ಬೆಳಗಾವಿ ಕರ್ನಾಟಕದಲ್ಲೇ ಇದೆ, ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ..

ಬೆಳಗಾವಿ ಕರ್ನಾಟಕದಲ್ಲೇ ಇದೆ, ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ..

ನಾವೇನು ಕನ್ನಡ ವಿರೋಧಿಗಳಲ್ಲ, ಬೆಳಗಾವಿ ಅಭಿವೃದ್ಧಿ ನಮ್ಮ ಗುರಿ..

ಜಾತಿ ಮತ ಭಾಷೆಯ ಭೇದಭಾವ ಮಾಡದೇ ಎಲ್ಲರೂ ಒಂದಾಗಿ ಬೆಳಗಾವಿ ಅಭಿವೃದ್ಧಿಗೆ ಕೆಲಸ ಮಾಡೋಣ..

ಮೇಯರ್ ಪ್ರೀತಿ ವಿ ಕಾಮಕರ..

ಬೆಳಗಾವಿ : ಬೆಳಗಾವಿ ಕರ್ನಾಟಕದಲ್ಲೇ ಇದೇ, ನಾವೇನು ಕನ್ನಡದ ವಿರೋಧಿಗಳು ಅಲ್ಲಾ, ಬೆಳಗಾವಿ ನಗರದ ಅಭಿವೃದ್ಧಿಗಾಗಿ ನಾವು ಈ ಸ್ಥಾನದಲ್ಲಿ ಇದ್ದೇವೆ, ಯಾವುದೇ ಜಾತಿ ಮತ ಭಾಷೆಯ ಭೇದಬಾವ ಮಾಡದೇ ನಾವೆಲ್ಲರೂ ಒಂದಾಗಿ ನಗರದ ಅಭಿವೃದ್ಧಿ ಮಾಡೋಣ, ಬೆಳಗಾವಿಯ ಅಭಿವೃದ್ಧಿ ನಮ್ಮ ಗುರಿಯಾಗಿರಬೇಕು, ಬೆಳಗಾವಿ ಕರ್ನಾಟಕದಲ್ಲೇ ಇದೆ, ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ ಎಂದು ಪಾಲಿಕೆಯ ಮೇಯರ್ ಪ್ರೀತಿ ಕಾಮಕರ ಅವರು ಹೇಳಿದ್ದಾರೆ.

ಮಂಗಳವಾರ ದಿನಾಂಕ 18/08/2026 ರಂದು ಬೆಳಗಾವಿ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಾಲಿಕೆಯ ಮೇಯರ್ ಅವರು, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಕನ್ನಡ ಪರವಾದ ಗೊತ್ತುವಳಿ ಅಂಗೀಕಾರದ ವಿಷಯವಾಗಿ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ಎಂಈಎಸ್ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಹಾಗೂ ಸೃಷ್ಟಿಸಿದ ಗದ್ದಲಕ್ಕೆ ಉತ್ತರಿಸಿದ ಮೇಯರ್ ಅವರು ಬೆಳಗಾವಿ ಕರ್ನಾಟಕದಲ್ಲಿಯೇ ಇದೆ, ಎಲ್ಲರೂ ಒಂದಾಗಿ ನಗರದ ಅಭಿವೃದ್ಧಿಯ ಕಾರ್ಯ ಮಾಡೋಣ ಎಂದಿದ್ದಾರೆ.

ಈ ಮೊದಲು ಕರ್ನಾಟಕ ಪರ ಗೊತ್ತುವಳಿ ಅಂಗೀಕಾರದ ವಿಚಾರವಾಗಿ ಸದಸ್ಯರ ನಡುವೆ ವಾಗ್ವಾದ, ಗದ್ದಲ ಹಾಗೂ ಕೋಲಾಹಲ ಉಂಟಾಗಿ ಕೆಲಕಾಲ ಸಭೆಯ ವಾತಾವರಣ ಬಿಗುವಿನಿಂದ ಕೂಡಿತ್ತು, ಸಭೆಯಲ್ಲಿ ಪಾಲಿಕೆ ಸದಸ್ಯರಾದ ರಮೇಶ್ ಸೊಟ್ಟಕ್ಕಿ ಹಾಗೂ ದಿನೇಶ್ ನಾಶಿಪುಡಿ ಸೇರಿದಂತೆ ಕೆಲ ಸದಸ್ಯರು ಕರ್ನಾಟಕ ಪರ ಗೊತ್ತುವಳಿಯನ್ನು ಇದೇ ಸಭೆಯಲ್ಲಿ ಸ್ಪಷ್ಟವಾಗಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಅಸ್ಮಿತೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು, ಪಾಲಿಕೆ ಸಭೆಗೆ ಸದಸ್ಯರು ಪೊಲೀಸ್ ಬಂದೋಬಸ್ತ್‌ನಲ್ಲೇ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೂ ಸದಸ್ಯ ರಮೇಶ್ ಸೊಟ್ಟಕ್ಕಿ ತಮ್ಮ ಅಸಮಾಧಾನ ಹೊರ ಹಾಕಿದರು.

