ಪ್ರಾದೇಶಿಕ ಆಯುಕ್ತರು ಬರೆದ ಪತ್ರವನ್ನು ಸ್ವಾಗತಿಸಿದ ಕನ್ನಡ ಪರ ಸಂಘಟನೆಗಳು..
ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕೆಂದು ಆಗ್ರಹಿಸಿ ಕಳೆದ 75 ದಿನಗಳಿಂದ ಹೋರಾಟ ನಡೆಸುತ್ತಿರುವ ಕನ್ನಡ ಸಂಘಟನೆಗಳು ಜೂನ್ ಒಂದರಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪ್ರತಿನಿತ್ಯವೂ ಮನವಿ
ಸಲ್ಲಿಸುತ್ತಿರುವುದನ್ನು ಗಂಭೀರವಾಗಿ
ಪರಿಗಣಿಸಿರುವ ಪ್ರಾದೇಶಿಕ ಆಯುಕ್ತರು ಜೂನ್ 8 ರಂದು
ಪಾಲಿಕೆಯ ಆಯುಕ್ತರಿಂದ ವರದಿ ಕೇಳಿದ್ದಾರೆ.
ಮಾರ್ಚ 26 ರಿಂದ ಕನ್ನಡ ಸಂಘಟನೆಗಳು ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ
ಆಗ್ರಹಿಸಿ ಹೋರಾಟ ನಡೆಸುತ್ತಿರುವುದನ್ನು ಪಾಲಿಕೆಯ
ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಾದೇಶಿಕ ಆಯುಕ್ತರು, 35 ಸದಸ್ಯರ ಬಹುಮತ
ಹೊಂದಿರುವ ಬಿಜೆಪಿ ನಾಯಕರು ಗೊತ್ತುವಳಿ ಸ್ವೀಕರಿಸಿಲ್ಲ. ಇದು ನಾಡು, ನುಡಿಗೆ ಬಗೆದ ದ್ರೋಹವಾಗಿದೆ
ಎಂಬ ಕನ್ನಡ ಸಂಘಟನೆಗಳ ದೂರನ್ನು ಸಹ ಉಲ್ಲೇಖಿಸಿದ್ದಾರೆ.
ಕನ್ನಡ ಸಂಘಟನೆಗಳ ದೂರುಗಳನ್ನು ಕೂಲಂಕುಷವಾಗಿ
ಪರಿಶೀಲಿಸಿ ವರದಿ ಸಲ್ಲಿಸುವಂತೆ ಪಾಲಿಕೆಯ ಆಯುಕ್ತರಿಗೆ ಪ್ರಾದೇಶಿಕ ಆಯುಕ್ತರಾದ ಕೆ. ಏ.ಜಾನಕಿ ಅವರು ಪತ್ರ ಬರೆದಿರುವುದನ್ನು
ಕನ್ನಡ ಸಂಘಟನೆಗಳು ಸ್ವಾಗತಿಸಿವೆ.