ಕಸ ಸಂಗ್ರಹ ವಾಹನ ರಿಪೇರಿಗೆ ಆರೋಗ್ಯ ಶಾಖೆಯಲ್ಲಿ 22 ಸಾವಿರ ಹಣ ಇಲ್ವಾ?

ಕಸ ಸಂಗ್ರಹ ವಾಹನ ರಿಪೇರಿಗೆ ಆರೋಗ್ಯ ಶಾಖೆಯಲ್ಲಿ 22 ಸಾವಿರ ಹಣ ಇಲ್ವಾ?

ನನಗೆ ಬರುವ ಗೌರವಧನ ಬೇಡ, ಅದರಲ್ಲೇ ರಿಪೇರಿ ಮಾಡಿಸಿ..

ತಿಂಗಳಿಗೆ ಕೋಟಿಯಷ್ಟು ಖರ್ಚು ಮಾಡುವ ಆರೋಗ್ಯ ವಿಭಾಗದ ಅಧಿಕಾರಿಗಳು ಗಪ್ ಚುಪ್..

ಆರೋಗ್ಯ ಶಾಖೆಯ ಯಡವಟ್ಟಿನಿಂದ ಪಾಲಿಕೆ ಹೆಸರು ಹಾಳಾಗುತ್ತಿದೆಯೇ?

ಬೆಳಗಾವಿ : ಕಳೆದ ಒಂಬತ್ತು ತಿಂಗಳ ಹಿಂದೆಯೇ ನಾನು ನನ್ನ ವಾರ್ಡಿಗೆ ಕಸ ಸಂಗ್ರಹಣ ವಾಹನ ಬೇಕೆಂದು ಅರ್ಜಿ ನೀಡಿದ್ದೆ, ಒಂದೇ ಗಾಡಿಯಿಂದ ಅಲ್ಲಿ ಕೆಲಸ ಆಗುತ್ತಿಲ್ಲ, ಇದರಿಂದ ವಾರ್ಡಿನಲ್ಲಿ ನಾವು ಕೆಟ್ಟವರಾಗಬೇಕಾ? 22 ಸಾವಿರದಲ್ಲಿ ನಿಮಗೆ ಇನ್ನೊಂದು ಗಾಡಿ ರಿಪೇರಿ ಮಾಡಿ ಕೊಡಲು ಬರುವದಿಲ್ಲವೇ? ಪಾಲಿಕೆಯಲ್ಲಿ ಹಣ ಇಲ್ಲದಿದ್ದರೆ, ನಗರ ಸೇವಕ ಅಂತಾ ನನಗೆ ಬರುವ ಗೌರವಧನದಲ್ಲಿ ರಿಪೇರಿ ಮಾಡಿಸಿ, ನನಗೆ ಗೌರವಧನ ಬೇಡ, ಅದರಲ್ಲೇ ವಾಹನ ರಿಪೇರಿ ಮಾಡಿಸಿ ಎಂದು ನಗರ ಸೇವಕ ಗಿರೀಶ್ ದೊಂಗಡಿ ಅವರು ಆರೋಗ್ಯ ಶಾಖೆ ಅಧಿಕಾರಿ ಹನಮಂತ ಕಲಾದಗಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಗುರುವಾರ ದಿನಾಂಕ 09/04/2026 ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ಜರುಗಿದ ಪಾಲಿಕೆಯ ಆಡಳಿತಾತ್ಮಕ ಸಭೆಯಲ್ಲಿ ಮಾತನಾಡಿದ ನಗರ ಸೇವಕ ಗಿರೀಶ ದೊಂಗಡಿ ಅವರು ಆರೋಗ್ಯ ವಿಭಾಗದ ಅವ್ಯವಸ್ಥೆಯ ಬಗ್ಗೆ ಕಿಡಿ ಕಾರಿದ್ದಾರೆ, ಜೊತೆಗೆ ಆಡಳಿತ ಪಕ್ಷದ ನಾಯಕರಾದ ಸಂತೋಷ್ ಪೇಡನೇಕರ, ರಾಜಶೇಖರ ಧೋನಿ, ರಿಯಾಜ ಕಿಲ್ಲೇದಾರ ಇವರುಗಳು ಸಹ ಆರೋಗ್ಯ ವಿಭಾಗ ಹಾಗೂ ಅಧಿಕಾರಿಯ ಮೇಲೆ ತಮ್ಮ ವಾರ್ಡಿನ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಹಲವಾರು ಆರೋಪ ಮಾಡಿದರು, ಇದಕ್ಕೆ ಸ್ಪಷ್ಟ ಉತ್ತರ ನೀಡದೇ ಸಣ್ಣಮೂಖ ಮಾಡಿಕೊಂಡು ಕುಳಿತ ಆರೋಗ್ಯ ವಿಭಾಗದ ಅಧಿಕಾರಿ ಹನಮಂತ ಕಲಾದಗಿ ಹಾಗೂ ಅವರ ತಂಡ ಗಪ್ ಚುಪ್ ಆಗಿದ್ದು ನೋಡಿದರೆ ಆರೋಗ್ಯ ವಿಭಾಗ ಅನಾರೋಗ್ಯಕ್ಕೆ ತುತ್ತಾಗಿ ಪಾಲಿಕೆಗೆ ಕಳಂಕ ತರುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ.

