ಜಲಾಶಯಗಳ ರಕ್ಷಣೆ, ಕುಡಿಯುವ ನೀರಿಗೆ ಮೊದಲ ಆದ್ಯತೆ..
ಪ್ರತಿ ತಾಲೂಕಿಗೆ ₹1 ಕೋಟಿ ತುರ್ತು ಅನುದಾನ..
ಮುಜರಾಯಿ ದೇವಸ್ಥಾನಗಳಲ್ಲಿ ಸಿಸಿಟಿವಿ ಕಡ್ಡಾಯ.
ಸಿಎಂ ಡಿ, ಕೆ, ಶಿವಕುಮಾರ..
ಬೆಳಗಾವಿ : ಕಿತ್ತೂರು ಕರ್ನಾಟಕ ಭಾಗದಲ್ಲಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಸುವರ್ಣ ವಿಧಾನಸೌಧದಲ್ಲಿ ಹಿರಿಯ ಸಚಿವರು ಹಾಗೂ ಶಾಸಕರೊಂದಿಗೆ ಕಲಬುರಗಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯಗಳ ಸಂರಕ್ಷಣೆ ಮತ್ತು ಕುಡಿಯುವ ನೀರಿಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ತುಂಗಭದ್ರಾ ಗೇಟ್ಗಳ ಆಧುನೀಕರಣ: ತುಂಗಭದ್ರಾ ಜಲಾಶಯದ 50 ವರ್ಷ ಹಳೆಯದಾದ 33 ಗೇಟ್ಗಳನ್ನು ಬದಲಾಯಿಸಲಾಗಿದ್ದು, ಇನ್ನೂ 17 ಗೇಟ್ಗಳ ಬದಲಾವಣೆಗೆ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು. ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಡೆಯಲು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಮಟ್ಟದಲ್ಲಿ ಸಭೆ ನಡೆಸಿ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದರು.
ಕುಡಿಯುವ ನೀರಿಗೆ ₹1 ಕೋಟಿ ತುರ್ತು ಅನುದಾನ: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪ್ರತಿ ತಾಲೂಕಿಗೆ ₹1 ಕೋಟಿ ತುರ್ತು ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯಗಳಲ್ಲಿ ಕುಡಿಯುವ ನೀರನ್ನು ಕಡ್ಡಾಯವಾಗಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕುಡಿಯುವ ನೀರಿಗೆ ಅಡ್ಡಿಯಾಗಿರುವ 50ಕ್ಕೂ ಹೆಚ್ಚು ಅನಧಿಕೃತ ಅಡೆತಡೆಗಳನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎಂಬ ಮಾನವೀಯ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೇವಸ್ಥಾನಗಳಲ್ಲಿ ಸಿಸಿಟಿವಿ ಕಡ್ಡಾಯ: ರಾಮ ಮಂದಿರದಲ್ಲಿ ನಡೆದ ಕಳ್ಳತನದ ಘಟನೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ 24X7 ಕಾರ್ಯನಿರ್ವಹಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲಾಗುವುದು. ದೇವಾಲಯಗಳ ಭದ್ರತೆಯಲ್ಲಿ ಯಾವುದೇ ರಾಜಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಗ್ಯಾರಂಟಿ ಯೋಜನೆಗಳ ಪರಿಶೀಲನೆ: ಅರ್ಹ ಫಲಾನುಭವಿಗಳಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು. ಮತದಾನದ ಹಕ್ಕು ಹೊಂದಿರುವ ರಾಜ್ಯದ ನಾಗರಿಕರಿಗೆ ‘ಗೃಹ ಜ್ಯೋತಿ’ ಹಾಗೂ ‘ಭಾಗ್ಯಲಕ್ಷ್ಮಿ’ ಯೋಜನೆಗಳ ಪ್ರಯೋಜನ ದೊರೆಯಲಿದೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ಜಾರಿಗೆ ಯಾಗಿರು ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಲಭಿಸಲಿವೇ ಎಂದರು.
ರೈತರ ಬೆಳೆ ವಿಮೆ ದುರುಪಯೋಗವಾಗುತ್ತಿರುವ ಕುರಿತು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಾಗುವುದು. ರಸಗೊಬ್ಬರ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ತಿ ನೋಂದಣಿ ಅವಧಿ ವಿಸ್ತರಣೆ: ಸಾರ್ವಜನಿಕರ ಅನುಕೂಲಕ್ಕಾಗಿ 30×40 ಅಳತೆಯ ನಿವೇಶನಗಳ ಆಸ್ತಿ ನೋಂದಣಿ ಪ್ರಕ್ರಿಯೆಯ ಕಾಲಾವಕಾಶವನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ಕಾವೇರಿ ತುಂಗಭದ್ರಾ ಕೃಷ್ಣ ನದಿ ಜೊಡಣೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು, ತಾತ್ಕಾಲಿಕವಾಗಿ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದಿಂದ ೯೦ % ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ೧೦% ರಷ್ಟು ನದಿ ಜೊಡನೆ ಕಾಮಗಾರಿಗೆ ಹಣಕಾಸು ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ಮೂರು ರಾಜ್ಯಗಳು ಸಿಎಂಗಳ ಜೋತೆ ತುಂಗಭದ್ರಾ, ನದಿ ದುರಸ್ಥಿಯ ಬಗ್ಗೆ ಚರ್ಚಿಸಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಮೂರು ರಾಜ್ಯದ ಜನತೆಗೆ ನೀರು ವದಗಿಸಯುವ ವ್ಯವಸ್ಥೆ ಕಲ್ಪಿಸಲಾಗುವುದು ಭರವಸೆ ನೀಡಿದರು.
ಈ ವೇಳೆ ಡಿಸಿಎಂ ಜಿ. ಪರಮೇಶ್ವರ, ಸಚಿವ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಯು.ಟಿ. ಖಾದರ್, ಲಕ್ಷ್ಮೀ ಹೆಬ್ಬಾಳ್ಕರ್, ಸೇರಿದಂತೆ, ಕೋಣರೆಡ್ಡಿ, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮೊದ್ ರೋಷನ್, ಎಸ್ ಕೆ. ರಾಮರಾಜನ್, ನಗರ ಪೊಲೀಸ್ ಆಯುಕ್ತ ಭೂಷನ್ ಗೂಲಾಭರಾವ್ ಭೊರಸೆ, ಸೇರಿದಂತೆ ಹಲವು ರಾಜ್ಯಕೀಯು ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.