ಕಸ ವಿಂಗಡಣೆಯಲ್ಲಿ ರಾಜ್ಯಕ್ಕೆ ಮಾದರಿಯಾದ ಬೆಳಗಾವಿ ಪಾಲಿಕೆ..
ಬೇರೆ ಪಾಲಿಕೆಗಳು ಈ ಮಾದರಿ ಅನುಸರಿಸಲಿ..
ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ..
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಹಸಿಕಸ ಹಾಗೂ ವನಕಸ ವಿಂಗಡನಾ ಮಾಡುವ ಕಾರ್ಯ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ರಾಜ್ಯದ ಉಳಿದ ಪಾಲಿಕೆಗಳಿಗೂ ಈ ಕಾರ್ಯ ಮಾದರಿಯಾಗಿದೆ, ಬ್ಯಾಲೆಸ್ಟಿಕ್ ಮಷಿನ್ ಎಂಬ ಸಾಧನದಿಂದ ನೂರಕ್ಕೆ ನೂರರಷ್ಟು ಹಸಿಕಸ ವನಕಸವನ್ನು ಬೆರ್ಪಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಬೆಳಗಾವಿ ಪಾಲಿಕೆಯ ಅಧಿಕಾರಿಗಳನ್ನು ನಗರಾಭಿವೃದ್ಧಿ ಸಚಿವ ಯತಿಂದ್ರ ಸಿದ್ದರಾಮಯ್ಯ ಅವರು ಶ್ಲಾಘನೇ ಮಾಡಿದ್ದಾರೆ.

ಜುಲೈ 28: ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಕೊಠಡಿ ಸಂಖ್ಯೆ 354ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (BUDA) ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಸಾರ್ವಜನಿಕರು ಹಸಿಕಸ ವನಕಸ ಎಂದು ಬೇರ್ಪಡಿಸಿ ಕಸ ಸಂಗ್ರಹ ವಾಹನಗಳಿಗೆ ನೀಡುತ್ತಿದ್ದು, ಅದು ಶೇಕಡಾ 80ರಷ್ಟು ಆಗುತ್ತಿದ್ದು, ಉಳಿದ ಶೇಕಡಾ 20ರಷ್ಟು ಕಸ ವಿಂಗಡಣೆಯನ್ನು ಬ್ಯಾಲೆಸ್ಟಿಕ್ ಮಷಿನಿನ ಸಹಾಯದಿಂದ ಮಾಡುತ್ತಿರುವದು ಮಾದರಿ ಕಾರ್ಯ ಎಂದ ಅವರು, ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸರ್ಕಾರಗಳು ನೂರಾರು ಕೋಟಿ ಹಣ ಖರ್ಚು ಮಾಡುವಾಗ, ನಗರ ಪ್ರದೇಶಗಳಲ್ಲಿ ಇಂತಹ ಮಷಿನುಗಳ ಉಪಯೋಗದಿಂದ ಸ್ವಚ್ಛತೆಯ ಜೊತೆ, ಕಸದ ಮರು ಬಳಕೆಯೂ ಯೋಗ್ಯ ರೀತಿಯಲ್ಲಿ ಆಗುತ್ತದೆ, ಇದು ಉಳಿದ ಪಾಲಿಕೆಗಳಲ್ಲಿಯೂ ಜಾರಿ ಆಗಬೇಕು ಎಂದರು.

ಅದೇರೀತಿ ಸಭೆಯಲ್ಲಿ ವಿವಿಧ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಯಾವುದೇ ಕಾಮಗಾರಿಗಳು ಅನಗತ್ಯವಾಗಿ ವಿಳಂಬವಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಸಾರ್ವಜನಿಕ ಶೌಚಾಲಯಗಳು ದಿನದ ಎಲ್ಲ ಸಮಯದಲ್ಲೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಬೇಕು. ಅವುಗಳ ಸ್ವಚ್ಛತೆ, ನೈರ್ಮಲ್ಯ ಹಾಗೂ ನಿರ್ವಹಣೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯ ಸರ್ಕಾರದ ಕನ್ನಡ ಪರ ನಿಲುವಿಗೆ ಅನುಗುಣವಾಗಿ, ಸರ್ಕಾರಿ ಕಚೇರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡ ನಾಮಫಲಕಗಳ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಉಲ್ಲಂಘನೆ ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಗರದಲ್ಲಿ ಬಾಕಿ ಉಳಿದಿರುವ ಹಳೆಯ ಘನತ್ಯಾಜ್ಯ (Legacy Waste) ನಿರ್ವಹಣೆಯನ್ನು ತ್ವರಿತಗೊಳಿಸಿ ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಜೊತೆಗೆ ಹಾಳಾಗಿರುವ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಬೆಳಗಾವಿಯನ್ನು ಮಾದರಿ ನಗರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಬೆಳಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ರಾಜು ಶೇಠ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಅಧ್ಯಕ್ಷ ಲಕ್ಷ್ಮಣ ರಾವ್ ಜಿಂಗಳೆ, ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೀತಿ ಕಾಮ್ಕರ್, ಉಪ ಮಹಾಪೌರರಾದ ಹಣಮಂತ ಕೊಂಗಾಲಿ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್, ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಕವಿತಾ ವಾರಂಗಲ್, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.