ಬೆಳಗಾವಿ ಪಾಲಿಕೆಯ 2026-27 ಬಜೆಟ್ ಮಂಡನೆ..

ಬೆಳಗಾವಿ ಪಾಲಿಕೆಯ 2026-27 ಬಜೆಟ್ ಮಂಡನೆ..

92.32 ಲಕ್ಷ ರೂ ಉಳಿತಾಯದ ಬಜೆಟ್ ಮಂಡಿಸಿದ ಬೆಳಗಾವಿ ಪಾಲಿಕೆ..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ 2026-27ನೇ ಸಾಲಿಗೆ ಒಟ್ಟು 442.54 ಕೋಟಿ ರೂ.ಗಳ ಆದಾಯ ಹಾಗೂ 441.62 ಕೋಟಿ ರೂ.ಗಳನ್ನು ವೆಚ್ಚವನ್ನು ನಿರೀಕ್ಷಿಸಲಾಗಿದ್ದು, 92.32 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ.

ಇಲ್ಲಿನ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮೇಯರ್ ಮಂಗೇಶ ಪವಾರ ಅವರು ಅಧ್ಯಕ್ಷತೆಯಲ್ಲಿ ಬುಧವಾರ ದಿನಾಂಕ 25/02/2026ರಂದು ಜರುಗಿದ ವಿಶೆಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಖಾ ಹೂಗಾರ ಅವರು ಬಜೆಟ್ ಮಂಡನೆ ಮಾಡಿದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಒಳಪಡುವ ಆಸ್ತಿಗಳಿಂದ ಸಂಗ್ರಹಿಸುವ ಆಸ್ತಿ ತೆರಿಗೆಯಿಂದ ಅಂದಾಜು 85 ಕೋಟಿ ರೂ. ಆದಾಯದ ನಿರೀಕ್ಷೆ ಇದ್ದು, ಅದಕ್ಕಾಗಿ ವಿಶೇಷ ಅಭಿಯಾನ ಆಯೋಜಿಸಿ ಸರಕಾರದ ಮಾರ್ಗಸೂಚಿಗಳನ್ವಯ ತೆರಿಗೆ ಸಂಗ್ರಹಿಸಿ, ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಿದೆ. ಇದೇ ರೀತಿ ಆಸ್ತಿಗಳ ವರ್ಗಾವಣೆ ಶುಲ್ಕ, ದಂಡಗಳಿಂದ 7.55 ಕೋಟಿ ರೂ. ಕಟ್ಟಡ ಪರವಾನಿಗೆ, ಅಭಿವೃದ್ಧಿ ಹಾಗೂ ಸುಧಾರಣೆ ಶುಲ್ಕದಿಂದ 9.90 ಕೋಟಿ ರೂ. ಪಾಲಿಕೆಯ ಖುಲ್ಲಾ ಜಾಗಗಳ ಮಾರಾಟದಿಂದ 11 ಕೋಟಿ ರೂ., ರಾಜ್ಯ ಸರಕಾರದ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ 3.22 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಶಕ್ತಿ ಅನುದಾನದಿಂದ 62.64 ಕೋಟಿ ರೂ., ಆದಾಯದ ನಿರೀಕ್ಷೆ ಇದ್ದು, ಈ ಅನುದಾನವನ್ನು ಬೀದಿ ದೀಪ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಭರಿಸಲು ಬಳಕೆ ಮಾಡಲಾಗುವುದು ಎಂದು ವಿವರಿಸಿದರು.

ಘನತ್ಯಾಜ್ಯ ನಿರ್ವಹಣೆಯಿಂದ ಸಂಗ್ರಹಿಸುವ ಮೊತ್ತದಿಂದ 9.75 ಕೋಟಿ ರೂ. ಉದ್ದಿಮೆ ಪರವಾನಿಗೆಗಳಿಂದ 4 ಕೋಟಿ. ರೂ., ಹೊಸದಾಗಿ ಯುಜಿಡಿ ಅಳವಡಿಕೆಯಿಂದ 5 ಕೋಟಿ ರೂ., 16ನೇ ಹಣಕಾಸು ಆಯೋಗದಿಂದ 21 ಕೋಟಿ ರೂ. ಅನುದಾನ ನಿರೀಕ್ಷಿಸಿದ್ದು, ಅವಶೇಷ ನಿರ್ಮೂಲನೆಗಳಿಂದ 1.69 ಕೋಟಿ ರೂ., ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗೆತದ ಶುಲ್ಕದಿಂದ 1.50 ಕೋಟಿ ರೂ., ಸ್ಥಿರಾಸ್ತಿಗಳ ನೋಂದಣಿಯಿಂದ ಅದಿಭಾರ ಶುಲ್ಕದಿಂದ 1.30 ಕೋಟಿ ರೂ., ಅಂದಾಜು ಆದಾಯದ ವಿಶ್ವಾಸ ವ್ಯಕ್ತಪಡಿಸಿದರು.

ಪೌರಕಾರ್ಮಿಕರ ಉಪಹಾರಕ್ಕಾಗಿ 2 ಕೋಟಿ ರೂ., ಹೊರಗುತ್ತಿಗೆ ಸ್ವಚ್ಛತಾ ವೆಚ್ಚಕ್ಕಾಗಿ 38.25 ಕೋಟಿ ರೂ. ನೇರ ನೇಮಕಾತಿ ಹೊಂದಿದ ಪೌರಕಾರ್ಮಿಕರ ವೇತನಕ್ಕಾಗಿ 11.00 ಕೋಟಿ ರೂ., ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ 4 ಕೋಟಿ ರೂ., ಬೀದಿ ದೀಪಗಳ ನಿರ್ವಹಣೆಗಾಗಿ 50 ಲಕ್ಷ ರೂ., ರಸ್ತೆ , ಚರಂಡಿ, ಪಾದಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು 6.95 ಕೋಟಿ ರೂ. ನಿಗದಿಪಡಿಸಲಾಗಿದೆ.

14, 43 ಲಕ್ಷ ರೂ. ಕ್ರೀಡೆಗಳಿಗಾಗಿ, 1 ಕೋಟಿ ರೂ. ಸ್ಮಶಾನಗಳ ಅಭಿವೃದ್ಧಿಗೆ, 25 ಲಕ್ಷ ರೂ., ತೆರೆದ ಬಾವಿಗಳ ಸ್ವಚ್ಛತೆಗೆ, ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ 5 ಕೋಟಿ ರೂ. ಅನ್ನು ವಂತಿಕೆಯಾಗಿ ನೀಡಲಾಗುವುದು ಎಂದರು.

ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ನಗರ ಸೇವಕರು, ಪಾಲಿಕೆ ಆಯುಕ್ತರಾದ ಎಂ. ಕಾರ್ತಿಕ್, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಬೀಳಗಿಕರ, ಆಡಳಿತ ಉಪ ಆಯುಕ್ತರಾದ ಉದಯಕುಮಾರ ತಳವಾರ, ಕಂದಾಯ ಉಪ ಆಯುಕ್ತರಾದ ಸಿದ್ದು ಹುಲ್ಲೋಳ್ಳಿ, ಅಭಿವೃದ್ಧಿ ಉಪ ಆಯುಕ್ತೆ ಲಕ್ಷ್ಮಿ ನಿಪ್ಪಾಣಿಕರ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *