ಕಂದಾಯ, ಅಭಿವೃದ್ಧಿ, ಅರೋಗ್ಯ ಸಮಿತಿಗಳನ್ನು ಕೇಳುವ ಹಕ್ಕು ಲೆಕ್ಕ ಸಮಿತಿಗಿಲ್ಲವೇ?
ಪಾಲಿಕೆಗೆ ನೂರಾರು ಕೋಟಿ ನಷ್ಟ ಆಗುತ್ತಿದ್ದರೆ ಲೆಕ್ಕ ಕಮಿಟಿ ಕೇಳಬಾರದೇ?
ನಗರ ಸೇವಕ ರವಿ ದೋತ್ರೆ ಪ್ರಶ್ನೆ..
ಬೆಳಗಾವಿ : ಪಾಲಿಕೆಯ ಕಂದಾಯ, ಅಭಿವೃದ್ಧಿ ಹಾಗೂ ಆರೋಗ್ಯ ಸಮಿತಿಗಳಿಗೆ ಲೆಕ್ಕ ಸಮಿತಿ ಸಂಬಂಧ ಇದೆಯೋ ಇಲ್ಲವೋ? ಲೆಕ್ಕ ಸಮಿತಿಯಲ್ಲಿ ಆದಯವೇ ಬರಲಿಲ್ಲ ಅಂದರೆ ಅಭಿವೃದ್ದಿ ಹೇಗೆ ಆಗುತ್ತದೆ? ಲೆಕ್ಕ ಸಮಿತಿಗೆ ಉಳಿದ ಮೂರು ಸಮಿತಿಗಳನ್ನು ಕೇಳುವ ಹಕ್ಕು ಇಲ್ಲವೇ? ನಮ್ಮ ಅಸ್ತಿಗಳನ್ನು ಯಾಕೆ ವಾಪಾಸ್ ತಗೆದುಕೊಳ್ಳುತ್ತಿಲ್ಲ? ಇವೆಲ್ಲ ಕೇಳಿದರೆ ಆಕ್ಟ್ ಹೇಳುತ್ತೀರಾ ನೀವು? ಪಾಲಿಕೆಗೆ ನೂರಾರು ಕೋಟಿ ಬರುವ ಆಸ್ತಿಗಳ ಬಗ್ಗೆ ಕೇಳಬಾರದೇ? ಹೀಗಾದರೆ ನಗರ ಅಭಿವೃದ್ಧಿ ಹೇಗೆ ಸಾಧ್ಯ? ಲೀಜ್ ಆಸ್ತಿಗಳನ್ನು ಮರಳಿ ಪಡೆಯಲು ವಿಳಂಬ ಮಾಡುತ್ತಿರುವ ಬಗ್ಗೆ ನನ್ನ ವೈಯಕ್ತಿಕ ವಿರೋಧವಿದೆ ಎಂದು ನಗರ ಸೇವಕ ರವಿ ದೋತ್ರೆ ಕಿಡಿ ಕಾರಿದ್ದಾರೆ..