ಸರ್ಕಾರಕ್ಕೆ ಗೊತ್ತುವಳಿ ಕಳುಹಿಸಲಾಗಿದೆ ಉಪಮೇಯರ್..

ಈ ವೇಳೆ ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಮಹಾನಗರ ಪಾಲಿಕೆಯ ಕರ್ನಾಟಕ ಪರ ಗೊತ್ತುವಳಿ ವಿಚಾರವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದು, ಸಂಬಂಧಿಸಿದಂತೆ ಗೊತ್ತುವಳಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಆದರೆ ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂಬ ಕಾರಣಕ್ಕೆ ಸಭೆಯಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳುವುದನ್ನು ಮುಂದೂಡಬಾರದು ಎಂದು ಹೇಳಿದರು. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಪಾಲಿಕೆ ಸಭೆಯಲ್ಲೇ ಗೊತ್ತುವಳಿ ಅಂಗೀಕರಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಮಹಾಪೌರರಾದ ಪ್ರೀತಿ ಕಾಮಕರ ಅವರು ಸರ್ಕಾರದ ಆದೇಶದ ಮೇರೆಗೆ ಬೆಳಗಾವಿ ಪಾಲಿಕೆಯು ಕನ್ನಡ ಭಾಷೆ, ನೆಲ, ಜಲ ಹಾಗೂ ನುಡಿಯ ಪರವಾಗಿ ಇರುವುದನ್ನು ಅಂಗಿಕರಿಸಿ ದೃಡೀಕರಿಸಲು ಸರ್ಕಾರಕ್ಕೆ ಕಳಿಸುತ್ತೇವೆ ಎಂಬ ಗೊತ್ತುವಳಿಯನ್ನು ಸಭೆಯಲ್ಲಿ ಓದಿದರು.

ಆದರೆ, ಗೊತ್ತುವಳಿಯಲ್ಲಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಪದಗಳನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪರ ಘೋಷಣೆಗಳು ಮೊಳಗಿದವು. ಸದಸ್ಯರು ತಮ್ಮ ನಿಲುವನ್ನು ಸಮರ್ಥಿಸಿಕೊಂಡು ಮಾತನಾಡಿದ ಹಿನ್ನೆಲೆಯಲ್ಲಿ ಸಭೆಯ ಕಾರ್ಯಕಲಾಪ ಕೆಲಕಾಲ ಗದ್ದಲದಿಂದ ಕೂಡಿ, ಸಭೆಯನ್ನು ಊಟದ ವಿರಾಮದ ನಂತರದ ವರೆಗೆ ಮುಂದೂಡಲಾಯಿತು.

ಮದ್ಯಾಹ್ನ ಊಟದ ವಿರಾಮದ ನಂತರ ಸಭೆ ಮುಂದುವರೆದಿದ್ದು, ಗಣೇಶ ಹಬ್ಬ ಹಾಗೂ ಈದ್ ಮಿಲಾದ ಹಬ್ಬದ ತಯಾರಿಯ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವಿಕೆ, ಎಲ್ ಎಂಡ್ ಟಿ ಅವರು ನಗರದಲ್ಲೆಲ್ಲ ರಸ್ತೆ ಅಗೆದು ಹಾಗೆ ಬಿಟ್ಟಿರುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಮೇಲೆ ಉತ್ತಮ ಚರ್ಚೆಗಳಾಗಿ ಸಂಬಂದಿಸಿದ ಅಧಿಕಾರಿಗಳಿಂದ ಸಭೆಗೆ ಮಾಹಿತಿ ಪೂರೈಕೆಯ ಜೊತೆಗೆ ಸಭೆ ಮುಕ್ತಾಯಗೊಂಡಿತ್ತು.

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *