ಗಡಿನಾಡು ಕನ್ನಡಿಗರ ಸೇನೆಯ ಮಾಸಿಕ ಸಭೆ..

ಗಡಿನಾಡು ಕನ್ನಡಿಗರ ಸೇನೆಯ ಮಾಸಿಕ ಸಭೆ..

ಪದಾಧಿಕಾರಿಗಳ ಹಾಗೂ ಸದಸ್ಯರ ಸಲಹೆ ಸೂಚನೆಯೊಂದಿಗೆ ಯಶಸ್ವಿಯಾದ ಸಭೆ..

ಬೆಳಗಾವಿ : ಮಂಗಳವಾರ ದಿನಾಂಕ 03/05/2026 ರಂದು ನಗರದ ಪ್ರವಾಸಿ ಮಂದಿರದಲ್ಲಿ “ಗಡಿನಾಡು ಕನ್ನಡಿಗರ ಸೇನೆ” ಸಂಘಟನೆಯಿಂದ ಮಾಸಿಕ ಸಭೆ ಜರುಗಿದ್ದು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗಿಯಾದ ಈ ಸಭೆಯಲ್ಲಿ ಉತ್ತಮ ವಿಷಯಗಳ ಚರ್ಚೆ ನಡೆದಿದ್ದು ಸಭೆ ಯಶಸ್ವಿಯಾಗಿದೆ..

ಮೊದಲಿಗೆ ಸೇನೆಯ ಜಿಲ್ಲಾಧ್ಯಕ್ಷರಾದ ಮೂಕನವರ ಅವರು ಸಭೆಗೆ ಎಲ್ಲರನ್ನು ಸ್ವಾಗತಿಸಿದ್ದು, ಕಳೆದ ಆರು ತಿಂಗಳಲ್ಲಿ ಸೇನೆಯಿಂದ ಆಗಿರುವ ಕನ್ನಡಪರ ಕಾರ್ಯಗಳ ಬಗ್ಗೆ ವಿವರಿಸಿದರು, ಎಷ್ಟೋ ವರ್ಷಗಳಿಂದ ಇದ್ದ ಸಂಘಟನೆಗಳು ಮಾಡಿರದ ಕಾರ್ಯಗಳನ್ನು ನಮ್ಮ ಗಡಿನಾಡು ಕನ್ನಡಿಗರ ಸೇನೆ ಮಾಡಿದೆ ಎಂದರು.

ಬರುವ ದಿನಗಳಲ್ಲಿ ಸಂಘಟನೆಯನ್ನು ಯಾವ ರೀತಿ ಬಲಪಡಿಸಬೇಕು, ಯಾವ ರೀತಿಯಲ್ಲಿ ಕನ್ನಡವನ್ನು ಕಾಯುವ ಕಾರ್ಯವನ್ನು ಮಾಡಬೇಕು, ಸಂಘಟನೆಯ ಗುರಿ ಉದ್ದೇಶ ಏನು, ಸದಸ್ಯರು ಯಾವ ಜವಾಬ್ದಾರಿ ನಿಭಾಯಿಸಬೇಕು, ಎಲ್ಲರೂ ಒಂದಾಗಿ ಕಾರ್ಯ ಮಾಡಿದರೆ ಎಷ್ಟು ಬಲ ಇರುತ್ತದೆ, ಸ್ಪರ್ಧಾತ್ಮಕ ಈ ಸಮಾಜದಲ್ಲಿ ಸಂಘಟನೆ ಎಷ್ಟು ಮುಖ್ಯ ಎಂಬ ವಿಷಯಗಳ ಕುರಿತಾಗಿ ವಿವರಣೆ ನೀಡಿದರು.