ಸಭೆಯಲ್ಲಿ ಈ ವಿಷಯವನ್ನು ಮೊದಲಿಗೆ ನಗರ ಸೇವಕ ರಾಜಶೇಖರ ದೋಣಿ ಅವರು ಪ್ರಸ್ತಾಪ ಮಾಡಿದ್ದು, ನಮ್ಮ ವಾರ್ಡಿನಲ್ಲಿ ಕಸ ಸ್ವಚ್ಛ ಆಗುತ್ತಿಲ್ಲ, ಉದ್ಯಾನವನ ಸ್ವಚ್ಛ ಆಗುತ್ತಿಲ್ಲ, ಇದು ಪೇಪರನಲ್ಲಿ ಕೂಡಾ ಬಂದಿದೆ, ಎಂಟು ಗಾರ್ಡನ್ ಇದ್ದರೂ ಯಾವುದು ಸ್ವಚ್ಛ ಇಲ್ಲ ಎಂದರು, ಎಂಟು ತಿಂಗಳಿನಿಂದ ದೂರು ನೀಡಿದರೂ ಆರೋಗ್ಯ ವಿಭಾಗದವರು ಸ್ವಚ್ಛ ಮಾಡಿಲ್ಲ, ಇಂದು ಎಲ್ಲಾ ಪತ್ರಿಕೆಗಳಲ್ಲಿ ಬಂದು, ಜನರಿಂದ ನಾನು ಬೆಸಿಕೊಂಡಿದ್ದೇನೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು, ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ನಾಯಕ ಸಂತೋಷ ಪೇಡನೇಕರ ಅವರು, ಬಹುತೇಕ ವಾರ್ಡಗಳಲ್ಲಿ ಕಸ ಸಂಗ್ರಹಣ ವಾಹನದ ಸಮಸ್ಯೆ ಇದೆ ಎಷ್ಟೋ ದಿವಸದಿಂದ ನನ್ನ ವಾರ್ಡಿಗೂ ವಾಹನ ಕಳಿಸಿಲ್ಲ.

ಹಸಿ ಕಸ ವನ ಕಸ ಬೇರೆ ಮಾಡಿ ಎಂದು ಹೇಳುವ ನೀವೇ ಎರಡನ್ನು ಒಂದೇ ಗಾಡಿಯಲ್ಲಿ ಹಾಕಿಕೊಂಡು ಹೋಗುವಿರಿ ಇದು ಸರಿನಾ? ಎಂದು ಪ್ರಶ್ನೆ ಮಾಡಿದರು, ಕಸದ ಟೆಂಡರ್ ಬಗ್ಗೆ ಮಾಹಿತಿ ಕೇಳಿದರೆ ನೀವು ಮಾಹಿತಿ ಕೊಡುವದಿಲ್ಲ ಎಂದು ರೇಗಿದರು, ಲೇಬರ್ ಲಿಸ್ಟ್ ಕೇಳಿದರೆ ನೀವು ನೀಡುವದಿಲ್ಲ ಗುತ್ತಿಗೆದಾರ ಮನಬಂದಂತೆ ಹೇಳುತ್ತಾನೆ, ನಗರ ಸೇವಕರೆಂದರೆ ಮರ್ಯಾದೆನೇ ಇಲ್ಲವೇ ನಿಮಗೆ ಎಂದು ತರಾಟೆಗೆ ತಗೆದುಕೊಂಡರು, ಇದಕ್ಕೆ ಮದ್ಯೆ ಪ್ರವೇಶಿಸಿದ ನಗರ ಸೇವಕ ರಿಯಾಜ್ ಕಿಲ್ಲೇದಾರ, ಏನೇ ಕೇಳಿದರೂ ರೂಲ್ಸ್ ಎನ್ನುವ ನೀವು ಈಗ ಮತ್ತೊಬ್ಬರ ಮೇಲೆ ಏಕೆ ಹಾಕುತ್ತೀರಿ? ಜನ ನಿಮ್ಮ ಮೇಲೆ ಬೇಸತ್ತಿದ್ದಾರೆ, ಮುಖ್ಯ ಅಧಿಕಾರಿಯಾಗಿ ನೀವು ಉತ್ತರ ನೀಡಿ ಎಂದು ಕಿಡಿ ಕಾರಿದರು.

ನಗರ ಸೇವಕ ಜಯಂತ ಜಾಧವ, ರಾಜಶೇಖರ ದೋಣಿ, ಸಂತೋಷ ಪೇಡನೇಕರ, ರಿಯಾಜ ಕಿಲ್ಲೇದಾರ ಹಾಗೂ ಗಿರೀಶ್ ದೊಂಗಡಿ ಅವರುಗಳು ಮಾಡಿದ ಆರೋಪಕ್ಕೆ ಉತ್ತರ ನೀಡಲು ಪ್ರಯತ್ನಿಸಿದ ಆರೋಗ್ಯ ವಿಭಾಗದ ಅಧಿಕಾರಿ ಕಲಾದಗಿ ಅವರು ಕಸ ಸಂಗ್ರಹಣಾ ವಾಹನದ ಪೂರೈಕೆಯಲ್ಲಿ ನಮ್ಮದೇನು ತಪ್ಪಿಲ್ಲ, ಲೆಕ್ಕ ಶಾಖೆಯವರಿಂದ ನಿಧಾನವಾಗಿದೆ ಎಂದು ಆರೋಪಿಸಿದಾಗ, ನಗರ ಸೇವಕ ರವಿ ದೋತ್ರೆ, ಉಪ ಮಹಾಪೌರ ಹನಮಂತ ಕೊಂಗಾಲಿ ಹಾಗೂ ಪಾಲಿಕೆ ಆಯುಕ್ತ ಎಂ ಕಾರ್ತೀಕ ಅವರು ತಮ್ಮ ತಪ್ಪಿಗೆ ಬೇರೆಯವರತ್ತ ಬೆರಳು ಮಾಡಬಾರದು, ಏನೇ ಸಮಸ್ಯೆ ಇದ್ದರೂ ತಮ್ಮ ಮೇಲಾಧಿಕಾರಿಯ ಗಮನಕ್ಕೆ ತರಬೇಕು, ಸಭೆಯಲ್ಲಿ ಈ ರೀತಿ ಬೇರೆ ಶಾಖೆಗೆ ತಪ್ಪು ಹೋರಿಸಬಾರದು ಎಂದು ಸೂಚಿಸಿದರು..

ಒಟ್ಟಿನಲ್ಲಿ ಆರೋಗ್ಯ ವಿಭಾಗದ ಯಡವಟ್ಟುಗಳಿಂದ ರಾಜ್ಯದಲ್ಲೇ ಹೆಸರುವಾಸಿಯಾದ ಬೆಳಗಾವಿ ಮಹಾನಗರ ಪಾಲಿಕೆಯ ಹೆಸರಿಗೆ ಮಸಿ ಬಳಿಯದಂತೆ ನೋಡಿಕೊಳ್ಳಲಿ, ತಿಂಗಳಿಗೆ ಕೋಟಿಯಷ್ಟು ಖರ್ಚು ಮಾಡುವ ಆರೋಗ್ಯ ವಿಭಾಗ ಕೇವಲ 22 ಸಾವಿರ ಕೊಟ್ಟು ಕಸ ಸಂಗ್ರಹಣಾ ವಾಹನವನ್ನು ರಿಪೇರಿ ಮಾಡಿಸಲಿ, ಒಬ್ಬ ನಗರ ಸೇವಕ ಆರೋಗ್ಯ ವಿಭಾಗಕ್ಕೆ ತನ್ನ ಗೌರವಧನ ನೀಡುತ್ತೇನೆ ಎನ್ನುವ ಹಂತಕ್ಕೆ ಆರೋಗ್ಯ ವಿಭಾಗ ಬರಬಾರದು ಎಂಬುದು ನಗರವಾಸಿಗಳ ಆಶಯ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *