡ ಹೇಳಿದ್ದಾರೆ..
ಸಭೆಯ ನಂತರ ಮಾತನಾಡಿದ ಲಕ್ಷ್ಮೀ ಮಹಾದೇವ ರಾಠೋಡ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ತ್ರಿಚಕ್ರ ವಾಹನಗಳ ವಿತರಣೆ, ನೇರ ಸಾಲ ಸಹಾಯ ಯೋಜನೆ, ಉದ್ಯಾನವನಗಳ ಸ್ವಚ್ಛತಾ ಕಾರ್ಯ ಸೇರಿದಂತೆ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಈ ಎಲ್ಲ ಕಾರ್ಯಗಳ ಯಶಸ್ಸಿಗೆ ಶಾಸಕ ಅಭಯ್ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಮಹಾಪೌರ-ಉಪ ಮಹಾಪೌರ, ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ನೀಡಿದ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ ಪೌರ ಕಾರ್ಮಿಕರ ಕಲ್ಯಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬೆಳಗಿನ ಉಪಹಾರದ ವ್ಯವಸ್ಥೆ, ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು, ಮಳೆಗಾಲದಲ್ಲಿ ಸಮವಸ್ತ್ರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದಿನ ಅವಧಿಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ದೊರೆತರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಲಕ್ಷ್ಮೀ ಮಹಾದೇವ ರಾಠೋಡ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ್, ಆಡಳಿತ ಪಕ್ಷದ ನಾಯಕ ಸಂತೋಷ ಪೇಡನೇಕರ, ಸದಸ್ಯರಾದ ನೀತಿನ್ ಜಾಧವ್, ರೂಪಾ ಚಿಕ್ಕಲದಿನ್ನಿ, ಅಭಿಜೀತ್ ಜವಳಕರ, ರೇಖಾ ಹೂಗಾರ ಸೇರಿದಂತೆ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.