ತದನಂತರ ರಾಜ್ಯ ಉಪಾಧ್ಯಕ್ಷರಾದ ಶಂಕರ ಬಾಗೇವಾಡಿ ಅವರು ಮಾತನಾಡಿ, ಕನ್ನಡ ಸೇವೆ ಕನ್ನಡ ಕೆಲಸ ಎನ್ನುವದು ಒಂದು ಉದ್ಯೋಗ ಆಗಬಾರದು, ಬದಲಾಗಿ ನಮ್ಮ ಮನಸಿನಿಂದ ಈ ನೆಲಕ್ಕೆ ನೀಡುವ ಸೇವೆ ಆಗಿರಬೇಕು, ಈ ಸಂಘಟನೆ ಹೋರಾಟ ಮಾಡುವವರೆಲ್ಲ ಬಹುತೇಕ ಬಡವರೇ, ಆದಕಾರಣ ಖರ್ಚು ಕಡಿಮೆ ಮಾಡಿ ಎಂಬ ಸಲಹೆ ನೀಡಿದರು, ಕನ್ನಡ ಕಾರ್ಯ ಮಾಡುವ ಮೊದಲು ನಾವು ಕನ್ನಡದ ಹಿನ್ನೆಲೆ ಹಾಗೂ ಅದರ ಶ್ರೀಮಂತಿಕೆ ತಿಳಿದುಕೊಳ್ಳಬೇಕು ಎಂದರು.

ಬೆಳಗಾವಿಯಂತಹ ಗಡಿ ಭಾಗದಲ್ಲಿ ಹಿಂದೆ ಕನ್ನಡವನ್ನು ಉಳಿಸಿ ಬೆಳಸಿದವರನ್ನು ನಾವು ಎಂದೂ ಮರೆಯಬಾರದು, ಅವರ ತ್ಯಾಗ ಹೋರಾಟದಿಂದ ಇಂದು ಬೆಳಗಾವಿಯಲ್ಲಿ ಕನ್ನಡ ಕುಣಿಯುತ್ತಿದೆ, ಅಶೋಕ ಚಂದರಗಿ, ಸಿದ್ದನಗೌಡರು, ಟೋಪಣ್ಣವರ ಅವರು ಇಲ್ಲಿ ಕನ್ನಡ ಕಟ್ಟುವ ಕಾರ್ಯವನ್ನು ಬಹಳ ಶ್ರಮವಹಿಸಿ ಮಾಡಿದ್ದಾರೆ, ಇಂದು ಕನ್ನಡಪರ ಸಂಘಟನೆಯ ಸದಸ್ಯರಾದ ನಾವು ಈ ಇತಿಹಾಸ ತಿಳಿದುಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು.

ಆರ್ಥಿಕವಾಗಿ ತಾವು ಸದೃಢ ಆಗಬೇಕಾದರೆ, ತಾವು ಎಲ್ಲರೂ ತಮ್ಮ ತಮ್ಮ ಉದ್ಯೋಗದಲ್ಲಿ ಸಾಧನೆ ಮಾಡಿ, ತಮ್ಮ ವೃತ್ತಿಗಳನ್ನು ಮಾಡುತ್ತಲೇ ಕನ್ನಡ ಕಟ್ಟುವ ಈ ಕಾರ್ಯದಲ್ಲಿ ಭಾಗಿಯಾಗಿ ಎಂದರು, ಇಂದು ಸಾಮಾಜಿಕ, ಆರ್ಥಿಕ, ಆಡಳಿತ, ರಾಜಕೀಯ, ಸಾಂಸ್ಕೃತಿಕ ಬಹುತೇಕ ರಂಗಗಳಲ್ಲಿ ಸ್ವಜನ ಪಕ್ಷಪಾತ, ಬೆದಭಾವ, ಹಾಗೂ ಭ್ರಷ್ಟಾಚಾರಗಳು ಹೆಚ್ಚಾಗಿದ್ದು ನಮ್ಮ ಹಕ್ಕುಗಳನ್ನು ನಾವು ಪಡೆಯಲು ಸಂಘಟನಾತ್ಮಕ ಹೋರಾಟ ಅವಶ್ಯಕ ಆಗಿದೆ ಎಂದರು.

