ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿಯಿಂದ ಪೊಲೀಸ್ ಚೌಕಿಗಳ ನಿರ್ಮಾಣ..

ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿಯಿಂದ ಪೊಲೀಸ್ ಚೌಕಿಗಳ ನಿರ್ಮಾಣ..

ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಪೊಲೀಸ್ ಚೌಕಿಗಳು ಅನುಕೂಲಕಾರಿ..

ಇದೆ ರೀತಿ ಬೇರೆ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಸಮರ್ಥವಾಗಿ ಜನಪರ ಕಾರ್ಯ ಮಾಡಲು ಅನುಕೂಲ..

ನಾರಾಯಣ ಬರಮನಿ, ಡಿಸಿಪಿ, ಬೆಳಗಾವಿ ನಗರ..

ಬೆಳಗಾವಿ : ನಗರದಲ್ಲಿ ಸುರಿವ ಮಳೆಯಲ್ಲಿ, ಸುಡುವ ಬಿಸಿಲಿನಲ್ಲಿ, ಹಬ್ಬ ಹರಿದಿನಗಳಲ್ಲಿ, ಜಯಂತಿ ಉತ್ಸವಗಳಲ್ಲಿ, ಗಲಾಟೆ ಗದ್ದಲಗಳಲ್ಲಿ, ಮಾರುಕಟ್ಟೆಯ ಸಂಚಾರಿ ಸಮಸ್ಯೆಗಳಲ್ಲಿ ಹತ್ತಾರು ದಿನಗಳ ಕಾಲ ನಿರಂತರ ಕರ್ತವ್ಯ ನಿರತರಾಗಿರುವ ನಮ್ಮ ಪೊಲೀಸ್ ಸಿಬ್ಬಂದಿಗಳು ಎಲ್ಲೋ ನೆರಳು ಕಂಡಲ್ಲಿ ನಿಂತು ತಮ್ಮ ದಣಿವು ಆರಿಸಿಕೊಳ್ಳುವ ಪರಿಸ್ಥಿತಿ ಇರುವಾಗ, ಇಂತಹ ಪೊಲೀಸ್ ಚೌಕಿಗಳು ನಮ್ಮ ಪೊಲೀಸ್ ಸಿಬ್ಬಂದಿಯ ಕಾರ್ಯದಕ್ಷತೆಗೆ ಮತ್ತಷ್ಟು ಅನುಕೂಲ ಆಗುತ್ತವೆ ಎಂದು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾರಾಯಣ ಬರಮನಿ ಅವರು ಹೇಳಿದ್ದಾರೆ.

ಗುರುವಾರ ಸಂಜೆ ನಗರದ ಖಡೆಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಂಬಳಿಕೂಟ ಹಾಗೂ ಕಾವೇರಿ ಕೊಡ್ರಿಂಕ್ಸ್ ಪಕ್ಕದಲ್ಲಿ ಹೊಸದಾಗಿ ನಿರ್ಮಿತವಾದ ಎರಡು ಪೊಲೀಸ್ ಚೌಕಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಎರಡು ಭಾಗಗಳಲ್ಲಿ ತುಂಬಾ ಸಂಚಾರ ದಟ್ಟನೆ ಇರುತ್ತಿದ್ದು, ಅನೇಕ ಮಹಾಪುರುಷರ ಜಯಂತಿಗಳು, ವಿಶೇಷವಾಗಿ ಗಣೇಶ ಹಬ್ಬದಲ್ಲಿ ನಮ್ಮ ಸಿಬ್ಬಂದಿಗಳು ಸುಮಾರು ಹನ್ನೆರಡು ಹದಿಮೂರು ದಿನಗಳ ಕಾಲ ನಿರಂತರ ಕೆಲಸ ಮಾಡಬೇಕಾದ ಸ್ಥಿತಿ ಇರುತ್ತದೆ, ಆಗ ಅವರಿಗೆ ಕುಳಿತುಕೊಂಡು ಸ್ವಲ್ಪ ಸುಧಾರಿಸಿಕೊಳ್ಳಲು ಒಳ್ಳೆಯ ಸ್ಥಳವೂ ಇರುವದಿಲ್ಲ, ಎಲ್ಲೋ ಅಂಗಡಿಯ ಕಟ್ಟೆ, ರಸ್ತೆ ಬದಿಯಲ್ಲಿ ನಿಂತು ಸುಧಾರಿಸಿಕೊಳ್ಳುವ ಸ್ಥಿತಿ ಇರುತ್ತದೆ.

