ನಾರಿ ಶಕ್ತಿ ವಂದನಾ ಕಾಯ್ದೆಯ ಜಾರಿ..
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಿದ ಮೋದಿ ಅವರಿಗೆ ಕೃತಜ್ಞತೆ..
ಶಾಸಕಿ ಶಶಿಕಲಾ ಜೊಲ್ಲೆ..
ಬೆಳಗಾವಿ : ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ನಾರಿ ಶಕ್ತಿ ವಂದನಾ’ ಕಾಯ್ದೆಯು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
2028ರ ವೇಳೆಗೆ ಈ ಕಾಯ್ದೆಯ ಅನ್ವಯ ಬೆಳಗಾವಿ ಜಿಲ್ಲೆಯಿಂದಲೇ ಸುಮಾರು 6 ಮಹಿಳಾ ಶಾಸಕಿಯರು ವಿಧಾನಸಭೆ ಪ್ರವೇಶಿಸುವ ಅವಕಾಶ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಭಾರತದಲ್ಲಿ ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ತರಲು ನಾರಿ ಶಕ್ತಿ ವಂದನಾ ಕಾನೂನನ್ನು ಪಿಎಂ ಮೋದಿ ಅವರು ಘೋಷಿಸಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ಸನ್ನಿವೇಶವಾಗಿದೆ.
ಇದು ದೇಶದ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿದೆ. ಭವ್ಯ ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ಈ ಕಾನೂನು ಹೆಚ್ಚಿಸಲಿದೆ. ದೇಶದ ಸುಧಾರಣೆಯಲ್ಲಿ ಮಹಿಳೆಯರು ಕೂಡ ನಿರ್ಣಯಾತ್ಮಕ ವಿಷಯಗಳನ್ನು ಮಂಡಿಸಬಹುದಾಗಿದೆ. ಸ್ಥಳೀಯವಾದ ಸಮಸ್ಯೆಗಳನ್ನು ಲೋಕಸಭೆವರೆಗೂ ತೆಗೆದುಕೊಂಡು ಹೋಗಲು ಉತ್ತಮ ಅವಕಾಶವನ್ನು ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ. ಮಹಿಳೆಯರ ಮತದಾನದ ಸಂಖ್ಯೆ ಹೆಚ್ಚಾಗಿದೆ.
ಸುಕನ್ಯಾ ಸಮೃದ್ಧಿ, ಬೇಟಿ ಬಚಾವೋ ಬೇಟಿ ಪಢಾವೋದಂತಹ ಯೋಜನೆಗಳೊಂದಿಗೆ ಹಲವಾರು ಯೋಜನೆಗಳನ್ನು ಮಹಿಳೆಯ ಹಿತದಲ್ಲಿ ಪಿಎಂ ಮೋದಿ ಅವರು ಜಾರಿಗೊಳಿಸಿದ್ದಾರೆ ಎಂದರು.
ಮಹಿಳೆಯರು ಕೂಡ ಗ್ರಾ.ಪಂ ಯಿಂದ ಹಿಡಿದು ಲೋಕಸಭೆವರೆಗೆ ಅಧಿಕಾರವನ್ನು ನೀಡಿದಾಗ ಮಾತ್ರ ಅದು ವಿಕಸಿತ ಭಾರತದ ಪರಿಕಲ್ಪನೆಯನ್ನು ಪೂರ್ಣಗೊಳಿಸಲಿದೆ. ನಾರಿ ಶಕ್ತಿ ವಂದನಾ ಕಾನೂನು ಭಾರತದ ಮಹಿಳೆಯರಿಗೆ ಒಂದು ಗೌರವವಾಗಿದೆ. ಮಹಿಳೆಯ ಮೇಲಿನ ದೌರ್ಜನ್ಯಗಳ ವಿರುದ್ಧವು ಲೋಕಸಭೆಯಲ್ಲಿ ಧ್ವನಿ ಎತ್ತಲೂ ಇದು ಪೂರಕವಾಗಿದೆ. ಹಲವಾರು ವಿರೋಧಗಳು ಕೇಳಿ ಬಂದರೂ ಕೂಡ ಪಿಎಂ ಮೋದಿ ಅವರು ಮಹಿಳೆಯರ ಹಿತದಲ್ಲಿ ಇದನ್ನು ಜಾರಿಗೊಳಿಸಿದ್ದಾರೆ ಎಂದರು.