ಪಾಲಿಕೆಯಲ್ಲಿ ಕನ್ನಡಪರ ಗೊತ್ತುವಳಿ ಮಂಡಿಸದ ಸದಸ್ಯರ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ..
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ..
ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ, ಬೆಳಗಾವಿ ಪಾಲಿಕೆಯಲ್ಲಿ ಕನ್ನಡಪರವಾದ ಗೊತ್ತುವಳಿಯನ್ನು ಅಂಗೀಕರಣ ಮಾಡುವಲ್ಲಿ ವಿಳಂಬ ತೋರುತ್ತಿರುವ ಪಾಲಿಕೆ ಸದಸ್ಯರ ಕನ್ನಡ ವಿರೋಧಿ ನೀತಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಮಂಗಳವಾರ ಪ್ರಾದೇಶಿಕ ಆಯುಕ್ತರು ಬೆಳಗಾವಿ ಇವರಿಗೆ ಸಂಘಟನೆಯಿಂದ ಮನವಿಯನ್ನು ಸಲ್ಲಿಸಲಾಗಿದೆ.
ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ನಿರಾಕರಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕನ್ನಡ ನಾಡು,ನುಡಿ,ಗಡಿ ಹಿತಾಸಕ್ತಿಯ ವಿರೋಧ ನಿಲುವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಮನವಿಯಲ್ಲಿ ಉಲ್ಲೇಖಸಲಾಗಿದೆ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ
ಅಂಗ, ಗಡಿವಿವಾದಕ್ಕೆ ಮಹಾಜನ ಆಯೋಗದ ವರದಿಯೇ
ಅಂತಿಮ ಎಂಬ ಗೊತ್ತುವಳಿ ಅಂಗೀಕರಿಸಬೇಕೆಂದು ಈಗಾಗಲೇ ಬೆಳಗಾವಿಯ 20 ಕ್ಕೂ ಅಧಿಕ ಕನ್ನಡ
ಸಂಘಟನೆಗಳು ಕಳೆದ ಮಾರ್ಚ 26 ರಿಂದ ಹೋರಾಟ ನಡೆಸಿವೆ. 2005 ರ ಅಕ್ಟೋಬರ್ 27 ರಂದು ಬೆಳಗಾವಿ
ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾಗಿ ಗೊತ್ತುವಳಿ ಸ್ವೀಕರಿಸಲಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ
ಸೇರಿಸುವ ಮೂಲಕ ಗಡಿವಿವಾದ ಬಗೆಹರಿಸಬೇಕೆಂದು
ಒತ್ತಾಯಿಸುವ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ.
2004 ರಿಂದ ಸುಪ್ರೀಂ ಕೋರ್ಟಿನಲ್ಲಿ ಸ್ವೀಕಾರವಾಗದೆ ಹೊಸ್ತಿಲಲ್ಲಿರುವ ಗಡಿವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರಸರಕಾರವು ಆಗಿನ ಬೆಳಗಾವಿ ಪಾಲಿಕೆಯ ಗೊತ್ತುವಳಿಯನ್ನು
ಪೂರಕ ದಾಖಲೆಯನ್ನಾಗಿ ಬಳಸುತ್ತಿದೆ. ಈ ಹಿನ್ನೆಲೆಯಲ್ಲಿ
ಈಗ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸಬೇಕೆಂದು
ಕನ್ನಡ ಸಂಘಟನೆಗಳು ಹೋರಾಟ ನಡೆಸಿವೆ.
ಎರಡು ತಿಂಗಳಿಂದ ಹೋರಾಟ ನಡೆಸಿದ್ದರೂ ಸಹ ಪಾಲಿಕೆಯಲ್ಲಿ 35 ಸದಸ್ಯರ ಬಹುಮತ ಹೊಂದಿರುವ
ಬಿಜೆಪಿ ಸದಸ್ಯರು ಗೊತ್ತುವಳಿ ಸ್ವೀಕರಿಸಿಲ್ಲ. ಇದು ಕನ್ನಡ ನಾಡು,ನುಡಿಗೆ ಬಗೆದ ದ್ರೋಹವಾಗಿದೆ. ಇದನ್ನು ತಾವು ಗಂಭೀರವಾಗಿ ಪರಿಗಣಿಸಬೇಕು. ಪಾಲಿಕೆಯ ಈ ನಡವಳಿಕೆಯ ಬಗ್ಗೆ ತಾವು ರಾಜ್ಯ ಸರಕಾರದ ಗಮನ ಸೆಳೆಯಬೇಕೆಂದು ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ಮಾಡಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡಲಾಯಿತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರಾದ ಈಶ್ವರಗೌಡ ಪಾಟೀಲ,
ಶರಣಯ್ಯ ಲಕ್ಕುಂಡಿ,
ರವಿ ಜಗಮಯ್ನವರ,
ಬಾಬು ಉಳವಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..