ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ: ಸಿಎಂ ಡಿ ಕೆ ಶಿವಕುಮಾರ್

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ: ಸಿಎಂ ಡಿ ಕೆ ಶಿವಕುಮಾರ್

ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಬಜೆಟ್ ನಲ್ಲಿ ₹40 ಕೋಟಿ ಅನುದಾನ

ಕಿತ್ತೂರಿನ ಅಭಿವೃದ್ಧಿಗೆ ಸುಮಾರು 1 ಸಾವಿರ ಕೋಟಿ ಮೊತ್ತದ ಯೋಜನೆಗಳು

ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ

ಕಿತ್ತೂರು (ಬೆಳಗಾವಿ), ಅ.25:

“ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು. ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ತಕ್ಷಣವೇ ಆದೇಶ ನೀಡಲಾಗುವುದು. ಶಾಸಕರ ಬೇಡಿಕೆ ಮೇರೆಗೆ ಮುಂದಿನ ಬಜೆಟ್ ನಲ್ಲಿ ₹40 ಕೋಟಿ ಅನುದಾನ ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

“ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರು ಈ ಕೋಟೆಯಲ್ಲಿ ಇತಿಹಾಸದ ಪುಟ ಬರೆಯಬೇಕು, ಜನ ನನ್ನನ್ನು ಅಭಿಮಾನಪೂರ್ವಕವಾಗಿ ಆಯ್ಕೆ ಮಾಡಿದ್ದು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಬಯಸಿದ್ದಾರೆ. ಮುಂದಿನ ಪೀಳಿಗೆಗೆ ಈ ಕೋಟೆಯನ್ನು ಪ್ರವಾಸಿ ಕೇಂದ್ರ ಆಗಲು ಮನವಿ ಮಾಡಿದರು. ದೇವರು ವರ, ಶಾಪ ನೀಡಲ್ಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಸಂದರ್ಭದಲ್ಲಿ ಇಲ್ಲಿಗೆ ಬಂದಿರುವಾಗ ಏನಾದರೂ ಒಂದು ಕೊಡುಗೆ ನೀಡಬೇಕು. ಇತಿಹಾಸ ಉಳಿಸಲು, ನಮ್ಮ ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದು ತಿಳಿಸಿದರು.

“ಜನರ ಧ್ವನಿಗೆ ಸ್ಪಂದಿಸಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ನಾನು ನೀರಾವರಿ ಸಚಿವನ್ನಾಗಿದ್ದಾಗ ಈ ಭಾಗದ ರೈತರ ಬದುಕಿಗೆ ಚನ್ನಋಷವೇಂದ್ರ ಅವರ ಹೆಸರಲ್ಲಿ ಏತ ನೀರಾವರಿ ಯೋಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 520 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಚಿಂತನೆ ನಡೆಸಿದೆ” ಎಂದು ಭರವಸೆ ನೀಡಿದರು.

“ಈ ಕ್ಷೇತ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ, 300 ಕೋಟಿ ಮೊತ್ತದ ಲೋಕೋಪಯೋಗಿ ಇಲಾಖೆ ಕಾಮಗಾರಿ ಸೇರಿದಂತೆ ಸುಮಾರು 1 ಸಾವಿರ ಕೋಟಿ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ವಿವರಿಸಿದರು.

ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ

“ಕಿತ್ತೂರಿಗೆ ತನ್ನದೇ ಆದ ಇತಿಹಾಸವಿದೆ. ಚನ್ನಮ್ಮ ಕನ್ನಡದ ಮಣ್ಣಿಗಾಗಿ ಮಡಿದ ದಿಟ್ಟ ಹೋರಾಟಗಾರ್ತಿ. ಕಿತ್ತೂರಿನ ಕಥೆ ಚನ್ನಮ್ಮ ಅವರ ಇತಿಹಾಸ ಸಾರುತ್ತದೆ, ಸ್ವಾಭಿಮಾನದ ಮಹಿಮೆ. ರಾಣಿ ಚನ್ನಮ್ಮನ ಧೈರ್ಯ ಪ್ರತಿ ಪೀಳಿಗೆಗೆ ಸ್ವಾಭಿಮಾನದ ಪಾಠ. ಕಿತ್ತೂರು ಎಂದರೆ ವೀರರ ಸಂಕೇತ. ಕಿತ್ತೂರು ಉತ್ಸವ ನಾಡಿನ ಹೆಮ್ಮೆಯ ಸಂಕೇತ. ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ. ಚನ್ನಮ್ಮ ಅವರ ತ್ಯಾಗದ ನೆನಪು ಅಜರಾಮರ. ನಾಡಿನ ಸಂಸ್ಕೃತಿ. ಚನ್ನಮ್ಮ ಎಂಬುದು ಕೇವಲ ಹೆಸರಲ್ಲ ಸ್ವಾಭಿಮಾನ, ಶೌರ್ಯ, ಸ್ವಾತಂತ್ರ್ಯದ ಸಂಕೇತ” ಎಂದು ಬಣ್ಣಿಸಿದರು.

“ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ಪಾತ್ರ ದೊಡ್ಡದು. ಸೀತೆಯ ತ್ಯಾಗ ಮಹಿಳೆಯರಿಗೆ ಮಾದರಿ. ಅದೇ ರೀತಿ ಚನ್ನಮ್ಮ ಅವರ ತ್ಯಾಗ, ಶೌರ್ಯ ಮಹಿಳೆಯರಿಗೆ ಮಾದರಿ. ರಾಜ್ಯದಲ್ಲಿ ಶಾಂತಿಯುತ ಉತ್ತಮ ಆಡಳಿತ ನೀಡುತ್ತಿದ್ದೇವೆ. ಈ ಕ್ಷೇತ್ರದ ಶಾಸಕರ ಜೊತೆ ಇಡೀ ಸರ್ಕಾರ ಇದೆ” ಎಂದು ತಿಳಿಸಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಯಜಮಾನಿಯರಿಗೆ ಮಾಸಿಕ 2 ಸಾವಿರ ನೀಡಲಾಗುತ್ತಿದೆ. (ಗೃಹಲಕ್ಷ್ಮಿ ಯೋಜನೆ ಮೂಲಕ 76,950 ಕೋಟಿ ರೂ. ಹಣ ನೀಡಲಾಗಿದೆ). ಅನ್ನಭಾಗ್ಯ, ಯುವನಿಧಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ನಿಮ್ಮ ಮನೆಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಲು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಸುವರ್ಣ ಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದೆವು. ಸಮಾನತೆಯಿಂದ ಬೆಳೆಯಲು, ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯಲು ಕಾರ್ಯಕ್ರಮ ರೂಪಿಸಿದ್ದೇವೆ” ಎಂದು ವಿವರಿಸಿದರು.

ಕರ್ನಾಟಕದ ನೆಲ ಬಸವಣ್ಣ ಅವರ ಕಾಯಕ, ದಾಸೋಹದ ಸಮಾನತೆ ಸಂದೇಶ ಸಾರಿದೆ

“ಕರ್ನಾಟಕದ ನೆಲ ಬಸವಣ್ಣ ಅವರ ಕಾಯಕ, ದಾಸೋಹದ ಸಮಾನತೆ ಸಂದೇಶವನ್ನು ಜಗತ್ತಿಗೆ ಸಾರಿದೆ. ದ್ವೇಷದಿಂದ ಉತ್ತರ ಸಿಗಲ್ಲ, ಜನರನ್ನು ಪ್ರೀತಿಯಿಂದ ಕಂಡಾಗ ನಮಗೆ ಉತ್ತರ ನೀಡಲು ಸಾಧ್ಯ. ಈ ಸರ್ಕಾರ ನಿಮ್ಮ ಜತೆ ನಿಲ್ಲುತ್ತದೆ. ನಿಮಗಾಗಿ ಅನೇಕ ಕಾರ್ಯಕ್ರಮ ರೂಪಿಸಿದೆ. ನಮ್ಮ ಸರ್ಕಾರ ಅನೇಕ ಬದಲಾವಣೆ ತಂದಿದ್ದು, ನೀವು ಕೊಟ್ಟ ಅವಕಾಶದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *