ಬಸವನ ಕುಡಚಿಯ ಕೆಎಚ್ ಬಿ ಕಾಲನಿಯಲ್ಲಿ ಬುದ್ಧ ಜಯಂತಿ ಆಚರಣೆ..
ಬೆಳಗಾವಿ : ನಗರದ ಬಸವನ ಕುಡಚಿಯ ಕೆ ಎಚ್ ಬಿ ಕಾಲನಿಯಲ್ಲಿ ಬುದ್ಧ ಜಯಂತಿ ಆಚರಿಸಲಾಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಅಲರವಾಡ ಮತ್ತು ಬಸವನ ಕುಡಚಿ ಗ್ರಾಮಗಳ ವಾರ್ಡ್ ಸಂಖ್ಯೆ 48ರ ನಗರ ಸೇವಕ ಬಸವರಾಜ ಮೊದಗೆಕರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನದಲ್ಲಿ ಬಿಎಸಎನಎಲ್ನ ನಿವೃತ್ತ ಅಧಿಕಾರಿ ಮಹಾದೇವ ನಡವಿನಮಣಿ ಇದ್ದರು.
ಗೌತಮ ಬುದ್ಧನ ಮೂರ್ತಿಗೆ ಹಾರ ಹಾಕಿ ಬುದ್ಧ ಪ್ರಾರ್ಥನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಕೆ ಎಚ್ ಬಿ ಕಾಲನಿಯ ರಾಜ ಸಿದ್ಧಾರ್ಥ ಉದ್ಯಾನವನದಲ್ಲಿ ಆಯೋಜಿಸಲಾಗಿತ್ತು.
ಬಸವರಾಜ ಮೊದಗೆಕರ್ ಅವರು ಮಾತನಾಡಿ, ಅಲರವಾಡ, ಬಸವನ ಕುಡಚಿ, ಡಿ ಎ ಕಾಲನಿ ಮತ್ತು ಕೆ ಎಚ್ ಬಿ ಕಾಲನಿ ಪ್ರದೇಶಗಳ ಸಮಸ್ಯೆಗಳನ್ನು ನಿವಾರಿಸಿ ಈ ಎಲ್ಲ ಪ್ರದೇಶಗಳ ಅಭಿವೃದ್ಧಿಗಾಗಿ ಸದಾ ಪ್ರಯತ್ನಿಸುವೆನೆಂದು ಹೇಳಿದರು. ಹಂತ ಹಂತವಾಗಿ ರಸ್ತೆ, ಒಳಚರಂಡಿ ಹಾಗೂ ವಿದ್ಯುತ್ ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ರಾಜ ಸಿದ್ಧಾರ್ಥ ಉದ್ಯಾನವನದ ಅಭಿವೃದ್ಧಿಗೂ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಸೇವಕ ಬಸವರಾಜ ಮೊದಗೆಕರ್ ಅವರನ್ನು ಶಾಲು ಹಾಗೂ ಶ್ರೀಫಲ ನೀಡಿ ಗೌರವಿಸಲಾಯಿತು. ಡಿ ಬಿ ಚನ್ನವಗೋಳ, ಸಿ ಪಿ ದೇವಋಷಿ, ಅರುಣ ಕಾಂಬಳೆ, ಎಂ ಕೆ ಮದಾರ್, ವಿ ಕೆ ಕುಡುಕುಡೆ, ಎಸ್ ಡಿ ಗುಡಿಮಣಿ, ಎಂ ವಿ ಕೇಲ್ಗೇರಿ, ಬಿ ಡಿ ಮೇತ್ರಿ, ಆರ್ ಎಸ್ ಕುರುಳಿ ಅವರು ವಿಶೇಷವಾಗಿ ಉಪಸ್ಥಿತರಿದ್ದರು.
ಅರುಣ ಕಾಂಬಳೆ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು, ಎಂ ಕೆ ಮದಾರ್ ಅವರು ಎಲ್ಲರನ್ನು ಸ್ವಾಗತಿಸಿದರು ಹಾಗೂ ಸಿ ಪಿ ದೇವಋಷಿ ಅವರು ಧನ್ಯವಾದಗಳನ್ನು ಅರ್ಪಿಸಿದರು.