ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ..
ಪ್ರತಿ ಮನೆಯಲ್ಲೂ ಪ್ರತ್ಯೇಕ ಗ್ರಂಥಾಲಯ…
ಡಾ. ಮಾನಸ
ಬೆಳಗಾವಿ – 23 : ಪ್ರತಿ ಮನೆಯಲ್ಲೂ ಪೂಜಾ ಕೊಠಡಿ ಇವೆ. ಅದೇ ರೀತಿ ಕಡ್ಡಾಯವಾಗಿ ಪ್ರತ್ಯೇಕ ಗ್ರಂಥಾಲಯ ಕೊಠಡಿ ಇರುವ ಹಾಗೆ ಜಾಗೃತಿ ಮೂಡಿಸುವುದೇ ಮನೆಗೊಂದು ಗ್ರಂಥಾಲಯ ಅನುಷ್ಠಾನ ಯೋಜನೆಯ ಉದ್ದೇಶವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಹೇಳಿದರು.
ಅವರಿಂದು ರಾಮತೀರ್ಥ ನಗರದಲ್ಲಿನ ಹಿರಿಯ ಸಾಹಿತಿ ಶಿವಯೋಗಿ ಕುಸುಗಲ್ಲ ಅವರ ಮನೆಯಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿ ದೇಹದ ಆರೋಗ್ಯಕ್ಕಾಗಿ ಆಹಾರಕ್ಕೆ ಬಳಸಿ, ಮತ್ತೊಂದು ರೂಪಾಯಿ ಮಾನಸಿಕ ಪರಿವರ್ತನೆಯನ್ನು ಮಾಡುವ ಜ್ಞಾನಕ್ಕಾಗಿ ಪುಸ್ತಕ ಕೊಳ್ಳಲು ಬಳಸಿ ಎಂದಿರುವಂತೆ ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲು ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಯೋಜನೆಯನ್ನು ಜಿಲ್ಲಾ ಜಾಗೃತಿ ಸಮಿತಿಗಳ ಮೂಲಕ ಮಾಡಲು ಪುಸ್ತಕ ಪ್ರಾಧಿಕಾರ ಮುಂದಾಗಿದೆ.

ಪುಸ್ತಕಗಳೆಂದರೆ ಜ್ಞಾನದ ಕಟ್ಟು, ಅರಿವಿನ ಹೊತ್ತಿಗೆ. ಇಂತಹ ಪುಸ್ತಕಗಳ ಗ್ರಂಥಾಲಯ ಹೊಂದಿರುವ ವ್ಯಕ್ತಿ ಮತ್ತು ಮನೆಗೆ ಗೌರವ ತರುವ ಕೆಲಸವೂ ನಡೆಯಬೇಕಿದೆ. ಈಗಾಗಲೇ ನಾವು ಹಳ್ಳಿಗಳಲ್ಲೂ ಊರಾಚೆಯ ಗುಡಿಸಲುಗಳಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ವಿವರಿಸಿದರು.
ಕವಿ ಕೃತಿ ಪರಿಚಯದಲ್ಲಿ ಶಿವಯೋಗಿ ಕುಸುಗಲ್ ಅವರ ಕುರಿತು ಮಾತನಾಡಿದ ವಿಮರ್ಶಕಿ ಡಾ. ನಿರ್ಮಲಾ ಬಟ್ಟಲ ಅವರು ಶಿವಯೋಗಿ ಕುಸುಗಲ್ ಅವರು ಬೆಳಗಾವಿಯ ಸಾಂಸ್ಕೃತಿಕ ಲೋಕದಲ್ಲಿ ವಿನಯವಂತಿಕೆಯ ವ್ಯಕ್ತಿ. ಮತ್ತೊಬ್ಬರ ಸಾಹಿತ್ಯ ಅಭಿವೃದ್ಧಿಯನ್ನು ಗೌರವಿಸುವ ಸಾಹಿತಿ. ಇಂತಹ ಗೌರವಾನ್ವಿತ ಕುಸುಗಲ ಅವರು ತಮ್ಮ ಮನೆಯಲ್ಲಿ ಉತ್ತಮ ಕೃತಿಗಳ ಉತ್ಕೃಷ್ಟ ಗ್ರಂಥಾಲಯ ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ನಾಲ್ಕು ಜನ ಹೆಣ್ಣುಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಿದವರು. ಅವರ ಮನೆಯಲ್ಲಿ ಪುಸ್ತಕ ಪ್ರಾಧಿಕಾರವು ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಓದುಗರಿಗೆ ಒಂದು ಮಾದರಿಯಾಗಿದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ್ ಬರಗೂರು ಆಶಯ ನುಡಿಗಳನ್ನಾಡಿದರು. ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರಾದ ಜಿ. ರಾಮಯ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಯಲ್ಲಪ್ಪ ಹಿಮ್ಮಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಸಮಾರಂಭದಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಜಗದೀಶ ಹೊಸಮನಿ, ಬಿ, ವೈ. ನಾಯಕ, ಸ.ರಾ. ಸುಳಕುಡೆ, ದೀಪ್ತಿ ಎಲಿಗಾರ, ವೀರಣ್ಣ ಕೆಂಚಕ್ಕನವರ, ಬಸಪ್ಪ ನಾಯ್ಕರ, ಶಿವಾನಂದ ಮಸಳಿ, ಅಕ್ಕಮಹಾದೇವಿ ತೆಗ್ಗಿ, ಹೇಮಾ ಸೋನಳ್ಳಿ, ದೇಮಣ್ಣ ಸೊಗಲದ, ಸಾಂವಕ್ಕ ಸೊಗಲದ, ಗಂಗಾದೇವಿ ಕುಸುಗಲ, ಪಲ್ಲವಿ ಕುಸುಗಲ, ಸಂಗೀತಾ ಕುಸುಗಲ, ಮಂಜುಳಾ ಕುಸುಗಲ, ರಿತೇಶ ಹೆಜ್ಜೆ, ರವಿ ಹಿರೇಮಠ, ಆನಂದ ರಣಗಟ್ಟಿಮಠ ಮತ್ತಿತರರು ಭಾಗವಹಿಸಿದ್ದರು.
ಆರಂಭದಲ್ಲಿ ಐಶ್ವರ್ಯ ಕಾಂಬಳೆ ನಾಡಗೀತೆ ಹಾಡಿದರು. ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಸಂತೋಷ ನಾಯಿಕ ಸ್ವಾಗತಿಸಿದರು, ಡಾ. ಕವಿತಾ ಕುಸುಗಲ ವಂದಿಸಿದರು, ವಿನಾಯಕ ನಂದಿ ಕಾರ್ಯಕ್ರಮ ನಿರೂಪಿಸಿದರು.