ಮರಣ ಪ್ರಮಾನಪತ್ರ ಅರ್ಜಿಯನ್ನಾದರೂ ಮರಾಠಿಯಲ್ಲಿ ನೀಡಿ..

ಮರಣ ಪ್ರಮಾನಪತ್ರ ಅರ್ಜಿಯನ್ನಾದರೂ ಮರಾಠಿಯಲ್ಲಿ ನೀಡಿ..

ರವಿ ಸಾಳುoಕೆ, ಎಂಇಎಸ್ ನಗರ ಸೇವಕರು..

ಸರ್ಕಾರದ ಆದೇಶದಂತೆ ಕನ್ನಡ ಭಾಷೆಯಲ್ಲೇ ನೀಡಬೇಕು..

ರಮೇಶ ಸೊಂಟಕ್ಕಿ, ನಾಮನಿರ್ದೇಶಿತ ನಗರ ಸೇವಕರು..

ಬೆಳಗಾವಿ : ಜೀವಿತ ಇರುವಾಗ ನೀವು ನಮಗೆ ಯಾವುದೇ ಮರಾಠಿ ದಾಖಲೆಗಳನ್ನು ನೀಡುತ್ತಿಲ್ಲ, ಮರಣ ಪ್ರಮಾಣ ಪತ್ರ ಪಡೆಯುವ ಅರ್ಜಿಯನ್ನಾದರೂ ಮರಾಠಿ ಭಾಷೆಯಲ್ಲಿ ನೀಡಿ ಎಂದು ಎಂಇಎಸ್ ನಗರ ಸೇವಕ ರವಿ ಸಾಳುoಕೆ ಮನವಿ ಮಾಡಿದಾಗ, ಸರ್ಕಾರದ ಆದೇಶದ ಪ್ರಕಾರವೇ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಅರ್ಜಿ ನೀಡಬೇಕು ಎಂದು ಪಾಲಿಕೆಯ ನಾಮನಿರ್ದೇಶಿತ ನಗರ ಸೇವಕ ರಮೇಶ ಸೊಂಟಕ್ಕಿ ಅವರು ಸಭೆಗೆ ಒತ್ತಾಯ ಮಾಡಿದ್ದಾರೆ..

ಸೋಮವಾರ ದಿನಾಂಕ 12/01/2026 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ನಡೆದ ಪರಿಷತ ಸಭೆಯಲ್ಲಿ ಜನನ ಮರಣ ಪ್ರಮಾಣ ಪತ್ರ ವಿತರಣೆ ವಿಭಾಗದಲ್ಲಿ ಮರಣ ಪ್ರಮಾಣಪತ್ರ ಪಡೆಯುವ ಸಲುವಾಗಿ ಸಲ್ಲಿಸುವ ಅರ್ಜಿಯು ಬಹಳ ಕ್ಲಿಷ್ಟವಾಗಿದೆ, ಜೊತೆಗೆ ಹಲವು ಮಾಹಿತಿ ಹಾಗೂ ಸಾಕ್ಷಿಗಳನ್ನು ಕೇಳಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದೀರಾ, ಅದರಲ್ಲಿ ಬದಲಾವಣೆ ಆಗಬೇಕು, ಸರಳವಾಗಬೇಕು ಎಂದು ನಗರ ಸೇವಕ ಸಂತೋಷ ಪೇಡನೆಕರ ವಿಷಯ ಪ್ರಸ್ತಾಪಿಸಿದರು..

ಇದೇ ವಿಷಯವಾಗಿ ಮಾತು ಮುಂದುವರೆಸಿದ ನಾಮನಿರ್ದೇಶಿತ ನಗರ ಸೇವಕ ರಮೇಶ್ ಸೊಂಟಕ್ಕಿ ಅವರು, ನಿಜ, ಅರ್ಜಿಯಲ್ಲಿ ತುಂಬಾ ಮಾಹಿತಿ ಕೇಳಿದ್ದಾರೆ, ಅಷ್ಟು ಅವಶ್ಯಕತೆ ಇಲ್ಲಾ, ಸಾಕ್ಷಿಗಾಗಿ ಅಕ್ಕಪಕ್ಕದ ಐದು ಆಧಾರ ಕಾರ್ಡ್ ಕೇಳಿದ್ದಾರೆ, ಯಾರು ಕೊಡುವದಿಲ್ಲ, ಈಗ ಐದಾರು ತಿಂಗಳಿನಿಂದ ಈ ಬದಲಾವಣೆ ಆಗಿದೆ, ಮೊದಲಿನಂತೆ ಸರಳವಾದ ನಮೂನೆಯಲ್ಲಿ ಅರ್ಜಿಗಳನ್ನು ನೀಡಬೇಕೆಂದು ಧ್ವನಿಗೂಡಿಸಿದರು.

