ಜಿಲ್ಲಾ ಡಯಟ್ ನಲ್ಲಿ ಶಿಕ್ಷಕರಿಗೆ ಕಾರ್ಯಗಾರ..
ಪೋಕ್ಸೋ ಕಾಯ್ದೆಯ ಅರಿವು ಮತ್ತು ಮಕ್ಕಳಲ್ಲಿ ಜಾಗೃತಿ ಶಿಕ್ಷಕರ ಹೊಣೆಯಾಗಿದೆ..
ಪಿಎಸ್ಐ ರುಕ್ಮಿಣಿ ಹೆಚ್ ಅಭಿಮತ.
ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪ್ರಾಪ್ತರ ಅಪಹರಣ, ಸೈಬರ್ ಕ್ರೈಂ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಮಕ್ಕಳಿಗೆ ಅವುಗಳ ರಕ್ಷಣಾ ಕುರಿತಾದ ಕಾರ್ಯತಂತ್ರಗಳನ್ನು ಹೇಳಿಕೊಡಬೇಕಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದರ ಮೂಲಕ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಮಕ್ಕಳಿಗೆ ವಿಶ್ವಾಸ ಮತ್ತು ಬೆಂಬಲ ನೀಡುವುದರ ಜೊತೆಗೆ ದೌರ್ಜನ್ಯಕ್ಕೆ ತ್ವರಿತ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು,
ಅದಕ್ಕಾಗಿ ಅರಿವು ಮೂಡಿಸಲು ಪೋಕ್ಸೋ ಕಾಯ್ದೆಯ ಕುರಿತಾದ ಮಾಹಿತಿಯನ್ನು ಮಕ್ಕಳಿಗೆ ನೀಡಬೇಕೆಂದು ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ಐ ರುಕ್ಮಿಣಿ ಎಚ್ ತಿಳಿಸಿದ್ದಾರೆ.
ಮಂಗಳವಾರ ದಿ 30 ರಂದು ಬೆಳಗಾವಿಯ ಮಣ್ಣೂರ ಜಿಲ್ಲಾ ಡಯಟ್ ತರಬೇತಿ ಕೇಂದ್ರದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಹಮ್ಮಿಕೊಳ್ಳಲಾದ ಐದು ದಿನಗಳ ತರಬೇತಿಯಲ್ಲಿ’ ಪೋಕ್ಸೋ ಕಾಯ್ದೆ ಮತ್ತು ಮಕ್ಕಳಿಗೆ ಅದರ ಅರಿವು ‘ ಕುರಿತಾಗಿ ಮಾತನಾಡಿದ ಅವರು
ಪ್ರತಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಇರಬೇಕು. ಮಗುವಿನ ಚಲನವಲನ, ಅಸಹಜ ನಡಾವಳಿಗಳ ಕುರಿತಾಗಿ ಲಕ್ಷ್ಯ ವಹಿಸಬೇಕು. ಶಿಕ್ಷಕ, ವೈದ್ಯ, ಪಾಲಕರು, ಪೊಲೀಸ್ ಇವೆಲ್ಲವೂ ಕೊಂಡಿಯಾಗಿ ವರ್ತಿಸಿದಾಗ ಮಾತ್ರ ಮಕ್ಕಳ ಸಂರಕ್ಷಣೆ ಸಾಧ್ಯ ಎಂದ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ನೈಜತೆ ವಿವರಿಸಿದರು.
ಮಕ್ಕಳಿಗೆ ಸಹಾಯವಾಣಿಗಳಾದ 1098 ಮತ್ತು112 ಗಳನ್ನು ಬಳಸಲು ಮತ್ತು ತಮ್ಮ ಸುರಕ್ಷತೆಗಾಗಿ ಕೆಲವು ಅವಶ್ಯಕ ಅರಿವು ಮೂಡಿಸುವ ಅಂಶಗಳನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾಯ್ದೆಯ ಕುರಿತಾದ ಮಾಹಿತಿ ಶಿಕ್ಷಕರಿಗೆ ಇರಬೇಕಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಮಲ್ಲೇಶ್ ಕುಂದರಗಿ ಮಾತನಾಡಿ ಮಕ್ಕಳ ಹಕ್ಕುಗಳು ಮತ್ತು ಕಾಯ್ದೆಯ ಕುರಿತಾಗಿ ತಿಳಿಸಿದರು.
ಕಾರ್ಯಗಾರದಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 120ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಆರಂಭದಲ್ಲಿ ಕಾರ್ಯಾಗಾರ ನೋಡಲ್ ಅಧಿಕಾರಿ ಎಂ ಎಚ್ ಭಂಡಾರಿ ಸ್ವಾಗತಿಸಿದರು. ಸವಿತಾ ತಿಗಡಿ ನಿರೂಪಿಸಿದರು ಬಿ ಎಂ ಬಡಿಗೇರ ವಂದಿಸಿದರು.