ಮಹತ್ವದ ಬೇಡಿಕೆಗಳಿಗಾಗಿ ಕನ್ನಡ ಸಂಘಟನೆಗಳ ಬಿಗಿಪಟ್ಟು..
ಏಪ್ರಿಲ್ ಎರಡನೇ ವಾರ 12 ಕನ್ನಡ
ಸಂಘಟನೆಗಳ ನಿಯೋಗ ಬೆಂಗಳೂರಿಗೆ..
ಮುಖ್ಯಮಂತ್ರಿ, ಗಡಿ ಉಸ್ತುವಾರಿ ಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯ ಬೇಟಿ..
ಬೆಳಗಾವಿ : ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಸಭೆ ಸೋಮವಾರ ಮುಂಜಾನೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಬೆಳಗಾವಿಯ ಮಹಾನಗರ ಪಾಲಿಕೆಯ ಸರ್ವ ಸಾಧಾರಣ ಸಭೆಯಲ್ಲಿ ಕರ್ನಾಟಕ ಪರವಾದ
ನಿರ್ಣಯಗಳನ್ನು ಅಂಗಿಕರಿಸುವಂತೆ ಆಗ್ರಹಿಸಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮಂಗಳವಾರದಿಂದ
ಕನ್ನಡ ಸಂಘಟನೆಗಳು ಪ್ರತ್ಯೇಕವಾಗಿ ಪಾಲಿಕೆಗೆ ತೆರಳಿ
ಮಹಾಪೌರರು ಮತ್ತು ಉಪಮಹಾಪೌರರಿಗೆ ಮನವಿ
ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಿತು.
ಉಪಮಹಾಪೌರರ ಹನುಮಂತ ಕೊಂಗಾಲಿ ಅವರು
ಕನ್ನಡ ಸಂಘಟನೆಗಳಿಗೆ ನೀಡಿದ ಭರವಸೆಯನ್ನು ಸಭೆಯು ಸ್ವಾಗತಿಸಿತಲ್ಲದೆ ಈ ಸಂಬಂಧ ಚರ್ಚಿಸಲು ಯಾರೇ ಆಹ್ವಾನ ನೀಡಿದರೂ ಚರ್ಚೆಗೆ ಸಿದ್ಧವೆಂದು ಸಭೆ ತಿಳಿಸಿತು. ಅದೇರೀತಿ
ರಾಜ್ಯೋತ್ಸವದ ಅನುದಾನದ ದುರ್ಬಳಕೆಯ ಬಗ್ಗೆ 12 ಕನ್ನಡ ಸಂಘಟನೆಗಳು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಗಡಿ ಉಸ್ತುವಾರಿ ಸಚಿವರಿಗೆ,
ಅನುದಾನ ನೀಡಿದ ಪ್ರವಾಸೋದ್ಯಮ ಕಾರ್ಯದರ್ಶಿಗೆ ದೂರು ನೀಡಿದ್ದು ಈ ಸಂಬಂಧ ಉನ್ನತ ಮಟ್ಟದಲ್ಲಿ ಚರ್ಚೆ ಹಾಗೂ ಕ್ರಮದ ಬಗ್ಗೆ ತಮಗೆ ಅಧಿಕೃತ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಬಲರಾಮ ಮಾಸೇನಟ್ಟಿ ಸಭೆಗೆ ತಿಳಿಸಿದರು.

ಈ ಸಂಬಂಧ ಬೆಂಗಳೂರಿಗೆ ನಿಯೋಗ ಒಯ್ದ ಸಂದರ್ಭದಲ್ಲಿ ದಾಖಲೆ ಸಹಿತ ಚರ್ಚಿಸಲು ಆಗ್ರಹಿಸಲಾಗುವದೆಂದು ಅಶೋಕ ಚಂದರಗಿ ತಿಳಿಸಿದರು.
