ಕೃಷಿ ಭೂಮಿಗೆ ನ್ಯಾಯಯುತ ಪರಿಹಾರಕ್ಕಾಗಿ ರಾಜ್ಯ ರೈತ ಸಂಘದ ಪ್ರತಿಭಟನೆ..
ಬೆಳಗಾವಿ : ಧಾರವಾಡ–ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ನ್ಯಾಯಯುತ ಪರಿಹಾರ ನೀಡಬೇಕು ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಚುಣಪ್ಪ ಪೂಜಾರಿ ಅವರು, ಭೂಸ್ವಾಧೀನಕ್ಕೆ ಪರಿಹಾರ ನಿಗದಿಪಡಿಸುವಲ್ಲಿ ಸರ್ಕಾರ ಹಾಗೂ ರೈಲ್ವೆ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು. ದಿವಂಗತ ಸಂಸದ ಸುರೇಶ ಅಂಗಡಿ ಅವರ ಅವಧಿಯಿಂದಲೇ ಈ ವಿಷಯದಲ್ಲಿ ಹೋರಾಟ ನಡೆಯುತ್ತಿದ್ದು, ಇದುವರೆಗೆ ರೈತರಿಗೆ ನ್ಯಾಯ ದೊರೆತಿಲ್ಲ ಎಂದು ಹೇಳಿದರು.
ಧಾರವಾಡ–ಬೆಳಗಾವಿ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿ ಮಲಪ್ರಭಾ ನದಿ ತಟದ ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದ್ದು, ಇದೇ ರೀತಿಯ ಭೂಮಿಯನ್ನು ಬೇರೆಡೆ ಖರೀದಿಸಲು ಸಾಧ್ಯವಾಗುವಂತೆ ಪ್ರತಿ ಎಕರೆಗೆ ಕನಿಷ್ಠ ₹3 ಕೋಟಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಿಡದಿ ಪ್ರದೇಶದಲ್ಲಿ ಭೂಸ್ವಾಧೀನಕ್ಕೆ ಎಕರೆಗೆ ₹3 ಕೋಟಿವರೆಗೆ ಪರಿಹಾರ ನೀಡಲಾಗಿದ್ದು, ಅದೇ ಮಾನದಂಡವನ್ನು ಬೆಳಗಾವಿ ಜಿಲ್ಲೆಯ ರೈತರಿಗೆ ಅನ್ವಯಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ವೇಳೆ, ಭೂಮಿ ಕಳೆದುಕೊಂಡ ಪ್ರತಿಯೊಂದು ರೈತ ಕುಟುಂಬದ ಒಬ್ಬ ಸದಸ್ಯರಿಗೆ ರೈಲ್ವೆ ಅಥವಾ ಸಂಬಂಧಿತ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಎಂದು ಸಂಘ ಆಗ್ರಹಿಸಿತು.
ರೈತರ ಬೇಡಿಕೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿತು.
ಧರಣಿಯಲ್ಲಿ ಪ್ರಕಾಶ ನಾಯಕ್, ಕಿಶನ್ ನಂದಿ, ಪ್ರೇಮ್ ಚೌಗಲಾ, ಪಡಿಗೌಡ ಬಾಗೇವಾಡಿ, ಜಾವೇದ್ ಮುಲ್ಲಾ, ಮಾರುತಿ ಲೋಕೂರ್, ಪರಶುರಾಮ ಜಾಧವ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.