ಬುಧವಾರ ಪಾಲಿಕೆಯ ಸ್ಥಾಯಿ ಸಮಿತಿ ಸಭಾ ಭವನದಲ್ಲಿ, ಲೆಕ್ಕಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಂದಕುಮಾರ ಮೀರಜಕರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಲೆಕ್ಕಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಲೆಕ್ಕ ಸಮಿತಿಯ ಸದಸ್ಯರಾಗಿ ಮಾತನಾಡಿದ ಅವರು, ಪಾಲಿಕೆಯ ಸುಮಾರು 78 ಆಸ್ತಿಗಳು ಖಾಸಗಿಯವರಿಗೆ ಲೀಜಿನಲ್ಲಿ ನೀಡಿದ್ದು, ಲೀಜ್ ಮುಗಿದು ವರ್ಷಗಳೇ ಕಳೆದರೂ ಆ ಅಸ್ತಿಗಳನ್ನು ಮರಳಿ ಪಡೆದಿಲ್ಲ, ವಿಳಂಬ ಆಗುತ್ತಿದೆ, ಇದರಿಂದ ಪಾಲಿಕೆಗೆ ನೂರಾರು ಕೋಟಿ ನಷ್ಟ ಆಗುತ್ತಿದ್ದು, ನಗರದ ಅಭಿವೃದ್ಧಿ ಆಗುತ್ತಿಲ್ಲ, ಅದಕ್ಕಾಗಿ ನಮ್ಮ ಲೆಕ್ಕ ಸ್ಥಾಯಿ ಸಮಿತಿಯಿಂದ ಕಂದಾಯ ಸಮಿತಿಗೆ ನಿರ್ದೇಶನ ಮಾಡುವ ಅಧಿಕಾರ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಕಂದಾಯ, ಅಭಿವೃದ್ಧಿ, ಆರೋಗ್ಯ ಸಮಿತಿಗಳು ವಿಷಯಗಳನ್ನು ತಮ್ಮಲ್ಲೇ ತೀರ್ಮಾನ ಮಾಡಿಕೊಳ್ಳುವದಾದರೆ, ಇನ್ಮುಂದೆ ಏನೇ ಬಿಲ್ಲುಗಳನ್ನು ಮಾಡಬೇಕೆಂದರೆ, ಕಮಿಟಿಯಲ್ಲಿ ಪಾಸ್ ಮಾಡಿಕೊಂಡು, ಕೌನ್ಸಿಲ್ ದಲ್ಲಿ ಇಟ್ಟು, ಅಲ್ಲಿ ತೀರ್ಮಾನ ತಗೆದುಕೊಂಡು ಆಮೇಲೆ ಮುಂದಿನ ಕ್ರಮ ತಗೆದುಕೊಳ್ಳಿ ಎಂದು ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು. ಆಗ ಉಪ ಮಹಾಪೌರ, ಪರಿಷತ್ ಕಾರ್ಯದರ್ಶಿ, ಕಾನೂನು ಸಲಹೆಗಾರ ಎಲ್ಲರೂ ಕೆಎಂಸಿ ಆಕ್ಟ್ 1976 ಪುಸ್ತಕದಲ್ಲಿಯ ನಿಯಮಗಳನ್ನು ನೋಡಿದರು.

ನಂತರ ಉತ್ತರಿಸಿದ ಕಂದಾಯ ಉಪ ಆಯುಕ್ತರು ಆಯಾ ಕಮಿಟಿಗಳು ಅವುಗಳ ವಿಷಯಕ್ಕೆ ಸೀಮಿತವಾಗಿವೆ, ಒಂದು ವೇಳೆ ಎರಡು ಕಮಿಟಿಗಳು ಚರ್ಚೆ ಮಾಡುವ ವಿಷಯ ಇದ್ದರೆ ಜಂಟಿ ಸಭೆಗಳನ್ನು ಮಾಡಿ ಚರ್ಚೆ ಮಾಡಬೇಕು ಎಂದರು, ಪರಿಷತ್ ಕಾರ್ಯದರ್ಶಿ ಮಾತನಾಡಿ ಕಂದಾಯ ವಿಭಾಗದಿಂದ ಪಾಲಿಕೆಗೆ ನಷ್ಟ ಆಗುತ್ತಿದ್ದರೆ, ಅದನ್ನು ಈ ಸಭೆಯಲ್ಲಿ ಚರ್ಚೆ ಮಾಡಿ, ಕಂದಾಯ ಕಮಿಟಿಗೆ ತಿಳಿಸಿ, ಇಲ್ಲಿ ರುಲಿಂಗ್ ಕೊಡುವದಿಲ್ಲ, ಚರ್ಚೆ ಮಾಡುತ್ತೇವೆ ಎಂದರು. ಆಗ ಮುಖ್ಯ ಲೆಕ್ಕಾಧಿಕಾರಿ ಮಾತನಾಡಿ ನಮಗೆ ಕಂದಾಯ ನಷ್ಟ ಆಗುತ್ತಿತ್ತು ಎಂದರೆ ನಾವು ನಿರ್ದೇಶನ ನೀಡಬಹುದು ಎಂದರು, ಆಗ ಉಪ ಮಹಾಪೌರ ಮಾತನಾಡಿ ನೀವು ಸಲಹೆ ನೀಡಬಹುದು, ಇದು ಈಗಾಗಲೇ ಪರಿಷತನಲ್ಲಿ ನಡೆದಿರುವ ವಿಷಯ, ಇದನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ ಹೇಗೆ ಮಾಡುತ್ತೀರಿ ಎಂದರು.

