ಸ್ಥಾಯಿ ಸಮಿತಿ ಸಭೆಯಲ್ಲಿ ಶಹಾಬ್ಬಾಸ್ ಪಡೆದ ವಲಯ ಆಯುಕ್ತ..
ಕಂದಾಯ ಸಿಬ್ಬಂದಿಗಳ ಬದಲಾವಣೆ ಪ್ರಕ್ರಿಯೆಗೆ ನಗರ ಸೇವಕರ ಸಿಡಿಮಿಡಿ..
ದಕ್ಷಿಣ ವಲಯ ಆಯುಕ್ತರ ವಿಷಯಕ್ಕೆ ಸಭೆಯನ್ನು ನಗೆಗಡಲಿನಲ್ಲಿ ತೇಲಿಸಿದ ಮೇತ್ರಿ ಡೈಲಾಗ್..
ಬೆಳಗಾವಿ : ಪಾಲಿಕೆಗೆ ಸಂಬಂದಿಸಿದ ಪ್ರಮುಖ ವೃತ್ತ ಹಾಗೂ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಬ್ರಹತ್ ಗಾತ್ರದ ಜಾಹೀರಾತು ಫಲಕಗಳನ್ನು ಹಾಕಿದ್ದು, ಅವುಗಳ ಬಗ್ಗೆ ತಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಿತಿ ಸದಸ್ಯರು ಕೇಳಿದಾಗ, ತಪ್ಪಿತಸ್ಥರ ಮೇಲೆ ಮಾಡಿದ ಎಫ್ಆಯ್ಆರ್ ಹಾಗೂ ಉಳಿದ ಕಡೆ ತಾವು ಮಾಡಿರುವ ಕೆಲಸದ ಎಲ್ಲಾ ವರದಿಗಳನ್ನು ಉತ್ತರದ ವಲಯ ಆಯುಕ್ತ ಅನಿಲ್ ಬೋರಗಾವಿ ಅವರು ಸಮಿತಿಯ ಸದಸ್ಯರ ಮೆಂದೆ ಇಟ್ಟಾಗ, ಅಧಿಕಾರಿಗಳಾದಿಯಾಗಿ ಎಲ್ಲರೂ ವಲಯ ಆಯುಕ್ತರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಸೋಮವಾರ ದಿನಾಂಕ 08/06/2026ರಂದು ಪಾಲಿಕೆಯ ಸ್ಥಾಯಿ ಸಮಿತಿ ಸಭಾಭವನದಲ್ಲಿ ಜರುಗಿದ ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ರೇಖಾ ಹೂಗಾರ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಉತ್ತರದ ವಲಯ ಆಯುಕ್ತರು, ಅನಧಿಕೃತ ಜಾಹಿರಾತು ಫಲಕ ಅಳವಡಿಸಿದವರ ಮೇಲೆ ಈಗಾಗಲೇ ಎರಡು ಪ್ರಕರಣ ದಾಖಲಿಸಿದ್ದು, ಇನ್ನೂ ಕೆಲೆವೆಡೆ ತೆರವು ಕಾರ್ಯಚಾರಣೆ ಮಾಡುತ್ತಿದ್ದೇವೆ, ಒಂದಿಷ್ಟು ಕಡೆಗಳಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆಯೂ ಸಭೆಗೆ ವಿವರಣೆ ನೀಡಿದ್ದು, ಅದಕ್ಕೆ ಉಪ ಮಹಾಪೌರರು ಹಾಗೂ ಉಪ ಆಯುಕ್ತರು ಅಭಿವೃದ್ಧಿ ತಮ್ಮ ಉತ್ತಮ ಕೆಲಸಕ್ಕೆ ಅಭಿನಂದನೆಗಳು ಎಂದಿದ್ದಾರೆ..

ಇನ್ನು ಇತ್ತೀಚಿಗೆ ಪಾಲಿಕೆಯ ಕಂದಾಯ ವಾರ್ಡಗಳು ಹಾಗೂ ಚುನಾವಣಾ ವಾರ್ಡುಗಳು ಒಂದೇ ಆಗಿದ್ದರಿಂದ ಕೆಲ ಸಿಬ್ಬಂದಿಗಳ ಆಂತರಿಕ ವರ್ಗಾವಣೆ ಆಗಿದ್ದು, ಅದನ್ನು ಯಾರು ಮಾಡಿದ್ದು, ಯಾವಾಗ ಮಾಡಿದ್ದು ಎಂಬುದು ನಮ್ಮ ಗಮನಕ್ಕೆನೇ ಬಂದಿಲ್ಲ ಎಂದು ಮೇಯರ್ ಹಾಗೂ ಉಪ ಮೇಯರ್, ಸಮಿತಿ ಸದಸ್ಯರು ಕೇಳಿದರು, ಇದಕ್ಕೆ ಉತ್ತರಿಸಿದ ಉಪ ಆಯುಕ್ತ ಆಡಳಿತ ಅವರು, ಕಂದಾಯ ಉಪ ಆಯುಕ್ತರು ಆಂತರಿಕ ವರ್ಗಾವಣೆಯ ಪಟ್ಟಿ ಮಾಡಿ ಆಯುಕ್ತರಿಗೆ ನೀಡಿರುತ್ತಾರೆ, ಆಯುಕ್ತರು ಪಟ್ಟಿಯ ಪ್ರಕಾರ ಆದೇಶ ಮಾಡಿ ಎಂದಾಗ ನಾವು ಮಾಡಿದ್ದೇವೆ ಎಂದರು. ಸಭೆಯಲ್ಲಿ ಸದಸ್ಯ ಜಯಂತ ಜಾಧವ ಅವರು ಈ ವಿಷಯ ಪ್ರಸ್ತಾಪಿಸಿ ಸಿಬ್ಬಂದಿಗಳ ಕನಿಷ್ಠ ವರ್ಗಾವಣೆಯೂ ನಮಗೆ ತಿಳಿಯಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಕಳೆದ ಆರು ತಿಂಗಳಲ್ಲಿ ನನ್ನ ವಾರ್ಡಿನಲ್ಲಿ ಬಹಳ ಸಲ ಸಿಬ್ಬಂದಿಗಳ ವರ್ಗಾವಣೆ ಆಗಿದೆ, ಹೀಗಾದರೆ ಕೆಲಸ ಹೇಗೆ ಆಗುತ್ತದೆ ಎಂದರು, ಇದಕ್ಕೆ ಧ್ವನಿ ಗೂಡಿಸಿದ ಉಪ ಮಹಾಪೌರ ಹಾಗೂ ಆಡಳಿತ ಪಕ್ಷದ ನಾಯಕರು ಕಾನೂನು ಏನು ಹೇಳುತ್ತದೆ, ಆಂತರಿಕ ವರ್ಗಾವಣೆ ಬಗ್ಗೆ ನಮಗೆ (ನಗರ ಸೇವಕರಿಗೆ) ತಿಳಿಸಬಾರದೆಂದು ಇದೆಯೇ, ನಾವೇನು ಪಾಲಿಕೆಗೆ ಸಂಬಂಧವೇ ಇಲ್ಲವೇ, ಏನೂ ಕೇಳಬಾರದು ಎಂದರೆ ಹೇಳಿ, ರಾಜೀನಾಮೆ ಕೊಟ್ಟು ಹೋಗುತ್ತೇವೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ದಕ್ಷಿಣದ ವಲಯ ಆಯುಕ್ತರು ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದ ಮಹಾ ಪೌರರಿಗೆ ಆಶ್ಚರ್ಯವೇ ಕಾದಿತ್ತು, ಒಬ್ಬರು ಸುನೀಲ್ ಎಂಬುವರು ಇದ್ದಾರೆ ಎಂದರೆ, ಮತ್ತೊಬ್ಬರು ಬದಲಿ ಆಗಿದ್ದರೆ ಎಂದರು, ಬದಲಿ ಆದವರು ಇನ್ನೂ ಚಾರ್ಜ್ ತಗೆದುಕೊಂಡಿಲ್ಲ ಎಂದು ಮತ್ತೊಬ್ಬರು ಹೇಳಿದರು, ಆಗ ಉಪ ಆಯುಕ್ತ ಆಡಳಿತ ಇವರು ನಿನ್ನೇನೆ ಚಾರ್ಜ್ ತಗೆದುಕೊಂಡಿದ್ದಾರೆ ಎಂದರು, ಅದಕ್ಕೆ ಸಮಿತಿ ಸದಸ್ಯರೊಬ್ಬರು ನಿನ್ನೆ ರಜೆ ಅಲ್ಲವಾ? ಹೇಗೆ ಚಾರ್ಜ್ ಪಡೆದರು ಎಂದು ಪ್ರಶ್ನೆ ಮಾಡಿದಾಗ, ಓ ನಿನ್ನೆ ಸಂಡೇನಾ ಎಂದರು.

ದಕ್ಷಿಣದ ವಲಯ ಆಯುಕ್ತ ಚಾರ್ಜ್ ಬಿಟ್ಟಿಲ್ಲ, ಕೊಟ್ಟಿಲ್ಲ, ಪಡೆದಿಲ್ಲ ಎಂಬ ಚರ್ಚೆಯ ನಡುವೆಯೇ ದಕ್ಷಿಣದ ಸಹಾಯಕ ಕಂದಾಯ ಅಧಿಕಾರಿ ಮೇತ್ರಿ ಅವರು ಎದ್ದು ನಿಂತರು, ಆಗ ಉಪ ಆಯುಕ್ತ ಆಡಳಿತ ಅವರು, ಈಗ ದಕ್ಷಿಣ ವಲಯ ಆಯುಕ್ತರ ಕೆಳಗಿನ ಅಧಿಕಾರಿ ಮೇತ್ರಿ ಸರಿಯಾದ ಮಾಹಿತಿ ಹೇಳುತ್ತಾನೆ ಕೇಳಿರಿ ಎಂದರು, ಆಗ ಮಾತನಾಡಿದ ಮೇತ್ರಿ ಅವರು, ನನ್ನ ನೊಲೆಜ್ ಪ್ರಕಾರ ಇವತ್ತಿಗೂ ಅಲ್ಲಿ ಜೆಡ್ಸಿ ಆಗಿ ಸುನಿಲೆ ಇದಾರೆ, ಯಾಕಂದ್ರೆ ಹೊಸ ಆರ್ಡರ್ ಆಗಿದ್ದು ಅದು ನನಗೆ ಗೊತ್ತಿಲ್ಲ, ಅವನ ರಿಲೀವ್ ಆಗಿದ್ದೂ ನನಗೆ ಗೊತ್ತಿಲ್ಲ, ಹೊಸ ಯಾರ ಬರ್ತಾರು ಅದೂ ನನಗ ಗೊತ್ತಿಲ್ಲ, ಸೋ ನನ್ನ ನೊಲೆಜ್ ಪ್ರಕಾರ ಇನ್ನೂ ಜೆಡ್ಸಿ ಆಗಿ ಸುನೀಲೆ ಆದಾನು ಎಂದಾಗ ಇಡೀ ಸಭೆಯೇ ನಗೆ ಕಡಲಲ್ಲಿ ತೇಲಿ ಹೋದಂತಿತ್ತು.
ವರದಿ ಪ್ರಕಾಶ ಬಿ ಕೆ..