ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕಾದ ಕಾರ್ಯವನ್ನು ಮಾಡಿದ ಆಟೋ ಚಾಲಕರು..

ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕಾದ ಕಾರ್ಯವನ್ನು ಮಾಡಿದ ಆಟೋ ಚಾಲಕರು..

ಜನರ ಅಪಘಾತ ತಡೆಯುವ ಆಪತಬಾಂಧವರಾದ ಆಟೋ ಚಾಲಕರು.

ಬೆಳಗಾವಿ : ಸಾರ್ವಜನಿಕರ ಸೌಲಭ್ಯದ ಬಗ್ಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಎಷ್ಟು ನಿರ್ಲಕ್ಷ್ಯ ಧೋರಣೆ ಹೊಂದಿರುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನವೆಂಬಂತೆ, ಪಾಲಿಕೆಯ ಸಿಬ್ಬಂದಿಗಳು, ಸ್ಥಳೀಯ ನಗರ ಸೇವಕ ಹಾಗೂ ಶಾಸಕರಿಗೆ ಸಂಬಂಧಪಟ್ಟವರು ಅಲ್ಲೇ ತಿರುಗಾಡಿದರೂ ಅಪಾಯಕಾರಿ ರಸ್ತೆಯ ಬಗ್ಗೆ ವಿಚಾರ ಮಾಡದೇ ಸುಮ್ಮನಿದ್ದ ಸ್ಥಿತಿಯಲ್ಲಿ, ಆಟೋ ಚಾಲಕರು ಬೀದಿಗಿಳುದು ರಸ್ತೆ ಸ್ವಚ್ಛ ಮಾಡಿ, ಜನರಿಗೆ ಆಗುವ ಅಪಾಯವನ್ನು ದೂರ ಮಾಡಿದ್ದಾರೆ.

ನಗರದ ಕೇಂದ್ರಸ್ಥಾನದಲ್ಲಿರುವ ಕಪಿಲೇಶ್ವರ ದೇವಸ್ಥಾನದ ಮೇಲಸೇತುವೆಯ ಅತೀ ಮುಖ್ಯವಾದ ರಸ್ತೆಯಲ್ಲಿ ಮೊನ್ನೆ ಕೆಲ ದಿನಗಳ ಹಿಂದೆ ಆದ ಮಳೆಯಿಂದ ರಸ್ತೆ ಮೇಲಿನ ಡಾoಬರ ಕಡಿ ಕಿತ್ತು, ರಸ್ತೆಯ ತುಂಬೆಲ್ಲ ಹರಡಿದ್ದವು, ಇದರಿಂದ ವಾಹನಗಳು ಚಲಿಸುವಾಗ ಡಾoಬರ ಕಡಿಗಳು, ಅತಿಯಾದ ದೂಳು ವಾಹನ ಸಂಚಾರಿಗಳಿಗೆ ಕಿರಿಕಿರಿ ತಂದಿತ್ತು.

ಶನಿ ಮಂದಿರದಿಂದ ಕಪಿಲೇಶ್ವರ ದೇವಸ್ಥಾನದ ಮೇಲಸೇತುವೆ ಮೂಲಕ ಸಾಗಿ, ಸೇತುವೆ ಕೊನೆಯಲ್ಲಿ, ಮಳೆಯಿಂದ ಹಾಳಾದ ರಸ್ತೆಯ ಡಾಂಬರ್ ಕಡಿಗಳು ಅತಿಯಾಗಿ ಬಿದ್ದಿದ್ದು ಅದರಿಂದ ಪ್ರತಿದಿನ ಅನೇಕ ದ್ವಿಚಕ್ರ ವಾಹನಗಳು ಅಪಘಾತಕ್ಕೆ ಇಡಾಗುತ್ತಿದ್ದವು, ಬ್ರಿಡ್ಜ್ ಮೇಲಿಂದ ಬಂದು ಕೊನೆಗೆ ಇಳಿಜಾರಿನಲ್ಲಿ, ಕಡಿ ಬಿದ್ದಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು (ಜಾರಿ) ಸ್ಕಿಡ್ ಆಗಿ ಬಿದ್ದು ಎಷ್ಟೋ ಜನರನ್ನು ಅಲ್ಲಿಯ ಸ್ಥಳೀಯ ಆಟೋ ಸ್ಟ್ಯಾಂಡಿನ ಆಟೋ ಚಾಲಕರೇ ಎದುರಿನ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಹೇಳಿದ್ದುoಟು.

ಇಂತಹ ಡಾಂಬರ್ ಕಡಿಗಳು ಬಿದ್ದಿರುವ ಅಪಾಯಕಾರಿ ಬ್ರಿಡ್ಜ್ ರಸ್ತೆಯ ಮೇಲೆ ಪ್ರತಿದಿನ ಜನಪ್ರತಿನಿದಿಗಳು ಅವರಿಗೆ ಸಂಬಂಧಪಟ್ಟವರು, ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ತಿರುಗಾಡುತ್ತಿದ್ದರೂ ಇದರಿಂದ ವಾಹನಗಳು ಸ್ಕಿಡ್ ಆಗಿ ಅಪಘಾತ ಆಗುತ್ತವೆ ಎಂದು ಅರಿತು ಯಾರೂ ಸಮಸ್ಯೆ ನಿವಾರಿಸುವ ಕಾರ್ಯ ಮಾಡಲಿಲ್ಲ. ಜನರ ಮತದಿಂದ ಅಧಿಕಾರ ಪಡೆದ ರಾಜಕಾರಣಿಗಳು, ಜನರ ತೆರಿಗೆ ದುಡ್ಡಿನಲ್ಲಿ ಸಂಬಳ ಪಡೆಯುವ ಸರ್ಕಾರಿ ಸಿಬ್ಬಂದಿಗಳು ತಮ್ಮ ಜವಾಬ್ದಾರಿ ಮರೆತಿದ್ದರು.

ಆಗ ಬ್ರಿಡ್ಜ್ ಕೊನೆಗೆ ರೇಣುಕಾ ಹೋಟೆಲ್ ವೃತ್ತದಲ್ಲಿ ಇರುವ ಶಿವಸೇನೆ ಆಟೋ ಸ್ಟ್ಯಾಂಡಿನ ಆಟೋ ಚಾಲಕರು ಸಾರ್ವಜನಿಕರ ಸಂಕಷ್ಟ ಅರಿತು, ಮಾನವೀಯತೆಯಿಂದ ತಾವೇ ಸ್ವತಃ ಮುಂಜಾನೆ ಒಂದೆರಡು ಸಿಮೆಂಟ್ ಚೀಲಗಳನ್ನು ತಂದು, ಬ್ರಿಡ್ಜನ ಕೊನೆಯಲ್ಲಿ ದೊಡ್ಡ ರಸ್ತೆಯನ್ನು ಸ್ವಚ್ಛವಾಗಿ ಗೂಡಿಸಿ, ರಸ್ತೆ ಮೇಲೆ ಬಿದ್ದಿರುವ ಡಾಂಬರ್ ಕಡಿಗಳನ್ನು ಎರಡು ಚೀಲಗಳಲ್ಲಿ ತುಂಬಿ, ವಾಹನಗಳು ಸ್ಕಿಡ್ ಆಗದಂತೆ ರಸ್ತೆ ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ಕೇವಲ ಒಂದೇ ಮಳೆಗೆ ಹೀಗೆ ಕಡಿ ಕಿತ್ತು ಬರುವಂತೆ ರಸ್ತೆ ಮಾಡಿದ ಆ ಗುತ್ತಿಗೆದಾರ ಯಾರೋ? ಇದನ್ನು ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳು ಯಾರೋ? ಮುಖ್ಯ ರಸ್ತೆಯೇ ಇಷ್ಟು ಕೆಟ್ಟಿರುವಾಗ ಸ್ಥಳೀಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೋ? ಒಟ್ಟಿನಲ್ಲಿ ನಮ್ಮ ಜನರಿಗೆ ತಿಳಿಯಬೇಕಿದೆ ನಾವು ಯಾರಿಗೆ ಅಧಿಕಾರ ನೀಡುತ್ತಿದ್ದೇವೆ, ನಮ್ಮ ಹಕ್ಕು ಏನು ಎಂದು.

ಜನರ ಕಷ್ಟಕ್ಕೆ ಮಿಡಿದ ಆಟೋ ಚಾಲಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಹಾಗೂ ಅಭಿನಂದನೆ ದೊರಕಿದ್ದು, ಆಟೋ ಚಾಲಕರು ಹೇಳಿದ ಪ್ರಕಾರ ಇಲ್ಲಿ ಪ್ರತಿದಿನ ನಾಲ್ಕಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುತ್ತಿದ್ದು, ನಾವೇ ಅವರನ್ನು ಕರೆದುಕೊಂಡು ಹೋಗಿ ಎದುರಿನ ಆಸ್ಪತ್ರೆಗೆ ಸೇರಿಸುತ್ತಿದ್ದೆವು, ಬ್ರಿಡ್ಜ್ ಕೊನೆಗೆ ವೃತ್ತವಿದೆ, ಮುರನಾಲ್ಕು ಕಡೆಯಿಂದ ವಾಹನಗಳು ಬರುತ್ತವೆ, ವೇಗದಿಂದ ಬಂದ ಗಾಡಿಗಳು ಸ್ಕಿಡ್ ಆಗುತ್ತವೆ, ದಿನಾ ಈ ಸಮಸ್ಯೆ ನೋಡಿ ಸಾಕಾಗಿ, ನಾವೇ ರಸ್ತೆ ಸ್ವಚ್ಛ ಮಾಡಿ ಡಾಂಬರ್ ಕಡಿಗಳನ್ನು ತಗೆಯುತ್ತಿದ್ದೇವೆ ಎಂದರು.

ವರದಿ ಪ್ರಕಾಶ್ ಬಿ ಕೆ..