ಬೆಳಗಾವಿಯಲ್ಲಿ ಆರ್ ಎಸ್ಎಸ್ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ..

ಬೆಳಗಾವಿಯಲ್ಲಿ ಆರ್ ಎಸ್ಎಸ್ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ..

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮಹತ್ವದ ಸಭೆಯು ಕರ್ನಾಟಕದ ಬೆಳಗಾವಿ ನಗರದ ಅನಗೋಳದಲ್ಲಿರುವ ಸಂತ ಮೀರಾ ಶಾಲಾ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭವಾಯಿತು. ಸಂಘದ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಸಭೆಗೆ ದೇಶದ ವಿವಿಧ ಭಾಗಗಳಿಂದ ಪ್ರಮುಖ ಪದಾಧಿಕಾರಿಗಳು ಮತ್ತು ಸಂಘಟನಾ ಕಾರ್ಯಕರ್ತರು ಆಗಮಿಸಿದ್ದು, ಮುಂದಿನ ಕಾರ್ಯಯೋಜನೆ ಹಾಗೂ ಸಂಘಟನಾ ವಿಸ್ತರಣೆಯ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ಸಭೆಯಲ್ಲಿ ಸಂಘದ ಪೂಜ್ಯ ಸರಸಂಘಚಾಲಕರಾದ ಡಾ. ಮೋಹನ ಭಾಗವತ್ ಜೀ, ಮಾನ್ಯ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಜೀ, ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಕಾರ್ಯವಿಭಾಗದ ಪ್ರಮುಖರು ಹಾಗೂ ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು ಸೇರಿದಂತೆ ದೇಶದ ಎಲ್ಲಾ 46 ಪ್ರಾಂತಗಳ ಪ್ರಾಂತ ಪ್ರಚಾರಕರು ಮತ್ತು ಸಹ ಪ್ರಾಂತ ಪ್ರಚಾರಕರು ಭಾಗವಹಿಸಿದ್ದಾರೆ.

ಇದರೊಂದಿಗೆ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳೂ ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಮಾರ್ಚ್ 2026ರ ಬಳಿಕ ದೇಶದ ವಿವಿಧ ಭಾಗಗಳಲ್ಲಿ ನಡೆದ ಸಂಘದ ತರಬೇತಿ ವರ್ಗಗಳ ವರದಿಯನ್ನು ಸಭೆಯಲ್ಲಿ ಮಂಡಿಸಲಾಗುತ್ತಿದ್ದು, ಶಾಖಾ ಮಟ್ಟದಲ್ಲಿ ಅನುಷ್ಠಾನಗೊಂಡಿರುವ ಕಾರ್ಯಯೋಜನೆಗಳ ಪರಿಶೀಲನೆ ಮತ್ತು ಅವುಗಳ ಪರಿಣಾಮಕಾರಿತ್ವದ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಸಂಘದ ಕಾರ್ಯವಿಸ್ತರಣೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ರೂಪಿಸುವ ನಿರೀಕ್ಷೆಯಿದೆ.

ಸಂಘದ ಶತಾಬ್ದಿ ವರ್ಷದ ಅಂಗವಾಗಿ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವುದು, ಹೊಸ ಪ್ರದೇಶಗಳಿಗೆ ಸಂಘಟನಾ ಕಾರ್ಯವನ್ನು ವಿಸ್ತರಿಸುವುದು ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ಸಂಪರ್ಕವನ್ನು ಬಲಪಡಿಸುವ ಕುರಿತು ವಿಶೇಷ ಪರಾಮರ್ಶೆ ನಡೆಯಲಿದೆ. ಶತಾಬ್ದಿ ವರ್ಷದ ಅಂಗವಾಗಿ ಈಗಾಗಲೇ ಆಯೋಜಿಸಲಾದ ಕಾರ್ಯಕ್ರಮಗಳ ಅವಲೋಕನ ನಡೆಸುವುದರ ಜೊತೆಗೆ, 2026ರ ಅಕ್ಟೋಬರ್ 20ರವರೆಗೆ ನಡೆಯಲಿರುವ ಉಳಿದ ಕಾರ್ಯಕ್ರಮಗಳ ರೂಪುರೇಷೆಗೂ ಸಭೆಯಲ್ಲಿ ಅಂತಿಮ ಸ್ಪರ್ಶ ನೀಡಲಾಗಲಿದೆ.

ಇದರ ಜೊತೆಗೆ ಮುಂಬರುವ ವರ್ಷದಲ್ಲಿ ಪೂಜ್ಯ ಸರಸಂಘಚಾಲಕರಾದ ಡಾ. ಮೋಹನ ಭಾಗವತ್ ಜೀ ಅವರ ದೇಶವ್ಯಾಪಿ ಪ್ರವಾಸ ಯೋಜನೆ, ವಿವಿಧ ರಾಜ್ಯಗಳಲ್ಲಿನ ಸಂಘಟನಾ ಬೆಳವಣಿಗೆಗಳು ಹಾಗೂ ರಾಷ್ಟ್ರದ ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಂಘಟನಾ ವಿಚಾರಗಳ ಕುರಿತು ಸವಿವರ ಚರ್ಚೆ ನಡೆಯಲಿದೆ.
ಸಂಘದ ಶತಾಬ್ದಿ ವರ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಚರಿಸುವ ಉದ್ದೇಶದಿಂದ ವಿವಿಧ ಹಂತಗಳ ಕಾರ್ಯಕರ್ತರ ಜವಾಬ್ದಾರಿಗಳು, ಸಂಘಟನಾ ಚಟುವಟಿಕೆಗಳ ಸಮನ್ವಯ ಹಾಗೂ ಭವಿಷ್ಯದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆರಂಭವಾಗಿರುವ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ದಿಕ್ಕುನಿರ್ಧಾರ ಮಾಡುವ ಪ್ರಮುಖ ವೇದಿಕೆಯಾಗಿ ಪರಿಗಣಿಸಲಾಗಿದೆ.