ಪೌರ ಕಾರ್ಮಿಕರಿಗೆ ಗುಣಮಟ್ಟದ ಉಪಹಾರ ನೀಡದಿದ್ದರೆ ಗುತ್ತಿಗೆ ರದ್ದು..
ಮಂಗಳವಾರದಿಂದ ಪ್ಲಾಸ್ಟಿಕ್ ಡಬ್ಬದಲ್ಲಿ ಉಪಹಾರ ಬಂದರೆ ಅಧಿಕಾರಿಗಳೂ ಸೇವಿಸಬೇಕು..
ಸಂತೋಷ್ ಪೇಡನೇಕರ, ಪಾಲಿಕೆಯ ಆಡಳಿತ ಪಕ್ಷದ ನಾಯಕ..
ಬೆಳಗಾವಿ : ಪ್ರತಿದಿನ ಬೆಳಿಗ್ಗೆ ಎದ್ದು ನಗರ ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೆ ಸುಚಿಯಾದ ಉಪಹಾರ ನೀಡಬೇಕು ಅದರ ಬದಲಾಗಿ ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ ತಂದು ಇಡುತ್ತಾರೆ, ಇದರ ಬಗ್ಗೆ ಎಷ್ಟೇ ಹೇಳಿದರೂ ಕೇಳುತ್ತಿಲ್ಲ, ಉಪಹಾರ ಪೂರೈಸುವ ಗುತ್ತಿಗೆ ಪಡೆದ ತುಮಕೂರು ತಟ್ಟೆ ಇಡ್ಲಿ ಅವರು ಮಂಗಳವಾರದಿಂದ ಗುಣಮಟ್ಟದ ಉಪಹಾರ ನೀಡದಿದ್ದರೆ ಅವರ ಗುತ್ತಿಗೆ ರದ್ದು ಮಾಡಬೇಕಾಗುತ್ತದೆ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಸಂತೋಷ ಪೇಡನೇಕರ ಖಡಕ್ಕಾಗಿ ಹೇಳಿದ್ದಾರೆ.
ಶುಕ್ರವಾರ ಸ್ಥಾಯಿ ಸಮಿತಿ ಸಭೆಯ ಸಭಾ ಭವನದಲ್ಲಿ ನಡೆದ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಾರಂಭ ಅದಾಗಿನಿಂದಲೂ ನೋಡುತ್ತಿದ್ದೇವೆ ಪೌರ ಕಾರ್ಮಿಕರಿಗೆ ಗುಣಮಟ್ಟದ ಉಪಹಾರ ನೀಡುತ್ತಿಲ್ಲ, ಕೆಲ ಪೌರ ಕಾರ್ಮಿಕರು ಮನೆಯಿಂದ ಊಟದ ಡಬ್ಬಿ ತರುತ್ತಾರೆ, ಗುತ್ತಿಗೆ ಪಡೆದವರು ಪ್ಲಾಸ್ಟಿಕ್ ಡಬ್ಬಿಯಲ್ಲಿ ಉಪಹಾರ ಪೂರೈಕೆ ಮಾಡುತ್ತಾರೆ, ಮಂಗಳವಾರ ಸ್ಟಿಲ್ ಡಬ್ಬದಲ್ಲಿ ವ್ಯವಸ್ಥಿತವಾಗಿ ನೀಡಬೇಕು, ಒಂದು ವೇಳೆ ಮತ್ತೆ ಪ್ಲಾಸ್ಟಿಕ್ ಡಬ್ಬದಲ್ಲಿಯೇ ಬಂದರೆ ಆಯುಕ್ತರ ಆದಿಯಾಗಿ ಪಾಲಿಕೆಯ ಎಲ್ಲಾ ಅಧಿಕಾರಿಗಳು ಆ ಉಪಹಾರ ಸೇವಿಸಬೇಕು ಎಂದು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಮಹಾಪೌರರಾದ ಪ್ರೀತಿ ಕಾಮಕರ ಅವರು, ಪ್ರತಿದಿನ ನೀವು ಅನ್ನದಿಂದ ಮಾಡಿದ ಉಪಹಾರವನ್ನೇ ನೀಡಿದರೆ ಪೌರ ಕಾರ್ಮಿಕರು ಹೇಗೆ ಸೇವಿಸುತ್ತಾರೆ? ನಿಯಮ ಪ್ರಕಾರ ಪ್ರತಿ ದಿನ ಬೇರೆ ಬೇರೆಯಾದ ಉಪಹಾರ ನೀಡದೇ ಕೇವಲ ಅನ್ನದಿಂದ ಮಾಡಿದ ಉಪಹಾರ ನೀಡುವದು ತಪ್ಪು ಎಂದರು, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಥೋಡ್ ಅವರು ಮಂಗಳವಾರದಿಂದ ಸ್ಟೀಲ್ ಡಬ್ಬದಲ್ಲಿ ವ್ಯವಸ್ಥಿತವಾಗಿ ಗುಣಮಟ್ಟದ ಆಹಾರ ಪೂರೈಸದಿದ್ದರೆ ಅವರ ಗುತ್ತಿಗೆ ರದ್ದು ಮಾಡಬೇಕಾಗುತ್ತದೆ ಎಂದು ಆದೇಶ ಮಾಡಿದರು.
