ಪಾಲಿಕೆಯ ಭೂಬಾಡಿಗೆ ಗುತ್ತಿಗೆಗೆ ಹೊಸ ಟೆಂಡರಗೆ ಕರೆ..
ಬಾಪಟ ಗಲ್ಲಿ ಕಾರ ಪಾರ್ಕಿಂಗ ಅವ್ಯವಹಾರ ಲೋಕಾಯುಕ್ತ ತನಿಖೆಗೆ..
ಪಾಲಿಕೆಯ ತೆರಿಗೆ, ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ..
ಬೆಳಗಾವಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಭೂಬಾಡಿಗೆ ಸಂಗ್ರಹ ಮಾಡುವ ಗುತ್ತಿಗೆದಾರನ ಕಾರ್ಯ ತೃಪ್ತಿದಾಯಕ ಆಗಿಲ್ಲ, ಗುತ್ತಿಗೆಯ ನಿಯಮಗಳನ್ನು ಮೀರಿ ಆತ ವ್ಯಾಪಾರಿಗಳಿಂದ ಹಣ ಸಂಗ್ರಹ ಮಾಡುತ್ತಿರುವದರಿಂದ ಇದೇ ವರ್ಷದಲ್ಲಿ ಆತನ ಗುತ್ತಿಗೆಯನ್ನು ರದ್ದು ಮಾಡಿ ಹೊಸ ಗುತ್ತಿಗೆ ಕರೆಯಬೇಕೆಂದು ಸಭೆಯಲ್ಲಿ ಒಮ್ಮತದ ತೀರ್ಮಾನವನ್ನು ತಗೆದುಕೊಳ್ಳಲಾಗಿದೆ.
ಶನಿವಾರ ದಿನಾಂಕ 18/07/2026ರಂದು ಪಾಲಿಕೆಯ ಸ್ಥಾಯಿ ಸಮಿತಿ ಸಭಾ ಭವನದಲ್ಲಿ, ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರೇಖಾ ಹೂಗಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತಗೆದುಕೊಳ್ಳಲಾಗಿದ್ದು, ಪಾಲಿಕೆಯ ಅಧಿಕಾರಿಗಳಾದಿಯಾಗಿ ನಗರ ಸೇವಕರೂ ಕೂಡಾ ಭೂಬಾಡಿಗೆ ಗುತ್ತಿಗೆದರಾನ ಕಾರ್ಯವೈಖರಿಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮೊದಲಿಗೆ ಪಾಲಿಕೆಯ ಉಪ ಆಯುಕ್ತರಾದ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ಅವರು ಈ ವಿಷಯ ಪ್ರಸ್ತಾಪಿಸಿ, ನಾವು ಪುಟ್ ಪಾತ್ ಅತೀಕ್ರಮಣವನ್ನು ತೆರವು ಕಾರ್ಯಾಚರಣೆಗೆ ಹೋದಾಗ ನಾವು ದಿನ 100 ರೂಪಾಯಿಯಂತೆ ಭೂ ಬಾಡಿಗೆ ಕೊಡುತ್ತೇವೆ, ನಮ್ಮ ಹತ್ತಿರ ಬೀದಿ ಬದಿ ವ್ಯಾಪಾರಿಗಳ ಲೈಸೆನ್ಸ್ ಇವೆ ನೀವೆಗೆ ನಮ್ಮನ್ನು ಇಲ್ಲಿಂದ ಎಬಿಸುವಿರಿ ಎಂದು ಕಾಯ್ದೆ ಹೇಳುವರು. ದಿನಾಲೂ ಕೆಲ ಗಂಟೆಗಳ ಕಾಲ ಅಂಗಡಿ ಹಚ್ಚಿ ತರಕಾರಿ, ಹಣ್ಣು, ಫಾಸ್ಟ್ ಫುಡ್ ಎಳೆನೀರು ಮುಂತಾದ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಭೂ ಬಾಡಿಗೆ ವಸೂಲಿ ಮಾಡಬೇಕು, ಪುಟ್ ಪಾತ್ ಅತಿಕ್ರಮಣ ಮಾಡಿ ಒಂದೇ ಸ್ಥಳದಲ್ಲಿ ಶಾಶ್ವತ ಅಂಗಡಿ ಅಂಗಡಿ ಹಾಕಿದವರು ಹತ್ತಿರ ವಸೂಲಿ ಮಾಡಬಾರದು, ಪುಟ್ ಪಾತ್ ಅತಿಕ್ರಮಣ ಮಾಡಿದವರನ್ನು ನಾವು ಯಾವಾಗಲಾದರೂ ತೆರವು ಮಾಡಬಹುದು, ಮತ್ತೆ ಲೈಸನ್ಸ್ ನೀಡಿರುವದು ತಾತ್ಕಾಲಿಕ ಅಂಗಡಿ ಹಚ್ಚಿ ವ್ಯಾಪಾರ ಮಾಡಲಿಕ್ಕೆ, ಸಂಜೆಯಾದರೆ ತಗೆಯಬೇಕು, ಒಂದೇ ಕಡೆಗೆ ನಿಲ್ಲದೇ ಬೇರೆಬೇರೆ ಕಡೆ ವ್ಯಾಪಾರ ಮಾಡಲು ಹಾಗೂ ಪಿಎಂ ಸ್ವನಿಧಿ ಅಂತಹ ಸರ್ಕಾರಿ ಸೌಲಭ್ಯ ಪಡೆಯಲು ಈ ಬೀದಿ ಬದಿ ವ್ಯಾಪಾರಿ ಲೈಸನ್ಸ್ ನೀಡಿದ್ದು, ಶಾಶ್ವತವಾಗಿ ಒಂದೇ ಕಡೆಗೆ ಅಂಗಡಿ ಹಾಕಲು ಅಲ್ಲಾ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಸದಸ್ಯ ಅಜಿಮ್ ಪಟವೆಗರ ಅವರು, ಎಳೆನೀರು ಫಾಸ್ಟ್ ಪೂಡ್ ಅವರ ಹತ್ತಿರ ದಿನಕ್ಕೆ 100ರೂಪಾಯಿ ಬುಬಾಡಿಗೆ ತಗೆದುಕೊಳ್ಳುವದು ಅತಿಯಾಗಿದೆ ಅದನ್ನು ಕಡಿಮೆ ಮಾಡಬೇಕು, ಹಾಗಿದ್ದರೆ ಪಾಲಿಕೆಯಿಂದಲೇ ನಾವೇ ಅಂಗಡಿ ಹಾಕಿ ಕೊಟ್ಟು ಬಾಡಿಗೆ ತಗೆದುಕೊಂಡರಾಯಿತು, ಪಾಲಿಕೆಗೆ ಆದಾಯ ಆಗುತ್ತದೆ, ಜೊತೆಗೆ ಗುತ್ತಿಗೆದಾರ ಸರಿಯಾಗಿ ಗುತ್ತಿಗೆಯ ನಿಯಮಗಳನ್ನು ಪಾಲಿಸುವದಿಲ್ಲ, ಭೂಬಾಡಿಗೆ ದರವನ್ನು ಪರಿಷ್ಕರಣೆ ಮಾಡಿ, ನಿಯಮಬಾಹಿರವಾಗಿ ವಸೂಲಿ ಮಾಡಿದರೆ ಹೇಗೆ ಎಂದರು.
