ಎರಡು ಕೋಟಿ ವಿಮೆ ಹಣಕ್ಕಾಗಿ ಪತಿಯ ಹತ್ಯೆ.

ಎರಡು ಕೋಟಿ ವಿಮೆ ಹಣಕ್ಕಾಗಿ ಪತಿಯ ಹತ್ಯೆ.

ಎಫ್ಎಸ್ಎಲ್ ಅಧಿಕಾರಿಗಳೇ ಆರೋಪಿಗಳ ಸಾಲಿನಲ್ಲಿ..

ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ..

ಬೆಳಗಾವಿ : ಎರಡು ಕೋಟಿ ರೂಪಾಯಿ ವಿಮೆ ಹಣ ಪಡೆಯುವ ಉದ್ದೇಶದಿಂದ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ ಮಾಡಿಸಿರುವ ಪ್ರಕರಣದಲ್ಲಿ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ ತನಿಖೆಯ ವೇಳೆ ಎಫ್ಎಸ್ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ಅಧಿಕಾರಿಗಳ ಪಾತ್ರವೂ ಬೆಳಕಿಗೆ ಬಂದಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಕೊಲೆ ಪ್ರಕರಣವೊಂದರಲ್ಲಿ ಎಫ್ಎಸ್ಎಲ್ ಅಧಿಕಾರಿಗಳು ನೇರವಾಗಿ ಭಾಗಿಯಾಗಿರುವ ಆರೋಪ ಕೇಳಿಬಂದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಘಡಗೋರಿ ಗ್ರಾಮದ ಮಾಜಿ ಸೈನಿಕ ಸಂದೀಪ ಮಂಜರಗಿ ಅವರ ಸಾವನ್ನು ಆರಂಭಿಕ ಹಂತದಲ್ಲಿ ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ ಪ್ರಕರಣದ ತನಿಖೆಯನ್ನು ಆಳವಾಗಿ ನಡೆಸಿದಾಗ ಇದು ಪೂರ್ವನಿಯೋಜಿತವಾಗಿ ರೂಪಿಸಲಾದ ಕೊಲೆ ಎಂಬುದು ಬಹಿರಂಗವಾಗಿದೆ. ತನಿಖೆಯ ವೇಳೆ ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿಗಳನ್ನು ತಿರುಚಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಬೆಳಗಾವಿಯ ಎಫ್ಎಸ್ಎಲ್ ಕಚೇರಿಯ ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿ.ಎನ್. ನಾಗರಾಜ, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ, ಗುಮಾಸ್ತ ಅಪ್ಪಾಸಾಬ ನಾಯಿಕ್, ಆರ್ಎಂಪಿ ವೈದ್ಯ ಬಸವರಾಜ್ ಭಸ್ಮೆ ಹಾಗೂ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್ಡಿಎ ಅಶೋಕ ಗುಜಾನಾಳ ಅವರನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿ ಸುಮಾ ಅವರಿಂದ ಹಣದ ಹಂಚಿಕೆ ನಡೆದಿರುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದ್ದು, ಎಫ್ಡಿಎ ಅಶೋಕ ಗುಜಾನಾಳ ಮೂಲಕ ಎಫ್ಎಸ್ಎಲ್ ಅಧಿಕಾರಿಗಳ ಸಂಪರ್ಕ ಸಾಧಿಸಲಾಗಿತ್ತು ಎನ್ನಲಾಗಿದೆ. ಈ ಮೂಲಕ ಪ್ರಕರಣವನ್ನು ಅಪಘಾತ ಎಂದು ತೋರಿಸುವ ಪ್ರಯತ್ನ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಇದುವರೆಗೆ ಪ್ರಕರಣದಲ್ಲಿ ಮೃತ ಸಂದೀಪ ಮಂಜರಗಿ ಅವರ ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ, ಸ್ನೇಹಿತ ಸಚಿನ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತರಿಂದ ಮಹತ್ವದ ಮಾಹಿತಿಗಳು ಲಭ್ಯವಾಗುತ್ತಿದ್ದು, ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರ ಇರುವ ಸಾಧ್ಯತೆಗಳಿವೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಈ ಪ್ರಕರಣವು ರಾಜ್ಯದ ತನಿಖಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಫಾರೆನ್ಸಿಕ್ ವರದಿಗಳ ದುರುಪಯೋಗ ಮತ್ತು ಅಧಿಕಾರ ದುರ್ಬಳಕೆಯ ಆರೋಪಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *