ರಾಜ್ಯೋತ್ಸವಕ್ಕೆ ನೀಡಿರುವ 50 ಲಕ್ಷ ಅನುದಾನ ಸದ್ಭಳಕೆ ಆಗಲಿ..

ರಾಜ್ಯೋತ್ಸವಕ್ಕೆ ನೀಡಿರುವ 50 ಲಕ್ಷ ಅನುದಾನ ಸದ್ಭಳಕೆ ಆಗಲಿ..

ಕನ್ನಡ ಭವನವನ್ನು ಜಿಲ್ಲಾಧಿಕಾರಿಗಳ ಸಮಿತಿಯ ವಶಕ್ಕೆ ಪಡೆಯಲು ಗಡುವು..

ಬೆಳಗಾವಿ ಕನ್ನಡಪರ ಸಂಘಟನೆಗಳ ನಿರ್ಣಯ…

ಬೆಳಗಾವಿ : ಎಪ್ಪತ್ತು ವರ್ಷದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ
ಬೆಳಗಾವಿಯ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ 50 ಲಕ್ಷ ರೂ ಹಣ ಸದ್ವಿನಿಯೋಗ ಆಗಬೇಕು ಮತ್ತು ರಾಜ್ಯ ಸರಕಾರದಿಂದ ಏಳು ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯ ನೆಹರು ನಗರದಲ್ಲಿ ನಿರ್ಮಿಸಲಾದ ಕನ್ನಡ ಭವನದ ನಿರ್ವಹಣೆಯನ್ನು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ನಿರ್ವಹಣೆ ಸಮಿತಿಯು ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕು, ಅದಕ್ಕೆ ಬರುವ ಡಿಸೇಂಬರ್ 8 ರ ಗಡುವು ನೀಡಿರುತ್ತೇವೆ ಎಂದು
ಶುಕ್ರವಾರ ಸಂಜೆ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ವಹಿಸಿದ್ದರು,
ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಕಳೆದ ಅಕ್ಟೊಬರ್ 8 ರಂದು ಬೆಂಗಳೂರಿನಲ್ಲಿ ಬೆಳಗಾವಿ ಕನ್ನಡ ಸಂಘಟನೆಗಳ ಜೊತೆಗೆ ನಡೆಸಿದ ಸಭೆಯ ಪರಿಣಾಮವಾಗಿ 50 ಲಕ್ಷ ರು. ಬಿಡುಗಡೆಯಾಗಿದೆ. ಈ ಅನುದಾನದ ಬಳಕೆಯ ಬಗ್ಗೆ ಕನ್ನಡ ಸಂಘಟನೆಗಳ ಸಭೆ ಕರೆಯಬೇಕೆಂದು ನವೆಂಬರ್ 4 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಸಭೆ ಕರೆಯಲಾಗಿಲ್ಲ. ಈ ಕೂಡಲೇ ಸಭೆ ಕರೆದು ಚರ್ಚಿಸಿ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಭೆಯಲ್ಲಿ ಕನ್ನಡ ಸಂಘಟನೆಗಳ ಪ್ರಮುಖರು ಆಗ್ರಹಿಸಿದರು.

ಇನ್ನು ಕನ್ನಡ ಭವನವನ್ನು ಖಾಸಗಿ ಸಂಘದಿಂದ ವಶಕ್ಕೆ ತೆಗೆದುಕೊಳ್ಳಲು ರಾಜ್ಯ ಸರಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಳೆದ ಜೂನ್ 24 ರಂದು ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ನಿರ್ವಹಣೆ ಸಮಿತಿಯನ್ನು ರಚಿಸಿದ್ದಾರೆ ಆದರೆ ಐದು ತಿಂಗಳಾದರೂ ಕನ್ನಡ ಭವನವು ಜಿಲ್ಲಾಧಿಕಾರಿಗಳ ಸಮಿತಿಯ ವಶಕ್ಕೆ ಬಂದಿಲ್ಲ. ರಾಜ್ಯ ವಿಧಾನ ಮಂಡಲ ಅಧಿವೇಶನವು ಬೆಳಗಾವಿಯಲ್ಲಿ ಆರಂಭವಾಗುವ ಮೊದಲು ಕನ್ನಡ ಭವನ ಜಿಲ್ಲಾಧಿಕಾರಿಗಳ ಸಮಿತಿ ವಶಕ್ಕೆ ಬರಬೇಕು ಜೊತೆಗೆ ಕಡಿಮೆ ಬಾಡಿಗೆಯಲ್ಲಿ ಕನ್ನಡ ಸಂಘಟನೆಗಳಿಗೆ ಸಿಗಬೇಕು. ಇಲ್ಲವಾದರೆ ಅಧಿವೇಶನ ಕಾಲಕ್ಕೆ ಕನ್ನಡ ಸಂಘಟನೆಗಳು ತಮ್ಮದೇ ದಾರಿಯಲ್ಲಿ ಉಗ್ರವಾದ ಹೋರಾಟದ ಹಾದಿಯನ್ನು ಹಿಡಿಯುವದು ಅನಿವಾರ್ಯವಾಗುತ್ರದೆ ಎಂದು
ಸಭೆಯು ಎಚ್ಚರಿಕೆ ನೀಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ( ಶಿವರಾಮೇಗೌಡ ಬಣ ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಕನ್ನಡ ಜಾಗ್ರತಿ ಸಮಿತಿಯ ಸದಸ್ಯರಾದ ರಾಜಶೇಖರ ತಳವಾರ, ಕಸ್ತೂರಿ ಭಾವಿ, ಗಡಿ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೆನಟ್ಟಿ, ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸಭೆಯಲ್ಲಿ ಮಾತನಾಡಿದರು.