ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಸ್ಐಆರ್ ನಲ್ಲಿ ಭಾಗಿಯಾಗಿ..
ಎಸ್ಐಆರ್ ಗೆ ಸಾರ್ವಜನಿಕರು ಸಹಕರಿಸಲು ಜಿಲ್ಲಾಧಿಕಾರಿಗಳ ಮನವಿ..
ಬೆಳಗಾವಿ : ದೇಶದಲ್ಲಿ ಜನರು ಉದ್ಯೋಗ, ಮದುವೆ ಮುಂತಾದ ಕಾರಣಗಳಿಗಾಗಿ ಬೇರೆಡೆಗೆ ಸ್ಥಳಾಂತರಗೊಳ್ಳುವುದು ಅಥವಾ ಮರಣ ಹೊಂದುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಕೇಂದ್ರ ಚುನಾವಣಾ ಆಯೋಗವು ಪ್ರತಿ 20 ವರ್ಷಗಳಿಗೊಮ್ಮೆ ಎಸ್ಐಆರ್ (ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಜಾರಿಗೆ ತಂದಿದೆ, ಇದಕ್ಕೆ ಪ್ರತಿ ನಾಗರಿಕರೂ ಸಹಕರಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಮತದಾನದ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ಅತ್ಯಗತ್ಯ. ಇದನ್ನು ಒಂದು ಅಭಿಯಾನದ ರೂಪದಲ್ಲಿ ಯಶಸ್ವಿಗೊಳಿಸಿದರೆ ಚುನಾವಣಾ ಆಯೋಗಕ್ಕೂ ಹಾಗೂ ಸಾರ್ವಜನಿಕರಾದ ನಮಗೂ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜೂನ್ 30 ರಿಂದ ಜುಲೈ 29 ರವರೆಗೆ ನಡೆಯುವ ಈ ಅಭಿಯಾನದಲ್ಲಿ
ಜಿಲ್ಲಾಧಿಕಾರಿಗಳ ನಿವಾಸಕ್ಕೆ ಎಸ್ಐಆರ್ ಪ್ರಕ್ರಿಯೆಗಾಗಿ ಭೇಟಿ ನೀಡಿದ ಬಿಎಲ್ಒ ಮತ್ತು ಮಹಾನಗರ ಪಾಲಿಕೆಯ ಚುನಾವಣಾ ವಿಭಾಗದ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ಅವರ ಪತ್ನಿಗೆ ಎಸ್ಐಆರ್ ಅರ್ಜಿ ನೀಡುವ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ “ಜೂನ್ 30 ರಿಂದ ಪ್ರಾರಂಭವಾಗಿ ಜುಲೈ 29 ರವರೆಗೆ” ಜಿಲ್ಲಾದ್ಯಂತ ಈ SIR ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಬಿಎಲ್ಒಗಳು ತಮ್ಮ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಎಲ್ಒಗಳಿಗೆ ವಿವರ ನೀಡಿ ಸಹಕರಿಸಿ:
ಮನೆ ಬಾಗಿಲಿಗೆ ಭೇಟಿ ನೀಡಿದ ಬಿಎಲ್ಒಗಳು ನಿಮ್ಮ ಮನೆಗೆ ಬಂದಾಗ ಸಾರ್ವಜನಿಕರು ಸೂಕ್ತ ವಿವರಗಳನ್ನು ನೀಡಿ ಸಹಕರಿಸಬೇಕು. ನಿಗದಿತ ಫಾರಂಗಳನ್ನು ಭರ್ತಿ ಮಾಡಿ ಅವರಿಗೆ ತಲುಪಿಸುವದು
ಮತದಾರರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ನಮ್ಮ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಲು ನಾವು ಮತದಾನದ ಹಕ್ಕು ಪಡೆದಿರಬೇಕು, ಮತದಾನದ ಹಕ್ಕು ಪಡೆಯಲು ಈ ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ನಾವು ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ವರದಿ ಪ್ರಕಾಶ ಬಿ ಕೆ..