ಪಾಲಿಕೆಯ ಇತಿಹಾಸದಲ್ಲೇ ಗಮನಾರ್ಹ ಸಾಧನೆಗೈದ ಪಾಲಿಕೆ ಸಿಬ್ಬಂದಿ..
ಸೇವಾ ನಿವೃತ್ತಿಯಾದ ದಿನವೇ ನಿವೃತ್ತಿದಾರರಿಗೆ ಪಿಂಚಣಿ ಆದೇಶ ಹಸ್ತಾಂತರ..
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಸೇವಾ ನಿವೃತ್ತಿಯಾದ ದಿನವೇ ತಮ್ಮ ಕಚೇರಿಯ ನಾಲ್ಕು ಜನ ಸಿಬ್ಬಂದಿಗಳಿಗೆ ಪಿಂಚಣಿ (ಪೆನ್ಷನ್) ಆದೇಶ ಪತ್ರವನ್ನು ನೀಡಿದ್ದು, ಸೇವಾ ನಿವೃತ್ತಿ ಪಡೆದ ನಾಲ್ಕು ಜನ ಗ್ರೂಪ್ “ಡಿ” ಸಿಬ್ಬಂದಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಪಾಲಿಕೆ ಸಿಬ್ಬಂದಿಗಳು ಮಾಡಿದ ಕಾರ್ಯ ಗಮನಾರ್ಹವಾಗಿದೆ..
ಶುಕ್ರವಾರ ಜುಲೈ ತಿಂಗಳ ಕೊನೆಯ ದಿನದಂದು ತಮ್ಮ ಸುದೀರ್ಘ ಸೇವೆಯಿಂದ ಸೇವಾನಿವೃತ್ತಿ ಹೊಂದಿದ ನಾಲ್ಕು ಜನ ಸಿಬ್ಬಂದಿಗಳಾದ ಶಕುಂತಲಾ ತಂಗೆನ್ನವರ, ಸಂಜಯ ಬೋಸಲೆ, ಕಲ್ಲಪ್ಪ ಕಾಂಬ್ಳೆ ಹಾಗೂ ರವೀಂದ್ರ ಕೋಲಕಾರ ಅವರನ್ನು ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಿ, ಅವರ ಸುದೀರ್ಘ ಸೇವೆಯಿಂದ ಬೀಳ್ಕೊಡುಗೆ ನೀಡಲಾಯಿತು.

ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ಕಾರ್ತಿಕ ಎಂ ಅವರು, ತಾವೆಲ್ಲ ಪಾಲಿಕೆಯಲ್ಲಿ ಸುದೀರ್ಘವಾಗಿ ಕೆಲಸ ಮಾಡಿ ಇಂದು ನಿವೃತ್ತಿ ಹೊಂದುತ್ತಿದ್ದೀರಾ, ನಿಮ್ಮ ನಿವೃತ್ತಿ ಜೀವನ ಸುಖಕರ ಆಗಿರಲಿ, ಇಷ್ಟು ದಿವಸ ನಮ್ಮ ಪಾಲಿಕೆಯಿಂದ ನಗರವನ್ನು ಸ್ವಚ್ಛವಾಗಿ ಇಡುವ ಕಾರ್ಯದಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾಗಿತ್ತು, ಅದಕ್ಕೆ ಪಾಲಿಕೆಯ ವತಿಯಿಂದ ತಮಗೆ ಧನ್ಯವಾದ ತಿಳಿಸುತ್ತೇವೆ ಎಂದರು.

ಈ ಸೇವಾನಿವೃತ್ತಿ ಕಾರ್ಯಕ್ರಮದಲ್ಲಿ ನಾಮನಿರ್ದೇಶಿತ ನಗರ ಸೇವಕ ದಿನೇಶ ನಾಶಿಪುಡಿ, ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ, ಕಂದಾಯ ಅಧಿಕಾರಿ ಪ್ರಿಯಾಂಕಾ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಪಾಲಿಕೆ ನೌಕರರ ಸಂಘದ ಸದಸ್ಯರು, ಪಾಲಿಕೆಯ ವಿವಿಧ ವಿಭಾಗಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಿ ಕೆ..