ಇನ್ನು ಗಡಿ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ ಅವರು ಮಾತನಾಡಿ, ನಾನು ಹತ್ತಾರು ವರ್ಷಗಳಿಂದ ರಾಜಕೀಯ ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಗುರುತಿಸಿ ಕೊಂಡಿದ್ದು, ನಾನು ಈ ಹಿಂದೆ ರಾಜಕೀಯದಲ್ಲಿ ಏನೇ ಆಗಿದ್ದರೂ, ಸಾಧನೆ ಮಾಡಿದ್ದರೂ ಅದು ಜಾರಕಿಹೊಳಿ ಸಹೋದರರ ಕೃಪಾಕಟಾಕ್ಷ, ಸತೀಶ್ ಜಾರಕಿಹೊಳಿ ಅವರು ರಾಜಕೀಯವಾಗಿ ನನ್ನ ಬೆಳೆಸಿದರು, ದೊಡ್ಡ ದೊಡ್ಡ ವೇದಿಕೆಗಳಲ್ಲಿ ನನಗೆ ಮಾತನಾಡಲು ಅವಕಾಶ ನೀಡಿದರು ಎಂದು ತಮ್ಮ ಹಳೆಯ ದಿನಗಳನ್ನು ನೆನೆದರು.

ಇನ್ನು ನಾನು ಕನ್ನಡ ಸಂಘಟನೆಗಳಲ್ಲಿ ಕೆಲಸ ಮಾಡಿದ್ದು ಇಂದು ಒಂದು ಸಂಘಟನೆಯ ರಾಜ್ಯಾಧ್ಯಕ್ಷನಾಗಿದ್ದು, ಇಂದು ಈ ವೇದಿಕೆ ಮೇಲೆ ನಿಂತು ಇಷ್ಟು ಮಾತನಾಡುತ್ತಿರುವದಕ್ಕೆ ಮುಖ್ಯ ಕಾರಣ ಎಂದರೆ ನನ್ನ ಗುರುಗಳಾದ ಅಶೋಕ ಚಂದರಗಿ ಅವರು ಎಂದರು, ಬೆಳಗಾವಿ ಗಡಿ ಭಾಗದ ಬಗ್ಗೆ ಇಂಚಿಂಚು ಮಾಹಿತಿ ಅವರಲ್ಲಿದೆ, ಅಂತವರ ಮಾರ್ಗದರ್ಶದಲ್ಲಿ ಇಂದು ನಾವು ಮುನ್ನಡೆಯುತ್ತಿದ್ದೇವೆ, ಬೆಳಗಾವಿಯಲ್ಲಿ ಅವರು ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ಯಾರು ಮಾಡಲಾರರು, ಇಷ್ಟೆಲ್ಲಾ ಮಾಡಿದ್ದರೂ ಅವರು ಎಂದು ಪ್ರಚಾರ ಬಯಸಲಿಲ್ಲ ಎಂದರು.

ಇನ್ನು ಸೇನೆಯ ಪಧಾಧಿಕಾರಿಗಳು ಹಾಗೂ ಸದಸ್ಯರು ಮಾಡಬೇಕಾದ ಕರ್ತವ್ಯ ಹಾಗೂ ಸೇನೆಯಿಂದ ಅವರಿಗಾಗುವ ಅನುಕೂಲ, ಸಂಘಟನೆಯಿಂದ ಆಗುವ ಮಹತ್ಕಾರ್ಯಗಳ ಬಗ್ಗೆ ವಿವರಣೆ ನೀಡಿದ್ದು, ನಮ್ಮ ಸಂಘಟನೆ ಭವಿಷ್ಯದಲ್ಲಿ ಯಾವ ರೀತಿಯಾಗಿ ವಿಶೇಷವಾಗಿ ಬೆಳೆಯುತ್ತದೆ ಎಂಬ ರುಪುರೆಶೆಗಳ ಬಗ್ಗೆ ವಿವರಣೆ ನೀಡಿದರು.

ನಂತರ ಸಭೆಯಲ್ಲಿ ಭಾಗಿಯಾದ ಎಲ್ಲಾ ಸದಸ್ಯರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದು, ಬರುವ ದಿನಗಳಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಇವು ಸಹಕಾರಿಯಾಗುತ್ತವೆ ಎಂಬ ಅಭಿಪ್ರಾಯವನ್ನು ಎಲ್ಲರೂ ನೀಡಿದ್ದು, ಒಟ್ಟಿನಲ್ಲಿ ಗಡಿ ಕನ್ನಡಿಗರ ಸೇನೆಯ ಈ ಮಾಸಿಕ ಸಭೆ ಯಶಸ್ವಿ ಆಗಿದೆ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *