ಬೆಳಗಾವಿ : ಉತ್ತರ ಮತಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್ಐಆರ್) ಕಾರ್ಯನಿರ್ವಹಿಸಲಿರುವ ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಇತರೆ ಸಿಬ್ಬಂದಿ ಹಾಗೂ ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳಿಗೆ ಮಂಗಳವಾರ ನಗರದ ಸರ್ದಾರ್ ಶಾಲೆಯಲ್ಲಿ ಮಹಾನಗರ ಪಾಲಿಕೆಯಿಂದ ತರಬೇತಿ ಹಾಗೂ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಪಾಲಿಕೆ ಉತ್ತರ ಭಾಗದ ಚುನಾವಣಾ ಅಧಿಕಾರಿ ಹಾಗೂ ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ್ ಟಿ ಹಾಗೂ ದಕ್ಷಿಣ ಭಾಗದ ಚುನಾವಣಾಧಿಕಾರಿ ಹಾಗೂ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಪ್ರಾತ್ಯಕ್ಷಿಕೆಸಹಿತ ಮಾಹಿತಿ ನೀಡಿ ಸಿಬ್ಬಂದಿ ಪ್ರಶ್ನೆಗಳಿಗೆ ಪರಿಹಾರ ನೀಡಿದರು.
ಜೂ.30 ರಿಂದ ಜು.30 ರವರೆಗೆ ಎಸ್ಐಆರ್ ಕಾರ್ಯನಿರ್ವಹಣಾ ಅವಧಿಯಾಗಿದ್ದು, ಸಿಬ್ಬಂದಿಗಳು ತರಬೇತಿಯಲ್ಲಿ ಸರಿಯಾದ ಮಾಹಿತಿ ಪಡೆದುಕೊಂಡು ಯಾವುದೇ ಲೋಪದೋಷಗಳಾಗದಂತೆ ನಿಗದಿತ ಅವಧಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು.

ಮಾಹಿತಿ ಕಾರ್ಯಗಾರದಲ್ಲಿ ನಗರಸೇವಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಆನಂದ ಯಲ್ಲಟ್ಟಿಕರ್, ಗೌತಮ, ಗೊರಗೊಂಡ, ಯಡ್ರಾವಿ, ಜಗದೀಶ ಯಮಕನಮರಡಿ ಇತರರು ಉಪಸ್ಥಿತರಿದ್ದರು.