ರಾಜ್ಯ ಸರಕಾರದ 7 ಕೋಟಿ ರೂ. ಅನುದಾನದಲ್ಲಿ ಬೆಳಗಾವಿಯ ನೆಹರು ನಗರದಲ್ಲಿ ಪಾಲಿಕೆಯ ಜಾಗೆಯಲ್ಲಿ ನಿರ್ಮಿಸಿದ ಕನ್ನಡ ಭವನದ ಬಗ್ಗೆ ಬೆಂಗಳೂರಿನಲ್ಲಿ
ನಡೆದಿರುವ ಬೆಳವಣಿಗೆಗಳನ್ನು ಅಶೋಕ ಚಂದರಗಿ ಸಭೆಗೆ ವಿವರಿಸಿದರು. ಈ ವಿಷಯವನ್ನು ಮುಖ್ಯಮಂತ್ರಿಗಳ, ಕನ್ನಡ ಮತ್ತು ಸಂಸ್ಕೃತಿ ಸಚಿವರ, ಮುಖ್ಯ ಕಾರ್ಯದರ್ಶಿಗಳ ಹಾಗೂ ರಾಜ್ಯದ ಹಿರಿಯ ಸಾಹಿತಿಗಳ, ಹೋರಾಟಗಾರರ ಗಮನಕ್ಕೆ ತರಲಾಗಿದ್ದು ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗಿದೆ ಎಂದು ಸಹ ಚಂದರಗಿ ಅವರು ತಿಳಿಸಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ 2024ರ ರಾಜ್ಯೋತ್ಸವ ದಿನದಂದು ಸ್ಥಾಪಿಸಲಾಗಿದ್ದ
ಹಲ್ಮಿಡಿ ಶಾಸನದ ಪ್ರತಿಕ್ರತಿಯು ನಾಪತ್ತೆಯಾದ ಪ್ರಕರಣದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಶಾಸನದ
ಮರು ಸ್ಥಾಪನೆಗೆ ಒಂದು ವಾರ ಗಡುವು ನೀಡಲಾಗಿತ್ತು. ಮತ್ತೆ ಒಂದು ವಾರ ಗಡುವು ವಿಸ್ತರಿಸಲು ಸಭೆ ನಿರ್ಧರಿಸಿತು. ಕನ್ನಡ ಭವನವು ಸರಕಾರದ ಆಸ್ತಿಯಾಗಿದ್ದು ಅದರ ರಕ್ಷಣೆ ಹಿರಿಯ ಅಧಿಕಾರಿಗಳ ಕರ್ತವ್ಯ. ಆದರೆ ಉದ್ದೇಶ ಪೂರ್ವಕವಾಗಿ ಖಾಸಗಿ ಸಂಘದವರ ಜೊತೆಗೆ
ಶಾಮೀಲಾದ ಅಧಿಕಾರಿಗಳ ಮುಖವಾಡವನ್ನು
ಮುಖ್ಯಮಂತ್ರಿ, ಗಡಿ ಉಸ್ತುವಾರಿ ಸಚಿವರು ಮತ್ತು ಮುಖ್ಯ
ಕಾರ್ಯದರ್ಶಿ ಎದುರು ಬಯಲು ಮಾಡಲು ಸಭೆಯಲ್ಲಿ ಅನೇಕರು ಆಗ್ರಹಿಸಿದರು.
ಬೇಡಿಕೆಗಳ ಬಗ್ಗೆ ಚರ್ಚಿಸಲು ಈ ವಾರಾಂತ್ಯದಲ್ಲಿ ಮತ್ತೆ ಸಭೆ ಸೇರಲು ನಿರ್ಧರಿಸಲಾಗಿದ್ದು, ಈ ಸಭೆಯಲ್ಲಿ
ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಧ್ಯಕ್ಷ
ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಧ್ಯಕ್ಷ ಬಲರಾಮ ಮಾಸೇನಾಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೇಗೌಡ ಬಣ ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ನಾಗೇಶ ಕೊಪ್ಪದ, ದಯಾನಂದ ಪವಾರ, ಈಶ್ವರಗೌಡ ಪಾಟೀಲ, ಸಣ್ಣತಮ್ಮ ಮೂಕನವರ, ಬಾಳಪ್ಪ ಗುಡಗನಟ್ಟಿ, ಮಲ್ಲಪ್ಪ ಗುಡಗನಟ್ಟಿ, ಅರವಿಂದಸಿಂಗ್ ನೇರಲಿ, ಸತೀಶ ನಾಯಕ, ಫಾರಿದಾ ನದಾಫ್ ಸಂಗೀತಾ ಕಾಂಬಳೆ, ರಾಣಿ ಬಿಟಿ ಮುಂತಾದವರು ಭಾಗಿಯಾಗಿದ್ದರು.