41 ಅಕ್ರಮ ಪಿಐಡಿ ರೂವಾರಿಗಳ ಮೇಲೆ ಕ್ರಮ ಯಾವಾಗ?
ತಪ್ಪು ಸಾಭಿತಾಗಿದ್ದರೂ ಕ್ರಮಕ್ಕೆ ಹಿಂಜರಿಕೆಯೇಕೆ?
ಪಾಲಿಕೆ ನಡೆ, ಪ್ರಭಾವಿಗಳ ಕಡೆಯೋ? ಜನಸಾಮಾನ್ಯರ ಕಡೆಯೋ?
ಬೆಳಗಾವಿ : ಮಹಾನಗರ ಪಾಲಿಕೆಯ ದಕ್ಷಿಣ ಕಂದಾಯ ಶಾಖೆಯ ವಾರ್ಡ್ ಸಂಖ್ಯೆ 9ರಲ್ಲಿ ಬಾಂಡ್ ಮೇಲಿನ, ಸುಮಾರು 41 ಆಸ್ತಿಗಳಿಗೆ ಪಾಲಿಕೆಯ ಮಹತ್ವದ ದಾಖಲೆ ಎನ್ನಲಾದ ಪಿಐಡಿಗಳನ್ನು ಅಲ್ಲಿನ ಸಿಬ್ಬಂದಿಗಳು ನಿಯಮಬಾಹಿರವಾಗಿ ನೀಡಿದ್ದರು.
ಈ ವಿಷಯ ಸುದ್ದಿ ಮಾಧ್ಯಮಗಳಲ್ಲಿ ಬಂದು, ಪಾಲಿಕೆಯ ಸ್ಥಾಯಿ ಹಾಗೂ ಸಾಮಾನ್ಯ ಸಭೆಗಳಲ್ಲಿ ಚರ್ಚೆಗೆ ಬಂದು, ಹಲವು ನಗರ ಸೇವಕರು ಇದರ ಬಗ್ಗೆ ಪ್ರಶ್ನೆ ಮಾಡಿ, ಅಧಿಕಾರಿಗಳಿಗಳಿಗೆ ಸಮಗ್ರ ಮಾಹಿತಿ ನೀಡಲು ಹೇಳುದರು, ಆಗ ಈ 41 ಪಿಐಡಿಗಳನ್ನು ಕಣ್ತಪ್ಪಿನಿಂದ ನಿಯಮಬಾಹಿರವಾಗಿ ಸಿಬ್ಬಂದಿಗಳು ನೀಡಿರುವ ವಿಚಾರ ಬಹಿರಂಗವಾಗಿತ್ತು.
ಇದಾದ ನಂತರ ವಿಷಯ ಮತ್ತಷ್ಟು ಗಂಭೀರತೆಯನ್ನು ಪಡೆದಿಕೊಂಡು, ಇದರ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಒಬ್ಬ ತನಿಖಾಧಿಕಾರಿಯನ್ನು ನೇಮಿಸಿದ್ದರು, ತನಿಖಾಧಿಕಾರಿ ತನಿಖೆ ಮಾಡಿ, ಕಂದಾಯ ಉಪ ಆಯುಕ್ತರಿಗೆ ವರದಿ ನೀಡಿದ್ದು, ಕಂದಾಯ ಉಪ ಆಯುಕ್ತರು ಅದನ್ನು ಆಯುಕ್ತರ ಗಮನಕ್ಕೆ ತದಿದ್ದರು.
ಆಯುಕ್ತರು ತನಿಖಾ ವರದಿಯನ್ನು ಓದಿದ ನಂತರ ತಪ್ಪು ಎಸಗಿದ ಸಿಬ್ಬಂದಿಗಳ ಮೇಲಿನ ಕ್ರಮಕ್ಕಾಗಿ, ಪಾಲಿಕೆಯ ಆಡಳಿತ ವಿಭಾಗಕ್ಕೆ ಆ ತನಿಖಾ ವರದಿ ಕಡತವನ್ನು ನೀಡಿದ್ದು, ಆಡಳಿತ ವಿಭಾಗಕ್ಕೆ ಹೋಗಿ ಸುಮಾರು 12ದಿನಗಳಾದರೂ ಇನ್ನೂ ಕ್ರಮದ ಬಗ್ಗೆ ವಿವರಣೆ ಬಂದಿಲ್ಲ, ನಿಧಾನಕ್ಕೆ ಕಾರಣ ಏನೋ ತಿಳಿದಿಲ್ಲ, ಆಡಳಿತ ವಿಭಾಗದಿಂದ ಆದಷ್ಟು ಬೇಗ ನಿರ್ಣಯ ಹೊರಬರಲಿ, ತಪ್ಪು ಎಸಗಿದವರಿಗೆ ಕ್ರಮ ಆಗಲಿ ಎಂದು ಜನಸಾಮಾನ್ಯರು ಕಾಯುತ್ತಿದ್ದಾರೆ.
ಜನಪರ, ಪಾರದರ್ಶಕ ಹಾಗೂ ಇಲಾಖೆಯ ನಿಯಮನುಸಾರವಾಗಿ ನಡೆದುಕೊಂಡು, ಪಾಲಿಕೆ ತನ್ನ ವೃತ್ತಿಪರತೆಯನ್ನು ಪಾಲಿಸಿ ಜನರ ವಿಶ್ವಾಸ ಗಳಿಸುತ್ತದೆಯೋ? ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕರಿಗೆ ಅನ್ಯಾಯ ಮಾಡಿ, ಅಮಾನ್ಯರಿಗೆ ಅವಕಾಶ ಮಾಡಿ ಕೊಟ್ಟ ದಕ್ಷಿಣ ಕಂದಾಯ ಶಾಖೆಯ ಸಿಬ್ಬಂದಿಗಳನ್ನು ರಕ್ಷಣೆ ಮಾಡುತ್ತದೆಯೋ ಎಂಬುದನ್ನು ಬೆಳಗಾವಿ ಜನತೆ ಕಾದು ನೋಡುತ್ತಿದ್ದಾರೆ..
ವರದಿ ಪ್ರಕಾಶ್ ಬಿ ಕೆ..