ಇದೇ ವಿಷಯವಾಗಿ ಧ್ವನಿ ಎತ್ತಿದ ಎಂಇಎಸ್ ನ ನಗರ ಸೇವಕ ರವಿ ಸಾಳುoಕೆ ಅವರು ಅರ್ಜಿಯಲ್ಲಿರುವ ಗೊಂದಲಗಳನ್ನು ಬಗೆಹರಿಸಿ ಜೊತೆಗೆ ಮೂರು ಭಾಷೆಗಳಲ್ಲಿ ಅಂದರೆ ಕನ್ನಡ ಇಂಗ್ಲಿಷ್ ಮರಾಠಿಯಲ್ಲಿ ಅರ್ಜಿ ವಿತರಣೆಯನ್ನು ಮಾಡಿ, ಜೀವಂತ ಇರುವಾಗ ನಮಗೆ ನೀವು ಮರಾಠಿ ಭಾಷೆಯಲ್ಲಿ ಯಾವುದೇ ದಾಖಲೆ ನೀಡಲಿಲ್ಲ ಕನಿಷ್ಠ ಸತ್ತ ಮೇಲೆ ಸಲ್ಲಿಸುವ ಮರಣ ಪ್ರಮಾಣಪತ್ರದ ಅರ್ಜಿಯನ್ನಾದರೂ ಮರಾಠಿಯಲ್ಲಿ ನೀಡಿ ಎಂದು ಮಹಾಪೌರರಲ್ಲಿ ಮನವಿ ಮಾಡಿಕೊಂಡರು.

ಇದಕ್ಕೆ ಕೋಪದಿಂದ ಪ್ರತಿಕ್ರಿಯೆ ನೀಡಿದ ನಗರ ಸೇವಕ ರಮೇಶ್ ಸೊಂಟಕ್ಕಿ ಅವರು, ಯಾವುದೇ ಕಾರಣಕ್ಕೂ ಮರಾಠಿಯಲ್ಲಿ ನೀಡಬಾರದು, ಕರ್ನಾಟಕ ಸರ್ಕಾರದ ಆದೇಶದಂತೆ ಆಡಳಿತ ಭಾಷೆ ಕನ್ನಡ ಇರುವಾಗ ಕನ್ನಡದಲ್ಲೇ ಅರ್ಜಿಗಳನ್ನು ನೀಡಬೇಕು ಎಂದರು..

ಆಗ ವಾದಕ್ಕೆ ಮುಂದಾದ ಎಂಇಎಸ್ ನಗರ ಸೇವಕ ಈ ಮೊದಲು ನೀಡುತ್ತಿದ್ದರು, ಈಗಲೂ ನೀಡಿ, ಅದರಿಂದ ನಮಗೂ ಅದರಲ್ಲಿರುವ ಲೋಪದೋಷ, ಏನು ತುಂಬಬೇಕು ಎಂದು ಸರಿಯಾಗಿ ಅರ್ಥ ಆಗುತ್ತದೆ ಎಂದು ಪಟ್ಟು ಹಿಡಿದರು, ಆಗ ರಮೇಶ ಸೊಂಟಕ್ಕಿ ಅವರು, ಅದೆಲ್ಲಾ ಆಗದು ಮಾತು, ಇದು ಸಭೆಯ ಕಾಲಹರಣ ಆಗುತ್ತದೆ, ಮಹಾಪೌರರೇ ನೀವು ಇವರ ಮನವಿಯಂತೆ ರೂಲಿಂಗ ಕೊಡಬೇಡಿ, ಕೊಟ್ಟರೆ ನಿಮಗೂ ತೊಂದರೆ ಆಗುತ್ತದೆ ಎಂದು ತಿಳಿ ಹೇಳಿದಾಗ, ಇದಕ್ಕೆ ಮದ್ಯ ಪ್ರವೇಶಿಸಿದ ಆಡಳಿತ ಪಕ್ಷದ ನಾಯಕ ಹನಮಂತ ಕೊಂಗಾಲಿ ಹಾಗೂ ನಗರ ಸೇವಕ ರವಿ ದೋತ್ರೆ ಅವರು ಮುಂದಿನ ವಿಷಯ ತಗೆದುಕೊಂಡು ಚರ್ಚೆ ಮಾಡಿರಿ ಎಂಬ ಸೂಚನೆ ನೀಡಿದರು, ಮಹಾಪೌರಾರು ಕೂಡಾ ಈ ಮರಾಠಿ ಭಾಷೆಯ ಅರ್ಜಿ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೇ, ಮುಂದಿನ ವಿಷಯದ ಚರ್ಚೆಗೆ ಅವಕಾಶ ನೀಡಿದರು..

ವರದಿ ಪ್ರಕಾಶ್ ಬಿ ಕೆ.