ಯಾವುದೇ ಆದೇಶ ಇಲ್ಲದೇ ಆರೋಗ್ಯ ವಿಭಾಗದಲ್ಲಿ 40 ಸಿಬ್ಬಂದಿಗಳ ನೇಮಕ..

ಯಾವುದೇ ಆದೇಶ ಇಲ್ಲದೇ ಆರೋಗ್ಯ ವಿಭಾಗದಲ್ಲಿ 40 ಸಿಬ್ಬಂದಿಗಳ ನೇಮಕ..

ಕಣ್ಮುಚ್ಚಿ ಕೆಲಸ ಮಾಡಿ ಪಾಲಿಕೆಯ ಹೆಸರು ಕೆಡಿಸುತ್ತಿದ್ದೀರಾ?

ಅಧಿಕಾರಿಗಳು ಸರ್ಕಾರದ ನಿಯಮ ಬಿಟ್ಟು ಸ್ವಂತ ನಿಯಮದಂತೆ ಕೆಲಸ ಮಾಡುತ್ತಿದ್ದೀರಾ?

ನಗರ ಸೇವಕ ರವಿ ದೋತ್ರೆ ಅಸಮಾಧಾನ..

ಬೆಳಗಾವಿ : ಪ್ರತಿ ತಿಂಗಳಿಗೆ 3 ಕೋಟಿ, 20ಲಕ್ಷ ವೆಚ್ಚ ಮಾಡಿ, ನೂರಾರು ಸಿಬ್ಬಂದಿಗಳು ಇದ್ದರೂ ಬೆಳಗಾವಿ ನಗರ ಸರಿಯಾಗಿ ಸ್ವಚ್ಛ ಆಗಿರುವದಿಲ್ಲ, ಇಂತಹದರಲ್ಲಿ ಯಾವುದೇ ಆದೇಶ ಇಲ್ಲದೇ ಸ್ವಚ್ಛತಾ ಮತ್ತು ಕಸ ವಿಲೇವಾರಿ ವಿಭಾಗದಲ್ಲಿ 40ಕಾರ್ಮಿಕರನ್ನು ಹೊಸದಾಗಿ ನೇಮಿಸಿಕೊಳ್ಳುವ ಅಧಿಕಾರವನ್ನು ತಮಗೆ ಯಾರು ನೀಡಿದ್ದಾರೆ? ಅವರಿಗೆ ವೇತನ ಹೇಗೆ ನೀಡುವದು? ಎಂದು ನಗರ ಸೇವಕ ರವಿ ದೋತ್ರೆ ಅವರು ಪಾಲಿಕೆಯ ಸ್ವಚ್ಛತಾ ಮತ್ತು ಕಸ ವಿಲೇವಾರಿ ವಿಭಾಗದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.

ಶನಿವಾರ ಪಾಲಿಕೆಯ ಸ್ಥಾಯಿ ಸಮಿತಿ ಸಭಾ ಭವನದಲ್ಲಿ, ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಂದಕುಮಾರ ಮೀರಜಕರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸಭೆಯಲ್ಲಿ ಸದಸ್ಯರಾದ ರವಿ ದೋತ್ರೆ ಅವರು ಮಾತನಾಡಿ, ಪಾಲಿಕೆಯ ಮಹಾಪೌರ, ಉಪ ಮಹಾಪೌರ, ಅಧ್ಯಕ್ಷರು ಯಾರ ಗಮನಕ್ಕೂ ತರದೇ, ಅಧಿಕಾರಿಗಳು 40 ಕಾರ್ಮಿಕರನ್ನು ಕೆಲಸಕ್ಕೆ ತಗೆದುಕಿಂಡಿದ್ದು, ಮುಂದೆ ಅವರ ವೇತನ ಯಾರು ನೀಡುವರು? ಅವರಿಗೆ ವೇತನ ಪಾವತಿ ಆಗದಿದ್ದರೆ, ಅವರೆಲ್ಲಾ ಪಾಲಿಕೆ ವಿರುದ್ಧ ಮಾತನಾಡುವರು, ಆಗ ಪಾಲಿಕೆಗೆ ಕೆಟ್ಟ ಹೆಸರು ಬರುವದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಪಾಲಿಕೆಗೆ ಕೆಟ್ಟ ಹೆಸರನ್ನು ತಂದರೆ ನಾವು ಸುಮ್ಮನಿರಬೇಕಾ ಎಂದು ದುರಾಡಳಿತ ನಡೆಸುವ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಆ ನಲ್ವತ್ತು ಕಾರ್ಮಿಕರು ಈಗ ನಾಲ್ಕು ತಿಂಗಳಿಂದ ದಕ್ಷಿಣದಲ್ಲಿ ಕೆಲಸ ಮಾಡುತ್ತಿದ್ದಾರೆ, ವೇತನ ಆಗಿಲ್ಲ, ಒಂದುವೇಳೆ ಕೆಲಸ ಮಾಡುವಾಗ ಏನಾದರೂ ಆದರೆ ಅದಕ್ಕೆ ಯಾರು ಹೊಣೆ? ಆಗ ಎಲ್ಲರೂ ಪಾಲಿಕೆಯನ್ನೇ ಜವಾಬ್ದಾರಿ ಮಾಡುವರು, ಅಧಿಕಾರಿಗಳು ಮಾಡುವ ತಪ್ಪಿಗೆ ಪಾಲಿಕೆ ಏಕೆ ಹೊಣೆಗಾರ ಆಗಬೇಕು ಎಂದರು, ಅಧಿಕಾರಿಗಳು ಸರ್ಕಾರದ ನಿಯಮ ಪಾಲನೆ ಮಾಡಲು ಇಲ್ಲಿ ಇರಿವಿರೋ ಅಥವಾ ಸ್ವಂತ ನಿಯಮ ಪಾಲನೆ ಮಾಡಲು ಇಲ್ಲಿ ಇರುವಿರೋ? ಅಧ್ಯಕ್ಷರೇ ಇಂತಹ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕಳುಹಿಸಿ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಧ್ವನಿಗೂಡಿಸಿದ ಮಹಾಪೌರಾರು, ವೇತನ ಆಗಿಲ್ಲ ಎಂದು ನಮ್ಮ ಬಳಿಯೂ ಕೆಲ ಕಾರ್ಮಿಕರು ಬಂದಿದ್ದರು, ಅದರ ಬಗ್ಗೆ ವಿವರಣೆ ನೀಡಿ ಎಂದಾಗ, ಸ್ವಚ್ಛತಾ ವಿಭಾಗದ ಸಿಂಬ್ಬಂದಿ ಪ್ರವೀಣ್ ಅವರು ಮಾತಾಡಿ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದಾಗ, ನಿಮಗೆ ಮಾಹಿತಿ ಇಲ್ಲಾ ಎಂದರೆ ಹೇಗೆ? ನನ್ನ ವಾರ್ಡಿನಲ್ಲಿಯೂ ಈ ಸಮಸ್ಯೆ ಇದೆ ಎಂದರು. ಉಪ ಮಹಾಪೌರಾರು ಮಾತನಾಡಿ ಇದರ ಬಗ್ಗೆ ಒಂದು ವರದಿ ನೀಡಿ, ಈ ನಲವತ್ತು ಕಾರ್ಮಿಕರನ್ನು ತಗೆದುಕೊಂಡಿದ್ದೆ ಆದರೆ ಯಾರು ನೇಮಕ ಮಾಡಿಕೊಂಡಿದ್ದರೋ ಅವರೇ ಅದರ ಜವಾಬ್ದಾರಿ ಹೊರಬೇಕು ಎಂದಿದ್ದಾರೆ.

