ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ವಿಭಾಗದ ಕಾರ್ಯಚರಣೆ..
ಆಸ್ತಿ ತೆರಿಗೆ ಪರಿಶೀಲನೆಗೆ ಪೀಲ್ಡಿಗಿಳಿದ ಉತ್ತರ ಕಂದಾಯ ವಿಭಾಗದ ಸಿಬ್ಬಂದಿಗಳು.
ಬಹುಮಹಡಿ ವಾಣಿಜ್ಯ ಕಟ್ಟಡಗಳ ಮರುಮಾಪನ..
ಬೆಳಗಾವಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬ್ರಹತ್ ಹಾಗೂ ಬಹುಮಹಡಿ ವಾಣಿಜ್ಯ ಕಟ್ಟಡಗಳಿಂದ ಸರಿಯಾದ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿ ಆಗಬೇಕೆಂದು ಹಾಗೂ ಪಾಲಿಕೆಯ ಆದಾಯವನ್ನು ದ್ವಿಗುಣಗೊಳಿಸುವ ಹಿನ್ನೆಲೆಯಲ್ಲಿ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತೆರಿಗೆ ಪರಿಶೀಲನೆ ಹಾಗೂ ಮರುಮಾಪನ ಕಾರ್ಯಕ್ಕಾಗಿ ಫೀಲ್ಡಿಗೆ ಇಳಿದಿದ್ದರು.
ಮಂಗಳವಾರ ನಗರದ ಶ್ರೀ ಕೃಷ್ಣದೇವರಾಯ ವೃತ್ತದ ವಾರ್ಡ್ ನಂ.18ರ, ಜೆಎನ್ಎಂಸಿ ರಸ್ತೆಯಲ್ಲಿರುವ ವಿವಿಧ ಬಹುಮಹಡಿ ವಾಣಿಜ್ಯ ಕಟ್ಟಡಗಳಿಗೆ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಕಟ್ಟಡಗಳ ಮರುಮಾಪನ ನಡೆಸಿದರು.

ತೆರಿಗೆ ವ್ಯಾಪ್ತಿಗೆ ಒಳಪಟ್ಟು ಸಮರ್ಪಕವಾಗಿ ತೆರಿಗೆ ಪಾವತಿಸದ ಹಾಗೂ ಇದುವರೆಗೆ ತೆರಿಗೆ ವ್ಯಾಪ್ತಿಗೆ ಒಳಪಡದ ಕಟ್ಟಡಗಳನ್ನು ಗುರುತಿಸಿ ಪರಿಶೀಲನೆ ನಡೆಸಲಾಗಿದೆ,
ಮಂಗಳವಾರ ಸುಮಾರು ನಾಲ್ಕೈದು ಬಹುಮಹಡಿ ವಾಣಿಜ್ಯ ಕಟ್ಟಡಗಳ ಮರುಮಾಪನ ಹಾಗೂ ತೆರಿಗೆ ನಿರ್ಧರಣೆಯನ್ನು ಪರಿಶೀಲನೆ ನಡೆಸಲಾಯಿತು. ಕಟ್ಟಡದ ವಿಸ್ತೀರ್ಣ, ಬಳಕೆ ಹಾಗೂ ತೆರಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಪರಿಷ್ಕೃತ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ಉತ್ತರದ ವಲಯ ಆಯುಕ್ತರ ಕಚೇರಿಯಿಂದ ಮಂಗಳವಾರದಿಂದ ಆಸ್ತಿ ಮರುಮಾಪನ ಕಾರ್ಯ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಉತ್ತರ ವಲಯ ಕಂದಾಯ ವಿಭಾಗದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಈ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉತ್ತರದ ವಲಯ ಆಯುಕ್ತರ ಕಚೇರಿಯ ವಲಯ ಆಯುಕ್ತರು, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು ಸೇರಿದಂತೆ ಮಹಾನಗರ ಪಾಲಿಕೆಯ ಸಿಬ್ಬಂದಿ ಉಪಸ್ಥಿತರಿದ್ದರು.