ಪಾಲಿಕೆ ಅಧಿಕಾರಿ ಮೇಲೆ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲು…
ಮೂರು ಜನರನ್ನು ವಶಕ್ಕೆ ಪಡೆದ ಪೊಲೀಸರು..
ಬೆಳಗಾವಿ : ಶುಕ್ರವಾರ ಸಂಜೆ ನಗರದ ಶಹಾಪುರದ ನಾಥ್ ಪೈ ವೃತ್ತದಲ್ಲಿ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುವ ವೇಳೆ ಅಲ್ಲಿನ ವ್ಯಾಪಾರಿಗಳಲ್ಲಿನ ಕೆಲವು ಜನರು ಪಾಲಿಕೆಯ ಅಭಿಯಂತರ ಹಾಗೂ ಅತಿಕ್ರಮಣ ತೆರವು ತಂಡದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಕುರಿತಾಗಿ ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಎಂಎಲ್ ಸಿ ಕೂಡಾ ದಾಖಲು ಆಗಿತ್ತು.
ನಿನ್ನೆಯಿಂದ ಶಾಂತವಾಗಿದ್ದ ಈ ಪ್ರಕರಣ ಮತ್ತೆ ಇಂದು ಮದ್ಯಾಹ್ನ ವೇಗ ಪಡೆದುಕೊಂಡಿದ್ದು, ಶನಿವಾರ ಮಧ್ಯಾಹ್ನ ಶಹಾಪುರ ಪೊಲೀಸ್ ಠಾಣೆಯಲ್ಲಿ, ಕರ್ತವ್ಯನಿರತ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ ಕೆಲವರ ಮೇಲೆ ಎಫ್ಐಆರ್ ಮಾಡಲಾಗಿದ್ದು, ಈಗಾಗಲೇ ಮೂರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಇನ್ನು ಕೆಲವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತೀವ್ರವಾದ ತನಿಖೆಯನ್ನು ನಡೆಸುತ್ತಿದ್ದಾರೆ, ಪಾಲಿಕೆಯ ಆಡಳಿತ ಪಕ್ಷದ ಸದಸ್ಯರೂ ಕೂಡಾ ಇದನ್ನು ಗಂಭೀರವಾಗಿ ತಗೆದುಕೊಂಡಂತೆ ಕಾಣುತ್ತಿದ್ದು,, ಇಂತಹ ಸಮಯದಲ್ಲಿ ಪಾಲಿಕೆಯ ಎಲ್ಲಾ ಸಿಬ್ಬಂದಿಗಳು ಕೂಡಾ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಅವಶ್ಯಕತೆ ಇದ್ದಿದ್ದು, ಮುಂದೆ ಈ ಪ್ರಕರಣದ ತನಿಖೆ, ವಿಚಾರಣೆ ಯಾವ ರೀತಿ ಸಾಗುತ್ತೆ ಎಂಬುದು ಕಾದು ನೋಡಬೇಕಿದೆ..