ಇನ್ನು ಕಂದಾಯ ವಿಭಾಗದಲ್ಲಿ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಕಂದಾಯ ಅಧಿಕಾರಿ ಪ್ರಿಯಾಂಕಾ ಅವರು, ಇಲ್ಲಿವರೆಗೆ ಆಸ್ತಿ ತೆರಿಗೆ ಶೇಕಡಾ 49ರಷ್ಟು ಆಗಿದ್ದು, ಆರ್ಥಿಕ ವರ್ಷ ಶುರುವಾಗಿ ಈಗ ನಾಲ್ಕು ತಿಂಗಳಾಗಿದೆ, ಆದಷ್ಟು ಬೇಗ ಪೂರ್ತಿ ಮುಗಿಸುತ್ತೇವೆ ಎಂದಾಗ, ಕಂದಾಯ ವಿಭಾಗದ ಸಿಬ್ಬಂದಿಗಳು ಇನ್ನೂ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಿ, ತೆರಿಗೆ ಸಂಗ್ರಹ ಮಾಡಬೇಕು ಇದಕ್ಕಾಗಿ ಉಪ ಆಯುಕ್ತರು ಕಂದಾಯ ಇವರಿಗೆ ಲೆಕ್ಕ ಶಾಖೆಯಿಂದ ವರದಿ ಕೇಳಿ ಒಂದು ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೊನೆಯಲ್ಲಿ, ವಲಯ ಆಯುಕ್ತರ ಲಾಗಿನ್ ಚೆಕ್ ಮಾಡದೇ, ಪಾಲಿಕೆಗೆ ಆದಾಯ ಸಂಗ್ರಹದತ್ತ ಅಧಿಕಾರಿಗಳು ಗಮನ ಹರಿಸಲಿ ಎಂದು ನಗರ ಸೇವಕ ರವಿ ದೋತ್ರೆ ಅವರು ಹೇಳಿದ ಮಾತು ಹೊಂದಾಣಿಕೆಯ ಹೊದಿಕೆಯಂತಿತ್ತು..

ಈ ಅವಧಿಯ ಕೊನೆಯ ಈ ಸ್ಥಾಯಿ ಸಮಿತಿ ಸಭೆಯಲ್ಲಿ ಮಹಾಪೌರ, ಉಪ ಮಹಾಪೌರ, ಸಮಿತಿ ಅಧ್ಯಕ್ಷರು, ಸದಸ್ಯರು, ಪರಿಷತ್ ಕಾರ್ಯದರ್ಶಿ, ಉಪ ಆಯುಕ್ತ ಅಭಿವೃದ್ಧಿ, ಆಡಳಿತ, ಮುಖ್ಯ ಲೆಕ್ಕಾಧಿಕಾರಿ, ಕಾನೂನು ಸಲಹೆಗಾರ, ನಗರ ಯೋಜನಾಧಿಕಾರಿ, ಆರೋಗ್ಯಧಿಕಾರಿ, ಕಂದಾಯ ಅಧಿಕಾರಿ, ವಲಯ ಆಯುಕ್ತರು ಹಾಗೂ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *