ಉಗಾರ ಕಾರ್ಖಾನೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಠರಾವು ಮಾಡಿ’
ಕಾಗವಾಡ: ತಾಲ್ಲೂಕಿನ ಉಗಾರ ಖುರ್ದ್ ಪಟ್ಟಣದ ಪರಿಸರ ರಕ್ಷಣೆ ಹಾಗೂ ಸಾರ್ವಜನಿಕ ಹಿತರಕ್ಷಣಾ ಹೋರಾಟಗಾರರು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ಮತ್ತು ಅಧ್ಯಕ್ಷೆ ಫಾತಿಮಾ ನದಾಫ್ ಅವರಿಗೆ ಗುರುವಾರ ಮನವಿ ಸಲ್ಲಿಸಿ, ದಿ ಉಗಾರ ಶುಗರ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಯಿಂದ ಉಂಟಾಗುತ್ತಿರುವ ಮಾಲಿನ್ಯ, ಸಾರ್ವಜನಿಕ ಸಾರಿಗೆ ದಟ್ಟಣೆ ನಿಯಂತ್ರಣ ಹಾಗೂ ಕರ್ನಾಟಕ ಪೌರಸಭೆಗಳ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಸ್ಥಳೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡ ರೈತರು ಹಾಗೂ ಸ್ಥಳೀಯ ಯುವಕರಿಗೆ ಕಾಯಂ ಉದ್ಯೋಗಾವಕಾಶ ಕಲ್ಪಿಸಲು ಪುರಸಭೆಯಲ್ಲಿ ಕಡ್ಡಾಯ ಠರಾವು ಜಾರಿಗೆ ತರುವಂತೆ ಒತ್ತಾಯಿಸಿದರು.
ಈ ವೇಳೆ ಚಂದ್ರಶೇಖರ್ ಘೋಳಪ್ಪನವರ್ ಮಾತನಾಡಿ, ಉಗಾರ್ ಸಕ್ಕರೆ ಹಾಗೂ ಎಥೆನಾಲ್ ಕಾರ್ಖಾನೆಯು ಉಗಾರ ಖುರ್ದ ವ್ಯಾಪ್ತಿಯ ಮಧ್ಯಭಾಗದಲ್ಲಿದ್ದು, ಕಳೆದ ಹಲವಾರು ವರ್ಷಗಳಿಂದ ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತಿದೆ. ಆದ್ದರಿಂದ ಪುರಸಭೆಗೆ ಇರುವ ಶಾಸನಬದ್ಧ ಅಧಿಕಾರದ ಪ್ರಕಾರ ಊರಿನ ಮಧ್ಯದಲ್ಲಿರುವ ಕಾರ್ಖಾನೆಯಿಂದಾಗುವ ಉಪದ್ರವಗಳನ್ನು ತಡೆಯಲು ಮತ್ತು ಅದಕ್ಕೆ ಸೂಕ್ತ ಪರಿಹಾರ ರೂಪದಲ್ಲಿ ಸೌಲಭ್ಯಗಳನ್ನು ಪಡೆಯಲು ನಿಯಮಗಳಲ್ಲಿ ಅವಕಾಶವಿದೆ ಎಂದರು.
ಮುಂಬರುವ ಸಾಮಾನ್ಯ ಸಭೆಯಲ್ಲಿ ಈ ಮೇಲಿನ ಎಲ್ಲಾ ಅಂಶಗಳನ್ನೊಳಗೊಂಡ ಅಧಿಕೃತ ಠರಾವನ್ನು ಸರ್ವಾನುಮತದಿಂದ ಪಾಸ್ ಮಾಡಿ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಗೆ ರವಾನಿಸಬೇಕು ಎಂದು ಹೇಳಿದರು.
ಪರಿಸರ ಹೋರಾಟಗಾರರಾದ ಚಂದ್ರಶೇಖರ ಘೋಳಪ್ಪನವರ, ಯೋಗೇಶ್ ಕುಂಬಾರ, ಸುನೀಲ ಉನ್ನಾಳೆ, ಮಹೇಶ ಮೆಟಕರಿ ಇದ್ದರು.