26ಕ್ಕೆ ನಡೆಯುವ ಸಿಎಂ ಸಭೆಯಲ್ಲಿ ರೈತರ ಬೇಡಿಕೆ ಈಡೇರಲಿ..
ಸ್ಪಂದನೆ ಸಿಗದಿದ್ದರೆ 27ಕ್ಕೆ ಕರ್ನಾಟಕ ಬಂದಗೆ ಕರೆ ನೀಡುತ್ತೇವೆ..
ಚೂನಪ್ಪ ಪೂಜಾರಿ, ರಾಜ್ಯಾಧ್ಯಕ್ಷ ಕರಾರೈಸಂ ಹಾಗೂ ಹಸಿರು ಸೇನೆ..
ಬೆಳಗಾವಿ : ಅ.26ರಂದು ಬೆಳಗಾವಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ ನಡೆಸಲಿರುವ ಸಭೆಯಲ್ಲಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರುವ ಭರವಸೆಯಿದೆ. ಒಂದು ವೇಳೆ ಸಿಎಂ ಸಭೆಯಲ್ಲಿ ಸ್ಪಂದನೆ ಸಿಗದಿದ್ದರೆ, ಅ.27ರಂದು ಕರ್ನಾಟಕ ಬಂದ್ ಗೆ ಕರೆ ಕೊಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಸೋಮವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದಾರೆ. ಅವತ್ತೆ ಮಧ್ಯಾಹ್ನ ರೈತ ಮುಖಂಡರ ಜೊತೆಗೂ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ನಿರೀಕ್ಷೆಯಂತೆ ಆರನೇ ಗ್ಯಾರಂಟಿ ಆಗಿ ರಾಜ್ಯ ಸರ್ಕಾರ ಪ್ರತಿ ಟನ್ ಗೆ 1 ಸಾವಿರ ರೂ. ಘೋಷಣೆ ಮಾಡಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮೋಸ ತಡೆಯಲು 500 ಕೋಟಿ ಮೀಸಲಿಡಬೇಕು. ಬೆಳಗಾವಿಯಲ್ಲಿರುವ ಸಕ್ಕರೆ ಆಯುಕ್ತ ಕಚೇರಿಗೆ ಆಯುಕ್ತರನ್ನ ನೇಮಕ ಮಾಡುವ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಸಿಎಂ ಕರೆದಿರುವ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಭಾಗವಹಿಸಬೇಕು. ಜೊತೆಗೆ ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದಂತೆ, ತಕ್ಷಣವೇ ಕೇಂದ್ರ ಸಚಿವರು ಎಲ್ಲಾ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಎಂಎಸ್ಪಿ ಹೆಚ್ಚಳ ಮಾಡಬೇಕು. ಕಾರ್ಖಾನೆಗಳಿಂದ ಪ್ರತಿ ಟನ್ ಗೆ 4,500 ರೂ. ಕೊಡಿಸಬೇಕು ಎಂದು ಆಗ್ರಹಿಸಿದರು.
ಇದೇ ಅಕ್ಟೋಬರ್ 25ರಿಂದ ಗುರ್ಲಾಪುರದಲ್ಲಿ ಸಾಂಕೇತಿಕ ಪ್ರತಿಭಟನೆ ಆರಂಭಿಸುತ್ತೇವೆ. ಅ.26ರಂದು ಸಿಎಂ ನೇತೃತ್ವದ ಸಭೆಯಲ್ಲಿ ನಮಗೆ ಸ್ಪಂದನೆ ಸಿಗುವ ಭರವಸೆಯಿದೆ. ಒಂದು ವೇಳೆ ಬೇಡಿಕೆಗೆ ಸ್ಪಂದನೆ ಸಿಗದಿದ್ದರೇ ಉಗ್ರ ಹೋರಾಟ ಮಾಡುತ್ತೇವೆ. ಅ.27 ರಂದು ಅನಿವಾರ್ಯವಾಗಿ ಕರ್ನಾಟಕ ಬಂದ್ ಕರೆ ಕೊಡಬೇಕಾಗುತ್ತದೆ. ರೈತರ ಜೊತೆಗೆ ಎಲ್ಲ ಸಾರ್ವಜನಿಕರು ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದರು.
ಕಾರ್ಖಾನೆ ಮಾಲೀಕರು ಕಳೆದ 9 ವರ್ಷಗಳಿಂದ ಎಂಎಸ್ಪಿ ಹೆಚ್ಚಿಸುವ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿರಲಿಲ್ಲ. ಆದರೆ, ನಮ್ಮ ಹೋರಾಟದ ಮೂಲಕ ಎಂಎಸ್ಪಿ ಹೆಚ್ಚಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈಗಾಗಲೇ ಸಕ್ಕರೆ ಕಾರ್ಖಾನೆಗಳು ಆರಂಭವಾಗಬೇಕಿತ್ತು. ಭೀಕರ ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಮಾಲೀಕರು ರೈತರು ಒಳ್ಳೆಯ ಸುದ್ದಿ ಕೊಟ್ಟರೆ, 27ರಂದು ಕಾರ್ಖಾನೆಗಳನ್ನು ಆರಂಭಿಸಲಿ ಎಂದು ಚೂನಪ್ಪ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಪ್ರೇಮ್ ಚೌಗುಲಾ, ಕಿಶನ್ ನಂದಿ ಇದ್ದರು.