ವಾರ್ಡ ಸಂಖ್ಯೆ 23ರ ನಗರ ಸೇವಕ ಜಯವಂತ ಜಾಧವ ಅವರು ಸಭೆಗೆ ಪತ್ರಮುಖೇನ ದೂರು ನೀಡಿದ್ದು ತಮ್ಮ ವಾರ್ಡಿನ ಕೆಲ ಪ್ರದೇಶಗಳಿಗೆ ಕಸ ಸಂಗ್ರಹಣಾ ವಾಹನ ಸರಿಯಾಗಿ ಬರುವದಿಲ್ಲ, ಸಂಬಂಧಪಟ್ಟ ಅಧುಕಾರಿಗಳು ಈ ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದ್ದರು, ಅದಕ್ಕೆ ಸ್ವಚ್ಛತಾ ವಿಭಾಗದ ಅಭಿಯಂತರ ಪ್ರವೀಣ ಅವರು ಉತ್ತರಿಸಿ, ಕೆಲ ವಾಹನಗಳ ಕೊರತೆ ಇದೆ ಎಂದಾಗ, ಸಂತೋಷ್ ಪೇಡನೇಕರ ಮಾತನಾಡಿ, ಟೆಂಡರ್ ಹಾಕುವಾಗ ನಿಮಗೆ ತಿಳಿಯಲಿಲ್ಲವೇ? ವಾಹನಗಳ ಬೇಡಿಕೆ ಇದೆ ಎಂದು ಆರೋಗ್ಯ ನೀರಿಕ್ಷಕರು ಯಾಕೆ ಹೇಳುವದಿಲ್ಲ? ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ವಿಭಾಗದ ಮುಖ್ಯಾಧಿಕಾರಿಯಾದ ಹನಮಂತ ಕಲಾದಗಿ ಅವರು, ರಾಮತೀರ್ಥ ನಗರದಂತಹ ದೊಡ್ಡ ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ ಬಂದದ್ದು ಒಂದು ಕಾರಣವಿದ್ದು, ಇನ್ನೆರಡು ವಾರಗಳಲ್ಲಿ 12 ಹೊಸ ವಾಹನಗಳು ಬರುತ್ತವೆ ಆಗ ಸನಸ್ಯೆ ನಿವಾರಣೆ ಆಗುತ್ತದೆ ಎಂದಾಗ, ಮೇಯರ ಪ್ರೀತಿ ಕಾಮಕರ ಅವರು ಕೂಡಾ ನಮ್ಮ ವಾರ್ಡಿನ ಕೆಲ ಗಲ್ಲಿಗಳಲ್ಲಿ ಕಸ ಸಂಗ್ರಹಣಾ ವಾಹನ ಬರುವದಿಲ್ಲ, ಜನತೆ ದೂರುತ್ತಿದ್ದಾರೆ ಆ ಸನಸ್ಯೆಯನ್ನು ಬಗೆಹರಿಸಿ ಎಂದರು.

ನಗರ ಸೇವಕ ನೀತಿನ ಜಾಧವ ಅವರು ಮಾತನಾಡಿ ಮರಣ ಪ್ರಮಾಣ ಪತ್ರ ನೀಡುವಲ್ಲಿ ರೇಷನ್ ಕಾರ್ಡ್ ಮಾಹಿತಿ ಪಡೆಯುವ ಹೊಸ ನಿಯಮ ಬಂದಿದ್ದು ಅದು ಆದಷ್ಟು ಬೇಗ ಬದಲಾಗಿ ಮೊದಲಿನಂತೆ ಆಗಬೇಕು ಅದೇರೀತಿ ನಮ್ಮ ವಾರ್ಡಿನಲ್ಲಿ ಉದ್ಯಾನವನಗಳ ಸ್ವಚ್ಛತೆಯ ಕಾರ್ಯ ಸರಿಯಾಗಿ ಆಗುತ್ತಿಲ್ಲ, ಹೀಗೆ ಮುಂದುವರೆದರೆ ಉದ್ಯಾನವನ ನಿರ್ವಹಣಾ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಿ ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು..
ಸಮಿತಿಯ ಸದಸ್ಯರಾದ ಬಾಬಾಜಾನ ಮತವಾಲೆ ಹಾಗೂ ಶಾಹಿದ್ ಪಠಾಣ ಮಾತನಾಡಿ, ಕಸದ ವಾಹನಗಳ ಸ್ವಚ್ಛತಾ ಕಾರ್ಯ ನಿಂತುಹೋಗಿದೆ ಆದಷ್ಟು ಬೇಗ ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕು ಎಂದು ವಾಹನ ನಿರ್ವಹಣಾ ಸಿಬ್ಬಂದಿಗೆ ಸೂಚಿಸಿದ್ದು, ಈಗಿನ ಗುತ್ತಿಗೆಗಿಂತ ಮೊದಲು ಇದ್ದ ಗುತ್ತಿಗೆಯವರು ನಗರವನ್ನು ಸ್ವಚ್ಛ ಇಡುತ್ತಿದ್ದರು, ಕಸದ ವಾಹನ ಚಾಲಕರು ಕೂಡಾ ಸರಿಯಾಗಿ ಸ್ಪಂದನೆ ನೀಡುವದಿಲ್ಲ, ಒಂದೊಂದು ಸಲ ಡೀಸೆಲೇ ಇಲ್ಲಾ ಎಂಬ ಕಾರಣ ನೀಡುತ್ತಾರೆ ಎಂದು ದೂರಿದರು.
ಆದರೂ ಕೂಡಾ ಇಂದು ನಡೆದ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲಿಕೆಗೆ ಬಾಡಿಗೆ ವಾಹನಗಳ ಪೂರೈಕೆ, 24.10 ಯೋಜನೆಯಡಿ ಕ್ರೀಡಾಪಟುಗಳಿಗೆ ಸಹಾಯಧನ ಮಂಜೂರು, ವಿಶೇಷಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ಪೂರೈಕೆ ಮುಂತಾದ ವಿಷಯಗಳನ್ನು ದೃಡೀಕರಿಸಲಾಯಿತು.
ವರದಿ ಪ್ರಕಾಶ್ ಬಿ ಕೆ..