ಅದೇರೀತಿ ಇತ್ತೀಚಿಗೆ ತುಂಬಾ ಬಿಸಿಲು ಹಾಗೂ ಅತಿಯಾದ ಮಳೆಗಳು ಕೂಡಾ ಬರುತ್ತಿವೆ, ಇದು ನಗರದ ಪ್ರಮುಖ ಜನನಿಬೀಡ ಸ್ಥಳವಾಗಿದ್ದು ವರ್ಷದಲ್ಲಿ ಸುಮಾರು ಎಂಟತ್ತು ಬಂದೋಬಸ್ತುಗಳು ಇಲ್ಲಿ ಇರುತ್ತವೆ, ಆಗ ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ಕುಳಿತುಕೊಳ್ಳಲು ಅನಾನುಕೂಲ ಆಗುತ್ತದೆ, ಅದನ್ನರಿತ ನಗರ ಸೇವಕ ಜಯತೀರ್ಥ ಸವದತ್ತಿ ಹಾಗೂ ಸಮರ್ಥ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿಯವರು ದೊಡ್ಡ ಮನಸ್ಸು ಮಾಡಿ ಪೊಲೀಸ್ ಸಿಬ್ಬಂದಿಗಳಿಗೆ ಅನುಕೂಲ ಆಗಲೆಂದು ಈ ಚೌಕಿಗಳನ್ನು ನಿರ್ಮಿಸಿ ಕೊಟ್ಟಿದ್ದು, ಇಲಾಖೆಯ ಪರವಾಗಿ ಇವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಇದೇ ರೀತಿ ಬೇರೆ ಬೇರೆ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದು ಬಂದರೆ, ಸ್ಥಳಾವಕಾಶ ಕಲ್ಪಿಸಿದ್ದೆ ಆದರೆ, ಬಂದೋಬಸ್ತು ಡ್ಯೂಟಿಗೆ ಬರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅನುಕೂಲ ಆಗುತ್ತದೆ, ಇತ್ತೀಚಿಗೆ ಬೆಳಗಾವಿಯಲ್ಲಿ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು ಅತೀ ವಿಜೃಂಭನೆಯಿಂದ ಆಗುತ್ತಿವೆ, ನಗರದ ಪ್ರಮುಖ ಜನನಿಬೀಡ ಸ್ಥಳಗಳಲ್ಲಿ ಮತ್ತೆ ಇಂತಹ ಅವಕಾಶ ಮಾಡಿ ಕೊಟ್ಟರೆ, ನಾವು ಕೂಡಾ ಮತ್ತಷ್ಟು ಸಮರ್ಥವಾಗಿ, ಜನಪರವಾಗಿ ಕೆಲಸ ಮಾಡಲು ಅನುಕೂಲ ಆಗುತ್ತದೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಬೆಳಗಾವಿ ಉತ್ತರದ ಮಾಜಿ ಶಾಸಕ ಅನಿಲ ಬೆನಕೆ ಅವರು, ನರಗುಂದಕರ ಭಾವೆ ಚೌಕ್ ಅಂದ್ರೆ ಇದು ನಗರದ ಕೇಂದ್ರ ಸ್ಥಳ, ಎಲ್ಲಾ ಮಹಾಪುರುಷರ ಜಯಂತಿಗಳು ಇಲ್ಲಿಂದಲೇ ಪ್ರಾರಂಭ ಆಗುತ್ತವೆ, ಇದು ಬಹಳ ದಿನಗಳಿಂದ ಜನರ ಬೇಡಿಕೆ ಇತ್ತು, ನಗರ ಸೇವಕ ಜಯತೀರ್ಥ ಸವದತ್ತಿ ಅವರ ಪ್ರಯತ್ನದಿಂದ ಹಾಗೂ ಅಜಯ ಸುನವಾಲ್ಕರ ಅವರ ಸಹಾಯದಿಂದ ಅವರ ಸಮರ್ಥ ಸೊಸೈಟಿಯಿಂದ ಎರಡು ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದು, ಇವರಿಬ್ಬರಿಗೂ ನಾನು ಅಭಿನಂದನೆ ಹಾಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಇನ್ನೂ ಈ ಎರಡು ಪೊಲೀಸ್ ಚೌಕಿಗಳ ನಿರ್ಮಾಣದ ಹೊಣೆಹೊತ್ತು ಮಾಡಿಕೊಟ್ಟಿರುವ ಸಮರ್ಥ ಸೊಸೈಟಿಯ ಮುಖ್ಯಸ್ಥರಾದ ಅಜಯ ಸೊನವಾಲ್ಕರ ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿಗಾಗಿ ನಾವು ಮಾಡಿದ್ದು ಇದೇನು ಬಹಳ ದೊಡ್ಡ ಮಾತಲ್ಲಾ, ನಮ್ಮ ಸಮಾಜಕ್ಕೆ, ಜನತೆಗೆ, ಪೊಲೀಸ್ ಸಿಬ್ಬಂದಿಗೆ ಒಳ್ಳೆಯದಾಗಲಿ ಎಂದು ಮಾಡಿದ್ದೇವೆ, ನಮ್ಮ ಶಕ್ತಿ ಇದ್ದಷ್ಟು ನಾವು ಮಾಡಿದ್ದೇವೆ, ಇಂತಹ ಕೆಲಸಕ್ಕೆ ಎಲ್ಲರೂ ಮನಸ್ಸು ಮಾಡಬೇಕು ಎಂದರು.

ಇನ್ನು ನಗರ ಸೇವಕ ಜಯತೀರ್ಥ ಸವದತ್ತಿ ಅವರು ಮಾತನಾಡಿ, ಸಮರ್ಥ ಸೊಸೈಟಿ ಅವರು ಎರಡು ಕಡೆಗಳಲ್ಲಿ ಇಂತಹ ಅಚ್ಚುಕಟ್ಟಾದ ಪೋಲಿಸ್ ಚೌಕಿಗಳನ್ನು ನಿರ್ಮಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು, ಇಲ್ಲಿ ಪೊಲೀಸ್ ಚೌಕಿಗಳು ತುಂಬಾ ಅವಶ್ಯಕ ಆಗಿದ್ದವು, ಇಲ್ಲಿ ಸೇವೆ ಮಾಡುವ ಪೊಲೀಸ್ ಸಿಬ್ಬಂದಿಗಳ ಸಮಸ್ಯೆ ನಾನು ನೋಡಿದ್ದೆ, ಅದಕ್ಕೆ ಸಮರ್ಥ ಸೊಸೈಟಿ ಅವರ ಹತ್ತಿರ ವಿಷಯ ಪ್ರಸ್ತಾಪಿಸಿದ ಕೂಡಲೇ ಒಪ್ಪಿಗೆ ನೀಡಿ, ನಾವು ಸಹಾಯ ಮಾಡುತ್ತೇವೆ ಎಂದು ಮುಂದೆ ಬಂದು ಇಂತಹ ಉತ್ತಮ ಕಾರ್ಯ ಮಾಡಿದ್ದಕ್ಕೆ ಇಡೀ ಸಮಾಜದ ಪರವಾಗಿ ಅವರಿಗೆ ಧನ್ಯವಾದಗಳು ಎಂದರು..

ವರದಿ ಪ್ರಕಾಶ್ ಬಿ ಕೆ…

Leave a Reply

Your email address will not be published. Required fields are marked *