ಪಂತ ಬಾಳೇಕುಂದ್ರಿಯಲ್ಲಿ ನಾಗರ ಪಂಚಮಿ ನಿಮಿತ್ತ ನಾಗಮೂರ್ತಿ ಪ್ರತಿಷ್ಠಾಪನೆ..
ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬದಲ್ಲಿ ಭಕ್ತಿಭಾವ ಮೇರೆದ ಗ್ರಾಮಸ್ಥರು..
ಬೆಳಗಾವಿ : ತಾಲೂಕಿನ ಸುಕ್ಷೇತ್ರ ದತ್ತ ಮಹಾರಾಜರ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ, ನಾಗರ ಪಂಚಮಿ ನಿಮಿತ್ತವಾಗಿ ನಾಗಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಗ್ರಾಮದ ದತ್ತ ಮಹಾರಾಜರ ಮಠದಿಂದ ನಾಗಮೂರ್ತಿಯನ್ನು ನೂರಾರು ಮಹಿಳೆಯರ ಕುಂಭಮೇಳ, ವಿವಿಧ ಕಲಾಕೃತಿಗಳು, ಭಜನೆ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯುದ್ದಕ್ಕೂ ಭಕ್ತಾಧಿಗಳು ತಮ್ಮ ತಮ್ಮ ಗಲ್ಲಿಗಳಲ್ಲಿ ನಾಗಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.
ಬೆಳಿಗ್ಗೆ ಆರಂಭವಾದ ಮೆರವಣಿಗೆಯು ಮಧ್ಯಾಹ್ನದ ವೇಳೆಗೆ ಶ್ರೀ ಕದಲಿಪುರ ಉಮಾರಾಮೇಶ್ವರ ದೇವಸ್ಥಾನವನ್ನು ತಲುಪಿತು. ದೇವಸ್ಥಾನದಲ್ಲಿ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ನಂತರ ಭಕ್ತಾಧಿಗಳಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸೋಮವಾರ ಹಿಂದೂಗಳ ಪವಿತ್ರ ಶ್ರಾವಣ ಮಾಸದ ಪ್ರಾರಂಭವಾಗಲಿದ್ದು, ನೂತನ ನಾಗಮೂರ್ತಿಗೆ ಬೆಳಗಿನ ಜಾವ 4 ಗಂಟೆಯಿಂದ ಉಮಾರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದತ್ತ ಮಹಾರಾಜರ ಪಂತ ಬಾಳೇಕುಂದ್ರಿಯಲ್ಲಿ ನಾಗ ಪಂಚಮಿ ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಯಿತು. ನಾಗಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಪಂಚ ಕಮಿಟಿ, ಯುವಕ ಮಂಡಳಿ ಸೇರಿದಂತೆ ಸಮಸ್ತ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.