ಇದಕ್ಕೆ ಉತ್ತರಿಸಿದ ಉಪ ಮಹಾಪೌರ ಹನುಮಂತ ಕೊಂಗಾಲಿ ಅವರು, ನಗರದಲ್ಲಿ ಈಗ ಕೆಲವು ಕಡೆ (ನಾಲ್ಕು) ವ್ಯಾಪಾರಿ ವಲಯಗಳು ಆಗುವ ಪ್ರಕ್ರಿಯೆ ನಡೆದಿದ್ದು, ಗುತ್ತಿಗೆ ನಿಯಮದ ಪ್ರಕಾರ ವ್ಯಾಪಾರಿ ವಲಯದಲ್ಲಿಯ ವ್ಯಾಪಾರಿಗಳ ಕಡೆ ಭೂಬಾಡಿಗೆ ಪಡೆಯಬಾರದೆoಬ ನಿಯಮ ಇದ್ದು, ಗುತ್ತಿಗೆ ಹಣ ಹೆಚ್ಚು ಇದ್ದು, ಗುತ್ತಿಗೆದಾರನಿಗೆ ನಷ್ಟ ಆಗಬಾರದು ಎಂಬ ಆಧಾರದಲ್ಲಿ ದರವನ್ನು ಹೆಚ್ಚು ಮಾಡಲಾಗಿತ್ತು ಎಂದರು, ಆದರೆ ಹಿಂದಿನ ಅಧಿಕಾರಿಗಳು ಗುತ್ತಿಗೆದಾರನ ಪರವಾಗಿ ಗುತ್ತಿಗೆ ಅವಧಿ ವಿಸ್ತರಣೆ ಮಾಡಿದ್ದು ನಿಯಮಬಾಹಿರ, ಅದಕ್ಕೆ ಅವರೇ ಹೊಣೆಗಾರರು, ಭೂಬಾಡಿಗೆ ವಸೂಲಿಯಲ್ಲಿ ಸಮಸ್ಯೆಗಳು ಬಂದಿವೆ ಅದಕ್ಕಾಗಿ ನಾವು ಹೊಸ ಗುತ್ತಿಗೆ ಕರೆಯಲು ಅವಕಾಶವಿದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ನಾಯಕ ಸಂತೋಷ ಪೇಡನೇಕರ ಅವರು, ವ್ಯಾಪಾರಿ ವಲಯಗಳು ಇನ್ನೂ ಯಾವುದು ಆಗಿಲ್ಲ, ಅಲ್ಲಿ ಸರಿಯಾದ ಸ್ಥಳವಿಲ್ಲ, ಮೂಲ ಸೌಕರ್ಯಗಳಿಲ್ಲ, ಅಲ್ಲಿಯೂ ಕೂಡಾ ಭೂಬಾಡಿಗೆ ವಸೂಲಿ ಮಾಡುತ್ತಿದ್ದಾರೆ, ಅಧಿಕಾರಿಗಳು ವೆಂಡಿಂಗ್ ಜೋನ್ ಬಗ್ಗೆ ಮಾತನಾಡುವದೇ ಇಲ್ಲಾ, ಯಾವಾಗ ಶುರು ಆಗಿವೆ ಎಲ್ಲಿಗೆ ಬಂದಿವೆ, ಯಾವಾಗ ಮುಗಿಯುತ್ತೆ, ವೆಂಡಿಂಗ್ ಜೋನ್ ಇದ್ದರೂ ಗುತ್ತಿಗೆದಾರ ಅಲ್ಲಿ ಯಾಕೆ ಭೂಬಾಡಿಗೆ ಪಡೆಯುತ್ತಾನೆ ಎಂಬುದು ತಿಳಿಯದಾಗಿದೆ ಎಂದರು..
