ಬೆಳಗಾವಿ ನಗರದಲ್ಲಿ ಡೆಂಗಿ ವಿರೋಧಿ ಮಾಸಾಚರಣೆಗೆ ಚಾಲನೆ..
ಲಾರ್ವಾ ಸಮೀಕ್ಷೆ ಹಾಗೂ ಜಾಗೃತಿ ಜಾತಾಗೆ ಮಹಾಪೌರರಿಂದ ಸೂಚನೆ..
ತಮ್ಮ ಸುತ್ತಮುತ್ತಲಿನ ಪರಿಸರದ ಸುಚಿತ್ವಕ್ಕೆ ಆದ್ಯತೆ ನೀಡಿ..
ಮೇಯರ ಪ್ರೀತಿ ವಿ ಕಾಮಕರ..
ಬೆಳಗಾವಿ : ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ, ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ‘ಡೆಂಗಿ ವಿರೋಧಿ ಮಾಸಾಚರಣೆ’ಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಹಾಪೌರ ಪ್ರೀತಿ ವಿನಾಯಕ ಕಾಮಕರ ಅವರು, “ಮಳೆಗಾಲದಲ್ಲಿ ಸೊಳ್ಳೆಗಳಿಂದ ಬರುವ ರೋಗಗಳ ಭೀತಿ ಹೆಚ್ಚಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಯಾವುದೇ ರೋಗಗಳು ಹರಡುವುದಿಲ್ಲ ಎಂದರು.
ಡೆಂಗಿ ರೋಗವು ಸೊಳ್ಳೆ ಕಚ್ಚುವುದರಿಂದಲೇ ಪ್ರಸಾರವಾಗುವುದರಿಂದ, ಸೊಳ್ಳೆಗಳ ನಿಯಂತ್ರಣ ಮತ್ತು ಉತ್ಪತ್ತಿ ತಾಣಗಳ ನಾಶ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯ ಮಾರ್ಗದರ್ಶನ ಪಾಲಿಸಿ, ಇಲಾಖೆಯೊಂದಿಗೆ ಸಹಕರಿಸಬೇಕು” ಎಂದು ಕರೆ ನೀಡಿದರು.

ಇದೇ ವೇಳೆ ಕೆ.ಎಲ್.ಇ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಆಯೋಜಿಸಿದ್ದ ಜಾಗೃತಿ ಜಾತಾಗೆ ಚಾಲನೆ ನೀಡಿದ ನಗರದಾದ್ಯಂತ ತೀವ್ರವಾಗಿ ಲಾರ್ವಾ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿದರು.
ನಗರದಲ್ಲಿ ಪ್ರಸ್ತುತ ರೋಗಗಳ ಪರಿಸ್ಥಿತಿ:
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಗದೀಶ ಜಿಂಗಿ ಅವರು, “ಬೆಳಗಾವಿ ನಗರದಲ್ಲಿ ಪ್ರಸ್ತುತ 1 ಮಲೇರಿಯಾ, 6 ಡೆಂಗಿ ಹಾಗೂ 4 ಚಿಕ್ಕನ್ಗುನ್ಯಾ ಪ್ರಕರಣಗಳು ವರದಿಯಾಗಿವೆ. ರೋಗಗಳ ತೀವ್ರ ನಿಯಂತ್ರಣಕ್ಕಾಗಿ ಇಲಾಖೆ ಹಾಗೂ ತಾಲೂಕು ಸಿಬ್ಬಂದಿ ನಿರಂತರವಾಗಿ ನಗರದಲ್ಲಿ ಲಾರ್ವಾ ಮತ್ತು ಜ್ವರ ಸಮೀಕ್ಷೆಗಳನ್ನು ನಡೆಸುತ್ತಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ” ಎಂದು ಮಾಹಿತಿ ನೀಡಿದರು.

ಬೃಹತ್ ಲಾರ್ವಾ ಸಮೀಕ್ಷೆ:
ಸಭಾ ಕಾರ್ಯಕ್ರಮದ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ, ಕೆ.ಎಲ್.ಇ. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡಗಳು ನಗರದ ವಿವಿಧ ಬಡಾವಣೆಗಳಲ್ಲಿ ಮನೆ-ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಕಾರ್ಯವನ್ನು ನಡೆಸಿದವು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರಪ್ಪಾ ಪಿ. ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜೀವ ನಾಂದ್ರೆ, ವಲಯ ಕೀಟಶಾಸ್ತ್ರಜ್ಞರಾದ ಗಣಪತಿ ಬಾರ್ಕಿ, ಆರೋಗ್ಯ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿ, ಕೆ.ಎಲ್.ಇ. ನರ್ಸಿಂಗ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ನಗರದ ಆಶಾ ಕಾರ್ಯಕರ್ತರು ಸೇರಿದಂತೆ ಹಲವರು ಇದ್ದರು.