ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿ, ಟ್ರ್ಯಾಕ್ ಸೂಟ್ ವಿತರಣೆ..

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿ, ಟ್ರ್ಯಾಕ್ ಸೂಟ್ ವಿತರಣೆ..

​ಮದನಕುಮಾರ್ ಬೈರಪ್ಪನ್ನವರ ಫೌಂಡೇಶನ್‌ನಿಂದ ಸಮಾಜಮುಖಿ ಕಾರ್ಯ.

​ಬೆಳಗಾವಿ : ಇಂದಿನ ಮಕ್ಕಳೇ ದೇಶದ ಭವಿಷ್ಯ. ಬಡ ಕುಟುಂಬಗಳಿಂದ ಬರುವ ಪುಟ್ಟ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪೋಷಕರಿಗೆ ಆರ್ಥಿಕ ತೊಂದರೆ ಇರುತ್ತದೆ. ಇಂತಹ ಸಂದರ್ಭದಲ್ಲಿ ದಾನಿಗಳು ಮುಂದೆ ಬಂದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳಬೇಕು ಎಂದು ಮದನ್ ಕುಮಾರ್ ಬೈರಪ್ಪನ್ನವರ ಫೌಂಡೇಶನ್ ಕರೆ ನೀಡಿದೆ.

​ನಗರದ ಆಂಜನೇಯ ನಗರದಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಫೌಂಡೇಶನ್ ನೇತೃತ್ವದಲ್ಲಿ ಶನಿವಾರ ಪುಸ್ತಕ, ಶಾಲಾ ಬ್ಯಾಗ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ವಿವಿಧ ವಸ್ತುಗಳನ್ನು ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಬೇಡಿಕೆಯಂತೆ ಎಲ್‌ಕೆಜಿ, ಯುಕೆಜಿ ಹಾಗೂ ೧ ರಿಂದ ೭ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ರ್ಯಾಕ್ ಸೂಟ್‌ಗಳನ್ನು ಸಹ ಇದೇ ವೇಳೆ ವಿತರಣೆ ಮಾಡಲಾಯಿತು.

​ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ:*
ಬಿಜೆಪಿಯ ಹಿರಿಯ ಮುಖಂಡ
ಶಂಕರಗೌಡ ಪಾಟೀಲ ಅವರು
​ವಿದ್ಯಾರ್ಥಿಗಳಿಗೆ ಸಾಮಗ್ರಿ ವಿತರಿಸಿದ ಬಳಿಕ ಮಾತನಾಡಿ,
“ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿವೆ. ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಹಾಗಂತ ದಾನಿಗಳು ಸುಮ್ಮನೆ ಕುಳಿತುಕೊಳ್ಳಬಾರದು, ಕೈಲಾದ ಸಹಾಯ ಮಾಡಬೇಕು. ನಾನೂ ಸಹ ಸರ್ಕಾರಿ ಶಾಲೆಯಲ್ಲೇ ಓದಿ ಬೆಳೆದವನು,” ಎಂದು ನೆನಪಿಸಿಕೊಂಡರು.

ಇದೇ ವೇಳೆ, “ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಕಡೆ ಗಮನ ಹರಿಸಬೇಕೇ ಹೊರತು ರಾಜಕೀಯದಲ್ಲಿ ಪಾಲ್ಗೊಳ್ಳಬಾರದು” ಎಂದು ಅವರು ಕಿವಿಮಾತು ಹೇಳಿದರು.

​ನಿರಂತರವಾಗಿ ಸಾಗಲಿದೆ ಸೇವೆ: ಮದನ್ ಕುಮಾರ್
​ಫೌಂಡೇಶನ್ ಸಂಸ್ಥಾಪಕ ಮದನ್ ಕುಮಾರ್ ಮಾತನಾಡಿ, “ಕಳೆದ ಹಲವಾರು ವರ್ಷಗಳಿಂದ ನಮ್ಮ ಫೌಂಡೇಶನ್ ವತಿಯಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ವಸ್ತುಗಳನ್ನು ನಿರಂತರವಾಗಿ ನೀಡುತ್ತಾ ಬರಲಾಗುತ್ತಿದೆ. ಪೋಷಕರು ಬಡತನವಿದೆ ಎಂಬ ಕಾರಣಕ್ಕೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ, ಕಷ್ಟಪಟ್ಟಾದರೂ ಶಾಲೆಗೆ ಕಳುಹಿಸಬೇಕು. ಉತ್ತಮ ಶಿಕ್ಷಣ ಪಡೆದರೆ ಮುಂದೆ ಅವರು ದೊಡ್ಡ ಹುದ್ದೆಗೇರಿ ದೇಶದ ಆಸ್ತಿಯಾಗುತ್ತಾರೆ,” ಎಂದರು.

ಈ ವೇಳೆ ​ ಮದನ್ ಕುಮಾರ್ ಬೌರಪ್ಪನ್ನವರ ಫೌಂಡೇಶನ್‌ನ ಸಿಬ್ಬಂದಿ ವರ್ಗ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.