ಮಧ್ಯಪ್ರವೇಶಿಸಿ ಮಾತನಾಡಿದ ಮಹಾಪೌರ ಪ್ರೀತಿ ಕಾಮಕರ ಅವರು, ಭೂಬಾಡಿಗೆ ಸಂಗ್ರಹದ ಗುತ್ತಿಗೆಯಲ್ಲಿ ಅನೇಕ ಸಮಸ್ಯೆಗಳು ಕೇಳಿಬರುತ್ತಿವೆ, ಇದರಿಂದ ವ್ಯಾರಿಗಳಿಗೂ, ಅಧಿಕಾರಿಗಳಿಗೂ ತೊಂದರೆ ಆಗುತ್ತಿದ್ದು ನಿಯಮದ ಪ್ರಕಾರ ಹೊಸ ಗುತ್ತಿಗೆ ಕರೆಯುವ ಕೆಲಸ ಆಗಲಿ ಎಂದು ಕಂದಾಯ ಉಪ ಆಯುಕ್ತರಿಗೆ ಸೂಚಿಸಿದಾಗ, ಆಗ ಕಂದಾಯ ಉಪ ಆಯುಕ್ತ ಡಾ ಸಿದ್ದು ಹುಲ್ಲೋಳ್ಳಿ ಅವರು ಮಾತನಾಡಿ, ನನಗೆ ಸಧ್ಯಕ್ಕೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಾ, ಗುತ್ತಿಗೆದಾರ ಯಾರೂ ಅಂತಲೂ ನನಗೆ ಗೊತ್ತಿಲ್ಲ, ವೆಂಡಿಂಗ್ ಜೋನ್, ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ಇವೆಲ್ಲಾ ನೋಡಿಕೊಳ್ಳುವ ಆಡಳಿತ ಶಾಖೆಗೆ ಈ ಭೂಬಾಡಿಗೆ ವಿಷಯವನ್ನು ವಹಿಸಿಕೊಟ್ಟರೆ ಸರಿಯಾಗಿ ಇರುತ್ತದೆ ಎಂದು ತಿಳಿಸಿದರು.
ಕೊನೆಗೆ ಸಭೆಯ ಸಮ್ಮತಿಯಂತೆ ಬೀದಿ ಬದಿ ವ್ಯಾಪಾರಿಗಳ ಭೂ ಬಾಡಿಗೆಗಾಗಿ ಹತ್ತು ಪ್ರತೀಶತ ಹೆಚ್ಚು ಮಾಡಿ, ಹೊಸ ಭೂಬಾಡಿಗೆ ಗುತ್ತಿಗೆಯ ಟೆಂಡರ್ ಕರೆಯಬೇಕೆಂದು ಸಮಿತಿಯ ಅಧ್ಯಕ್ಷರಾದ ರೇಖಾ ಹೂಗಾರ ಅವರು ನಿರ್ಣಯ ಹೊರಡಿಸಿದರು. ಜೊತೆಗೆ ಬಾಪಾಟ್ ಗಲ್ಲಿ ಕಾರ ಪಾರ್ಕಿಂಗ ಟೆಂಡರ್ ಬೇಗ ಮುಗಿಸಬೇಕು, ಈ ಹಿಂದೆ ಪಾರ್ಕಿಂಗ ಟೆಂಡರಿನಲ್ಲಾದ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ನೀಡಬೇಕೆಂದು ನಿರ್ಣಯ ತಗೆದುಕೊಳ್ಳಲಾಯಿತು.

ಈ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರು, ಮಹಾಪೌರ, ಉಪಮಹಾಪೌ, ಆಡಳಿತ ಪಕ್ಷದ ನಾಯಕ, ಸಮಿತಿಯ ಸದಸ್ಯರು, ಉಪ ಆಯುಕ್ತರುಗಳು (ಕಂದಾಯ, ಅಭಿವೃದ್ಧಿ, ಆಡಳಿತ,) ಮುಖ್ಯ ಲೆಕ್ಕಧಿಕಾರಿಗಳು, ಕಾನೂನು ಸಲಹೆಗರಾರು, ನಗರ ಯೋಜನೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು, ಪರಿಷತ್ ಸಿಬ್ಬಂದಿ, ಪಾಲಿಕೆಯ ಇತರ ವಿಭಾಗಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಿ ಕೆ..