ಮಾಹಿತಿ ಆಯೋಗದ ಭ್ರಷ್ಟಾಚಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ..
ರಾಜ್ಯಪಾಲರಿಗೆ ಭೀಮಪ್ಪ ಗಡಾದ್ ಎಚ್ಚರಿಕೆ…
ಬೆಳಗಾವಿ : ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಆಯುಕ್ತರ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರ ಮತ್ತು ನಿಯಮ ಉಲ್ಲಂಘನೆ ಆರೋಪಗಳ ಕುರಿತು ತಕ್ಷಣವೇ ಸೂಕ್ತ ಕ್ರಮ ಜರುಗಿಸದಿದ್ದರೆ, ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಾಮಾಜಿಕ ಹೋರಾಟಗಾರರು ಮತ್ತು ಆರ್.ಟಿ.ಐ ಕಾರ್ಯಕರ್ತರು ಮಾಹಿತಿ ಆಯೋಗದ ಆಯುಕ್ತರ ವಿರುದ್ಧ ವಿವಿಧ ಗಂಭೀರ ಸ್ವರೂಪದ ದೂರುಗಳನ್ನು ದಾಖಲೆ ಸಮೇತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿದ್ದರು. ಸರ್ಕಾರವು ಮುಂದಿನ ಅಗತ್ಯ ಕ್ರಮಕ್ಕಾಗಿ ಈ ದೂರುಗಳನ್ನು ರಾಜಭವನಕ್ಕೆ ಕಳುಹಿಸಿ ಸುಮಾರು ೫ ತಿಂಗಳುಗಳು ಕಳೆದರೂ ರಾಜ್ಯಪಾಲರು ಇದುವರೆಗೂ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಭವನದ ವಿಳಂಬ ನೀತಿಯನ್ನು ಖಂಡಿಸಿರುವ ಅವರು, ಈ ಬೇಜವಾಬ್ದಾರಿತನಕ್ಕೆ ರಾಜಭವನದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಆಡಳಿತದ ಹಿತದೃಷ್ಟಿಯಿಂದ ಸಂವಿಧಾನದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಈ ಭ್ರಷ್ಟಾಚಾರದ ವಿರುದ್ಧ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಪತ್ರದ ಮೂಲಕ ಆಗ್ರಹಿಸಲಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನಗಳ ಉಲ್ಲಂಘನೆ ಆರೋಪ : ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದ್ದು, ಈ ಕುರಿತು ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ (ಹೈಕೋರ್ಟ್) ಪ್ರಕರಣ ದಾಖಲಾಗಿದೆ ಎಂದು ಭೀಮಪ್ಪ ಗಡಾದ್ ನೆನಪಿಸಿದ್ದಾರೆ.
”ಒಬ್ಬ ವ್ಯಕ್ತಿಯು ೨೫ ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅದನ್ನು ಕಾಯ್ದೆಯ ದುರ್ಬಳಕೆ ಎಂದು ಬಿಂಬಿಸಲಾಗುತ್ತಿದೆ. ನಿಯಮಾವಳಿಗಳಲ್ಲಿ ಯಾವುದೇ ಅವಕಾಶವಿಲ್ಲದಿದ್ದರೂ ೨೨ ಜನ ಆರ್.ಟಿ.ಐ ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಆಯುಕ್ತರು ಮಾಧ್ಯಮಗಳ ಮುಂದೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.”
ಸರ್ಕಾರಿ ನೌಕರರ ವೈಯಕ್ತಿಕ ಮಾಹಿತಿಯನ್ನು ನೀಡಲು ನಿರಾಕರಿಸುವ ಮೂಲಕ ಇಡೀ ಮಾಹಿತಿ ಹಕ್ಕು ಕಾಯ್ದೆಯನ್ನೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಯುಕ್ತರು ಸಂವಿಧಾನದ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗಡಾದ್ ದೂರಿದ್ದಾರೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಆಯುಕ್ತರ ಮೇಲೆ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದ್ದಾರೆ.