ಬೆಳಗಾವಿ : ಬೆಳಗಾವಿ ಎಜುಕೇಶನ್ ಸೊಸೈಟಿಯ ಶ್ರೀಮತಿ ಉಷಾತಾಯಿ ಗೊಗಟೆ ಕನ್ಯಾ ವಿದ್ಯಾಲಯದಲ್ಲಿ ಬುಧವಾರ, ಜೂನ್ 10 ರಂದು ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ವೇಣುಗ್ರಾಮ ಆಸ್ಪತ್ರೆಯ ಬಾಲರೋಗ ತಜ್ಞೆ ಡಾ. ಪ್ರಿಯದರ್ಶಿನಿ ಕುಲಕರ್ಣಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಮುಖ್ಯೋಪಾಧ್ಯಾಯರಾದ ಎಂ. ಕೆ. ಮದಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಶಾಲೆಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಶಾಲೆಯಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣದ ಬಗ್ಗೆ ವಿವರಿಸಿದರು. ಸರಕಾರ ವತಿಯಿಂದ ದೊರಕುವ ವಿಧ್ಯಾರ್ಥಿ ವೇತನದ ಮಾಹಿತಿ ನೀಡಿದರು..
ಡಾ. ಪ್ರಿಯದರ್ಶಿನಿ ಕುಲಕರ್ಣಿಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಅವರು ಮಾತನಾಡುತ್ತಾ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ಹೆಚ್ಚಿನ ಅಧ್ಯಯನ ಮಾಡಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯವೇ ನಿಜವಾದ ಸಂಪತ್ತು. ಆದ್ದರಿಂದ ಪೌಷ್ಟಿಕ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಅಗತ್ಯವೆಂದು ತಿಳಿಸಿದರು.
ಜೊತೆಗೆ ವೇಣುಗ್ರಾಮ ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಸೇವೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಅವರಿಗೆ ಶಾಲೆಯ ಪರವಾಗಿ ಸ್ಮರಣಿಕೆ ಹಾಗೂ ಶಾಲ್ ನೀಡಿ ಸನ್ಮಾನಿಸಿದರು.
ಚಿಂತಾಮಣಿ ಗ್ರಾಮೋಪಾಧ್ಯೆ ಅವರು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಬೋಧಿಸಿದ ಪಾಠಗಳನ್ನು ಪೋಷಕರು ತಮ್ಮ ಮಕ್ಕಳಿಂದ ಮನೆಯಲ್ಲಿ ಅಭ್ಯಾಸ ಮಾಡಿಸಬೇಕು ಎಂದು ಹೇಳಿದರು. ಮಕ್ಕಳ ಶೈಕ್ಷಣಿಕ ಪ್ರಗತಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಮನ್ವಿತ ಪ್ರಯತ್ನಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕಡೆಗೂ ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದರು.
ವೇಣುಗ್ರಾಮ ಆಸ್ಪತ್ರೆಯ ಪಿಆರ್‌ಒ ಜಗದೀಶ ಬೆಳಗಾವ್ಕರ್, ಯೋಗೇಶ್ ದೇಶಪಾಂಡೆ, ವರ್ಗ ಶಿಕ್ಷಕರಾದ ವೆಂಕಟೇಶ್ ಕುಲಕರ್ಣಿ ಹಾಗೂ ಶ್ರೀದೇವಿ ಕುಲಕರ್ಣಿ ಉಪಸ್ಥಿತರಿದ್ದರು.
ಪೂರ್ವಾ ಚೌಗುಲೆ ಸ್ವಾಗತಿಸಿದರು. ಗೌರಿ ಸಾವಂತ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಪಲ್ಲವಿ ಸಂಕೇಶ್ವರಿ ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಸೃಷ್ಟಿ ವಡಗಾವಿ ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.