ಯಾರು ಏನೇ ಹೇಳಿದರೂ, ಅಧ್ಯಕ್ಷರೇ ನಾನು ಇದರ ಬಗ್ಗೆ ಮಾಹಿತಿ ಪಡೆಯುವೆ, ಏಕೆಂದರೆ ಇದು ನಮ್ಮ ಮಹಾನಗರ ಪಾಲಿಕೆ ಅಸ್ತಿಗಳು ಇವೆ, ಕೋಟಿ ಕೋಟಿ ನಷ್ಟ ಆಗುತ್ತಿದೆ, ಅಧಿಕಾರಿಗಳು ಎನ್ ಮಾಡ್ತಾ ಇದಾರೆ, ಈಆಸ್ತಿ, ಪಿಐಡಿ ಅಷ್ಟೇ ಮಾಡಿದರೆ ಹೇಗೆ? ಇಷ್ಟು ದಿನಗಳು ಹೇಳದ ಆಕ್ಟಗಳು ಈಗೇಕೆ? ನಮ್ಮ ಆಸ್ತಿಗಳನ್ನು ನೀವ್ಯಾಕೆ ತಗೋತಿಲ್ಲ ಅದನ್ನ ಹೇಳಿ, ನಿಮ್ಮ ನಡೆಗೆ ನನ್ನ ವೈಯಕ್ತಿಕ ವಿರೋಧ ಇದೆ ಎಂದರು.
ಕೊನೆಗೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಮಾತನಾಡುತ್ತಾ, ಸರ್ಕಾರದ ಸುತ್ತೋಲೆ ಪ್ರಕಾರ, ಒಂದು ಕಚೇರಿಯಲ್ಲಿ ಒಬ್ಬ ಮುಖ್ಯ ಲೆಕ್ಕಾಧಿಕಾರಿ ಮಾಡುವಂತಹ ಕಾರ್ಯಗಳನ್ನು ವಿವರಿಸಿದಾಗ, ಕಚೇರಿಯ ಹಣಕಾಸಿನ ಬಹುತೇಕ ಕಾರ್ಯಗಳಲ್ಲಿ ಪರಿಶೀಲನೆ, ಸಲಹೆ ಸೂಚನೆ, ತಪಾಸಣೆ, ವರದಿ ಸಲ್ಲಿಕೆ ಹೀಗೆ ಬಹುಮುಖ್ಯ ಕಾರ್ಯಗಳನ್ನು ಮುಖ್ಯ ಲೆಕ್ಕಾಧಿಕಾರಿ ಮಾಡಬೇಕಾಗುತ್ತದೆ ಎಂದರು..

ಒಟ್ಟಿನಲ್ಲಿ ಪಾಲಿಕೆಗೆ ಗರಿಷ್ಠ ಆದಾಯ ಬರುವ ನಿಟ್ಟಿನಲ್ಲಿ ಸ್ಥಾಯಿ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಆರೋಗ್ಯಕರ ವಾದ ವಿವಾದ ಮಾಡಿದ್ದು, ಮುಂಬರುವ ದಿನಗಳಲ್ಲಿ ನೂರಾರು ಕೋಟಿಯ ಪಾಲಿಕೆಯ ಆಸ್ತಿಗಳು ಮರಳಿ, ನಗರ ಮತ್ತಷ್ಟು ಅಭಿವೃದ್ಧಿ ಹೊಂದಿ, ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳು ಸಿಗುವಂತಾಗುವತ್ತ ಎಲ್ಲರ ಪ್ರಯತ್ನ ನಡೆಯಲಿ ಎಂಬುದು ನಗರವಾಸಿಗಳ ಆಶಯ…
ವರದಿ ಪ್ರಕಾಶ ಬಿ ಕೆ..